ADVERTISEMENT

ಮೇಯರ್‌– ಉಪಮೇಯರ್‌ ನಡುವೆ ಮತ್ತೆ ಶೀತಲ ಸಮರ

ಉಪಮೇಯರ್‌ ಆಸನದಲ್ಲಿ ಕೂರದಿರಲು ಭದ್ರೇಗೌಡ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 22 ಜೂನ್ 2019, 10:28 IST
Last Updated 22 ಜೂನ್ 2019, 10:28 IST
   

ಬೆಂಗಳೂರು: ಮೇಯರ್‌ಗಂಗಾಂಬಿಕೆ ಹಾಗೂ ಉಪ ಮೇಯರ್‌ ಭದ್ರೇಗೌಡ ನಡುವೆ ಮತ್ತೆ ಶೀತಲ ಸಮರ ಆರಂಭವಾಗಿದೆ.

ಪಾಲಿಕೆಯ ಕಲ್ಯಾಣ ಕಾರ್ಯಕ್ರಮದಡಿ ನಾಗಪುರ ವಾರ್ಡ್‌ನಲ್ಲಿ ನಿರ್ಮಿಸಿರುವ 50 ಮನೆಗಳ ಫಲಾನುಭವಿಗಳಿಗೆ ಕೀಲಿ ಕೈ ವಿತರಣೆ ಹಾಗೂ ಹೊಲಿಗೆ ಯಂತ್ರ ವಿತರಣೆ ಕಾರ್ಯಕ್ರಮಕ್ಕೆ ಮೇಯರ್‌ ಅವರು ಶುಕ್ರವಾರ ಗೈರು ಹಾಜರಾಗಿರುವುದಕ್ಕೆ ಉಪಮೇಯರ್‌ ಸಿಟ್ಟಾಗಿದ್ದಾರೆ. ಮುಂದಿನ ಪಾಲಿಕೆ ಕೌನ್ಸಿಲ್‌ ಸಭೆಯಲ್ಲಿ ಉಪಮೇಯರ್‌ ಅವರ ಆಸನದಲ್ಲಿ ಕುಳಿತುಕೊಳ್ಳದೇ, ಮೇಯರ್‌ ನಡೆ ವಿರುದ್ಧ ಪ್ರತಿಭಟನೆ ನಡೆಸಲು ಭದ್ರೇಗೌಡ ನಿರ್ಧರಿಸಿದ್ದಾರೆ.

‘ಉಪಮುಖ್ಯಮಂತ್ರಿ ಜಿ.ಪರಮೇಶ್ವರ, ಮೇಯರ್‌ ಗಂಗಾಂಬಿಕೆ ಹಾಗೂ ಆಡಳಿತ ಪಕ್ಷದ ನಾಯಕ ಅಬ್ದುಲ್‌ ವಾಜಿದ್‌ ಅವರು ಮೂವರೂ ಕಾರ್ಯಕ್ರಮದಲ್ಲಿ ಭಾಗವಹಿಸಿಲ್ಲ. ಅನಿವಾರ್ಯ ಕಾರಣಗಳಿಂದ ಹಾಜರಾಗಲು ಸಾಧ್ಯವಾಗದಿದ್ದರೆ ಈ ಬಗ್ಗೆ ನನಗೆ ತಿಳಿಸಬೇಕಿತ್ತು. ಅವರ ಈ ನಡೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮಾಡಿರುವ ಅಪಮಾನ’ ಎಂದು ಭದ್ರೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಕಲ್ಯಾಣ ಕಾರ್ಯಕ್ರಮದಲ್ಲಿ ನಿರ್ಮಿಸಿರುವ ಮನೆಗಳು ಹೈಟೆನ್ಷನ್‌ ತಂತಿಗಳ ಕೆಳಗೆ ಇವೆ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಉಪಮೇಯರ್‌, ‘ಈ ಆರೋಪದಲ್ಲಿ ಹುರುಳಿಲ್ಲ. ಪಾಲಿಕೆ ಆಯುಕ್ತರು ಕೂಡಾ ಸ್ಥಳ ಪರಿಶೀಲನೆ ನಡೆಸಿದ್ದು, ಎಲ್ಲವೂ ಸರಿಯಾಗಿದೆ ಎಂದು ತಿಳಿಸಿದ್ದಾರೆ. ಮೇಯರ್‌ ಅವರು ಕಾರ್ಯಕ್ರಮಕ್ಕೆ ಹಾಜರಾಗುತ್ತಿದ್ದರೆ ವಸ್ತುಸ್ಥಿತಿ ಏನೆಂಬುದು ಅವರಿಗೆ ತಿಳಿಯುತ್ತಿತ್ತು’ ಎಂದರು.

‘ಕಾರ್ಯಕ್ರಮಕ್ಕೆ ಗೈರಾದ ಬಗ್ಗೆ ಜಿ.ಪರಮೇಶ್ವರ ಅವರಲ್ಲಿ ಮಾತನಾಡಿದ್ದೇನೆ. ಅವರ ಕ್ಷೇತ್ರದ ನೀರಾವರಿ ಯೋಜನೆಗೆ ಸಂಬಂಧಿಸಿದಂತೆ ತುರ್ತು ಸಭೆ ನಡೆಸಬೇಕಾಗಿದ್ದ ಬಂದಿದ್ದರಿಂದ ಕಾರ್ಯಕ್ರಮಕ್ಕೆ ಬರಲಾಗಿಲ್ಲ. ಇನ್ನೊಮ್ಮೆ ವಾರ್ಡ್‌ಗೆ ಭೇಟಿ ನೀಡುವುದಾಗಿ ಭರವಸೆ ನೀಡಿದ್ದಾರೆ’ ಎಂದರು.

ಭದ್ರೇಗೌಡ ಹಾಗೂ ಗಂಗಾಂಬಿಕೆ ನಡುವೆ ಈ ಹಿಂದೆಯೂ ಮನಸ್ತಾಪ ಉಂಟಾಗಿತ್ತು. ‘ಮೇಯರ್‌ ಅವರು ಕಾಮಗಾರಿ ಪರಿಶೀಲನೆಗೆ ಹೋಗುವಾಗ ಹಾಗೂ ಕೆಲವು ಕಚೇರಿಗಳಿಗೆ ದಿಢೀರ್‌ ಭೇಟಿ ನೀಡುವಾಗ ನನಗೆ ಆಹ್ವಾನ ನೀಡುತ್ತಿಲ್ಲ’ ಎಂದು ಉಪಮೇಯರ್‌ ಅವರು ಬಹಿರಂಗವಾಗಿಯೇ ಹೇಳಿಕೆ ನೀಡಿದ್ದರು.

ಬಳಿಕ ಅವರಿಬ್ಬರೂ ಜೊತೆಯಲ್ಲೇ ಕಾಮಗಾರಿ ಪರಿಶೀಲನೆಗೆ ಹಾಜರಾಗುತ್ತಿದ್ದರು.

***

ಕಾರಣಾಂತರಗಳಿಂದ ಕಾರ್ಯಕ್ರಮಕ್ಕೆ ಹೋಗಲು ಸಾಧ್ಯವಾಗಿಲ್ಲ. ಎರಡೂ ಪಕ್ಷಗಳ ನಡುವೆ ಸೌಹಾರ್ದಯುತ ವಾತಾವರಣ ಈಗಲೂ ಇದೆ. ಉಪಮೇಯರ್‌ ಜೊತೆ ಚರ್ಚಿಸಿ ಗೊಂದಲ ಬಗೆಹರಿಸಲು ಪ್ರಯತ್ನಿಸುತ್ತೇನೆ
–ಗಂಗಾಂಬಿಕೆ, ಮೇಯರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.