ADVERTISEMENT

ಜಕ್ಕೂರು ಕೆರೆಗೆ ಮೇಯರ್ ಭೇಟಿ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2019, 19:04 IST
Last Updated 8 ಫೆಬ್ರುವರಿ 2019, 19:04 IST
ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ ಅವರು, ಜಕ್ಕೂರು ಕೆರೆ ಪ್ರದೇಶಕ್ಕೆ ಗುರುವಾರ ಭೇಟಿ ನೀಡಿ ಪರಿಶೀಲಿಸಿದರು. ಬಿಬಿಎಂಪಿ ಆಡಳಿತ ಪಕ್ಷದ ನಾಯಕ ಅಬ್ದುಲ್ ವಾಜಿದ್, ಜೆಡಿ(ಎಸ್) ನಾಯಕಿ ನೇತ್ರಾ ನಾರಾಯಣ ಇದ್ದರು.
ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ ಅವರು, ಜಕ್ಕೂರು ಕೆರೆ ಪ್ರದೇಶಕ್ಕೆ ಗುರುವಾರ ಭೇಟಿ ನೀಡಿ ಪರಿಶೀಲಿಸಿದರು. ಬಿಬಿಎಂಪಿ ಆಡಳಿತ ಪಕ್ಷದ ನಾಯಕ ಅಬ್ದುಲ್ ವಾಜಿದ್, ಜೆಡಿ(ಎಸ್) ನಾಯಕಿ ನೇತ್ರಾ ನಾರಾಯಣ ಇದ್ದರು.   

ಯಲಹಂಕ: ಜಕ್ಕೂರು ಕೆರೆ ಪ್ರದೇಶವನ್ನು ಒತ್ತುವರಿ ಮಾಡಿಕೊಂಡು ನಿವೇಶನ ನಿರ್ಮಾಣ ಮಾಡಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಬಿಬಿಎಂಪಿ ಮೇಯರ್‌ ಗಂಗಾಂಬಿಕೆ ಮಲ್ಲಿಕಾರ್ಜುನ್‌ ಕೆರೆ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

‘ಮೀಸಲು ಪ್ರದೇಶವನ್ನೂ ಬಿಡದೆ ಕೆಲವು ಪ್ರಭಾವಿಗಳು ಕೆರೆಯ ಸುತ್ತ ಬಡಾವಣೆಗಳನ್ನು ನಿರ್ಮಿಸುತ್ತಿದ್ದಾರೆ. ಅಮಾಯಕರನ್ನು ವಂಚಿಸಿ, ವಿವಾದದ ನಿವೇಶನಗಳನ್ನು ಹಂಚಲು ಸಿದ್ಧತೆ ಮಾಡಿಕೊಂಡಿದ್ದಾರೆ. ಜಕ್ಕೂರು-ಸಂಪಿಗೇಹಳ್ಳಿ ಎರಡೂ ಕೆರೆಗಳು ಸುಮಾರು 105 ಎಕರೆ ವಿಸ್ತೀರ್ಣ ಇವೆ. ಈಗ ಬಿಡಿಎ ನೀಡಿರುವ ದಾಖಲೆಗಳ ಪ್ರಕಾರ 83 ಎಕರೆ ವಿಸ್ತೀರ್ಣವಿದೆ. ಇನ್ನುಳಿದ ಜಾಗ ಒತ್ತುವರಿದಾರರ ಪಾಲಾಗಿದೆ. ದಿನೇ ದಿನೇ ಕೆರೆ ಜಾಗ ಕಡಿಮೆಯಾಗು
ತ್ತಿದೆ’ ಎಂದು ಸ್ಥಳೀಯರು ವಿವರಿಸಿದರು.

‘ಕೆರೆಯನ್ನು ಬಿಡಿಎ ವತಿಯಿಂದ₹ 24 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಕೆರೆಯ ಸುತ್ತ ತಂತಿಬೇಲಿ, ಉದ್ಯಾನ, 4 ಕಿಲೋಮೀಟರ್ ನಡಿಗೆ ಪಥ, ಕುಳಿತುಕೊಳ್ಳಲು ಆಸನ, ಕಲ್ಯಾಣಿ ನಿರ್ಮಿಸಿ, ಭದ್ರತಾ ಸಿಬ್ಬಂ ದಿಯನ್ನು ನಿಯೋಜಿಸಲಾಗಿದೆ. ಬಿಡಿಎ ಅಧಿಕಾರಿಗಳು ಪ್ರಭಾವಿಗಳ ಜೊತೆಗೆ ಶಾಮೀಲಾಗಿ ನಿವೇಶನಗಳನ್ನು ವಿಂಗಡಿಸಿ, ಮಾರಾಟ ಮಾಡಲು ಮುಂದಾಗಿದ್ದಾರೆ’ ಎಂದು ಸ್ಥಳೀಯರು ಆರೋಪಿಸಿದರು.

ADVERTISEMENT

ಮೇಯರ್ ಮಾತನಾಡಿ, ‘ಬಿಡಿಎ ಮತ್ತು ಜಲಮಂಡಳಿ ಅಧಿಕಾರಿಗಳನ್ನು ಕಚೇರಿಗೆ ಆಹ್ವಾನಿಸಿ ಸಭೆ ನಡೆಸಿ, ಕೆರೆಯ ಸಂಪೂರ್ಣ ವಿವರ ಪಡೆದು ಸಮಗ್ರವಾಗಿ ಚರ್ಚಿಸುತ್ತೇನೆ. ಈಗಾಗಲೆ ನಿವೇಶನಗಳನ್ನು ಖರೀದಿಸಿರುವವರಿಗೆ ಪರ್ಯಾಯ ನಿವೇಶನ ನೀಡುವ ಬಗ್ಗೆ ಮಾತನಾಡುತ್ತೇನೆ. ಕೆರೆಗೆ ಕೊಳಚೆ ನೀರು ಸೇರದಂತೆ ತಡೆಯಲು ತುರ್ತಾಗಿ ಕ್ರಮ ಕೈಗೊಳ್ಳಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

‘ಕೆರೆ ಅಭಿವೃದ್ಧಿಗೆ ವಿನಿಯೋಗಿ ಸಲಾದ ₹ 24 ಕೋಟಿ ಮೊತ್ತದಲ್ಲಿ ಯಾವುದೇ ಕಾಮಗಾರಿ ಸರಿಯಾಗಿ ನಡೆದಿಲ್ಲ. ಮಾತ್ರವಲ್ಲ ಇದರಲ್ಲಿ ಅಕ್ರಮ ನಡೆದಿರುವ ಶಂಕೆಯೂ ಇದೆ’ ಎಂದು ಸಂಪಿಗೆಹಳ್ಳಿ ನಿವಾಸಿ ಲಕ್ಷ್ಮಣ್‌ ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.