ADVERTISEMENT

ಸುಲಿಗೆ: ಎಂಬಿಎ ಪದವೀಧರ ಬಂಧನ

​ಪ್ರಜಾವಾಣಿ ವಾರ್ತೆ
Published 24 ಜುಲೈ 2022, 20:33 IST
Last Updated 24 ಜುಲೈ 2022, 20:33 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಸಾರ್ವಜನಿಕರನ್ನು ಅಡ್ಡ ಗಟ್ಟಿ ಸುಲಿಗೆ ಮಾಡಿ ಪರಾರಿ ಯಾಗಿದ್ದ ನಾಲ್ವರು ಆರೋಪಿಗಳನ್ನು ಗಿರಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಶ್ರೀಧರ್ (29) ಹಾಗೂ ನಿತಿನ್ ರಾಜ್ (18) ಬಂಧಿತರು. ಇನ್ನಿಬ್ಬರು ಬಾಲಕರಾಗಿದ್ದು, ಅವರನ್ನು ಬಾಲ ನ್ಯಾಯ ಮಂಡಳಿ ಎದುರು ಹಾಜರುಪಡಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಆರೋಪಿ ಶ್ರೀಧರ್, ಎಂಬಿಎ ಪದವೀಧರ. ಹಲವೆಡೆ ಸಾಲ ಮಾಡಿ, ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ಹಣ ಕಳೆದುಕೊಂಡಿದ್ದ. ಸಾಲಗಾರರ ಕಿರುಕುಳ ಹೆಚ್ಚಾಗುತ್ತಿದ್ದಂತೆ,‌ ಮನೆ ತೊರೆದಿದ್ದ. ಸಹಚರರ ಜೊತೆ ಸೇರಿ ಸುಲಿಗೆ ಹಾಗೂ ಕಳ್ಳತನ ಎಸಗಲಾರಂಭಿಸಿದ್ದ’ ಎಂದೂ ತಿಳಿಸಿದರು.

ADVERTISEMENT

‘ಬ್ಯಾಂಕ್ ಕಾಲೊನಿಯಲ್ಲಿ ಜೂನ್ 2ರಂದು ಲೋಕೇಶ್ ಎಂಬುವರನ್ನು ಅಡ್ಡಗಟ್ಟಿದ್ದ ಆರೋಪಿಗಳು, ಮಾರಕಾಸ್ತ್ರ ತೋರಿಸಿ ಬೆದರಿಸಿದ್ದರು. ಚಿನ್ನದ ಉಂಗುರ, ಸರ, ಪರ್ಸ್‌ನಲ್ಲಿದ್ದ ₹ 20 ಸಾವಿರ ನಗದು ಹಾಗೂ ಮೊಬೈಲ್ ಸುಲಿಗೆ ಮಾಡಿ ಪರಾರಿಯಾಗಿದ್ದರು’ ಎಂದೂ ಹೇಳಿದರು.

ಮಲೆ ಮಹದೇಶ್ವರ ದೇವಸ್ಥಾನಕ್ಕೆ ಹೋಗಿ ಪೂಜೆ: ‘ಕೃತ್ಯದ ಬಳಿಕ ಆರೋಪಿ ಗಳು, ಗೋವಾಗೆ ಹೋಗಿ ಕೆಲ ದಿನ ಮೋಜು–ಮಸ್ತಿ ಮಾಡಿದ್ದರು. ನಂತರ, ಪಶ್ಚಾತಾಪವಾಗಿ ಮಲೆಮಹದೇಶ್ವರ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ್ದರು. ಆರೋಪಿಗಳ ಬಗ್ಗೆ ಸುಳಿವು ಸಿಗುತ್ತಿದ್ದಂತೆ ವಿಶೇಷ ಕಾರ್ಯಾಚರಣೆ ನಡಸಿ ಬಂಧಿಸಲಾಗಿದೆ’ ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.