ಫೇಸ್‌ಬುಕ್, ಇನ್‌ಸ್ಟಾಗ್ರಾಮ್
ರಾಯಿಟರ್ಸ್ ಚಿತ್ರ
ಬೆಂಗಳೂರು: ‘ಇಂದಿನ ಡಿಜಿಟಲ್ ಜಗತ್ತಿನಲ್ಲಿ ಸಂಗೀತ, ನೃತ್ಯಗಳಂತಹ ಕಲೆಗಳನ್ನು ಉಳಿಸಿ ಬೆಳೆಸಲು ಮಾಧ್ಯಮಗಳ ಪ್ರೋತ್ಸಾಹ ಅತ್ಯಗತ್ಯ’ ಎಂದು ಕರ್ನಾಟಕ ಸಂಗೀತ ವಿದ್ವಾಂಸ ಆರ್.ಕೆ.ಪದ್ಮನಾಭ ಅಭಿಪ್ರಾಯಪಟ್ಟರು.
ಶ್ರೀಮದ್ ವಾದಿರಾಜ ಆರಾಧನಾ ಟ್ರಸ್ಟ್, ಶಾರದಾ ಕಲಾಕೇಂದ್ರ ಜಂಟಿಯಾಗಿ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಾಗ್ಗೇಯಕಾರರ ಆರಾಧನೋತ್ಸವ ಕಾರ್ಯಕ್ರಮದಲ್ಲಿ ‘ಸುಧಾ’ ವಾರಪತ್ರಿಕೆಯ ಮುಖ್ಯ ಉಪ ಸಂಪಾದಕಿ ಉಮಾ ಅನಂತ್ ಅವರ ‘ಸಂಗೀತ ಸಾಂಗತ್ಯ’ ಪುಸ್ತಕ ಬಿಡುಗಡೆ ಮಾಡಿ, ಮಾತನಾಡಿದರು.
‘ಕಲಾ ಪ್ರಕಾರಗಳು ಉಳಿಯಬೇಕಾದರೆ ಪತ್ರಿಕೆಗಳು ಸ್ವಲ್ಪಮಟ್ಟಿನ ಜಾಗವನ್ನಾದರೂ ಕಲೆಗೆ ಮೀಸಲಿಡಬೇಕು. ಇತ್ತೀಚೆಗೆ ಮಾಧ್ಯಮಗಳಲ್ಲಿ ಸಾಂಸ್ಕೃತಿಕ ಕ್ಷೇತ್ರಕ್ಕೆ ಅಷ್ಟಾಗಿ ಆದ್ಯತೆ ಸಿಗುತ್ತಿಲ್ಲ. ಇದರಿಂದ ಸಾಂಸ್ಕೃತಿಕ ಜಗತ್ತು ಬಡವಾಗುತ್ತಿದೆಯೋ ಎಂಬ ಆತಂಕ ಕಾಡುತ್ತಿದೆ’ ಎಂದರು.
‘ಕಲಾವಿದರಿಗೆ ಗೌರವ, ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿಯಾದರೂ ಮಾಧ್ಯಮಗಳು ಸಾಂಸ್ಕೃತಿಕ ಲೋಕವನ್ನು ಶ್ರೀಮಂತಗೊಳಿಸಬೇಕು. ಹೀಗಾದಲ್ಲಿ ಮಾತ್ರ ಮುಂದಿನ ಪೀಳಿಗೆಗೆ ಸಂಗೀತ ಸೇರಿ ವಿವಿಧ ಕಲಾ ಪ್ರಕಾರಗಳು ಉಳಿಯುತ್ತವೆ’ ಎಂದು ಹೇಳಿದರು.
ಉಮಾ ಅನಂತ್, ‘ಸಂಗೀತಗಾರರಿಗೆ ಕೇಳುಗರೇ ಜೀವಾಳವಿದ್ದಂತೆ, ಬರಹಗಾರರು ಹಾಗೂ ಪತ್ರಿಕೆಗಳಿಗೆ ಓದುಗರೇ ಜೀವಾಳ. ಈ ನಿಟ್ಟಿನಲ್ಲಿ ಯುವ ಪೀಳಿಗೆಯಲ್ಲಿ ಓದುವ ಹವ್ಯಾಸದ ಜೊತೆಗೆ ಸುಮಧುರ ಸಂಗೀತ ಕೇಳುವ ಹವ್ಯಾಸವೂ ಇರಬೇಕು. ಆಗ ಮಾತ್ರ ಸಮಾಜದಲ್ಲಿ ಸದ್ಭಾವನೆ ಮೂಡಲು ಸಾಧ್ಯ’ ಎಂದರು.
ಬಳಿಕ ಬೆಂಗಳೂರು ಸಹೋದರರಾದ ಹರಿಹರನ್ ಹಾಗೂ ಅಶೋಕ್ ಅವರ ಯುಗಳ ಗಾಯನ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.