ADVERTISEMENT

ಕಂಠೀರವ ಕ್ರೀಡಾಂಗಣದಲ್ಲಿ ಕ್ವಾರಂಟೈನ್: ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್

​ಪ್ರಜಾವಾಣಿ ವಾರ್ತೆ
Published 11 ಜೂನ್ 2020, 21:30 IST
Last Updated 11 ಜೂನ್ 2020, 21:30 IST
ಸುಧಾಕರ್
ಸುಧಾಕರ್   

ಬೆಂಗಳೂರು: ‘ಕೊರೊನಾ ಸೋಂಕು ಶಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಕಂಠೀರವ ಕ್ರೀಡಾಂಗಣ, ಸಮಾವೇಶ ಕೇಂದ್ರಗಳು ಸೇರಿದಂತೆ ನಗರದ ವಿವಿಧೆಡೆ ಕ್ವಾರಂಟೈನ್ ವ್ಯವಸ್ಥೆ ಮಾಡಲಾಗುವುದು’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ತಿಳಿಸಿದರು.

ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕ್ವಾರಂಟೈನ್ ಸಂಬಂಧ ವಿವಿಧ ಸ್ಥಳಗಳನ್ನು ಗುರುತಿಸಿ, ಮಾತುಕತೆ ನಡೆಸಲಾಗುತ್ತಿದೆ. ನಗರದಲ್ಲಿ ವರದಿಯಾಗಿರುವ ಒಟ್ಟು ಪ್ರಕರಣಗಳಲ್ಲಿ ಶೇ50 ರಷ್ಟು ಮಂದಿಗುಣಮುಖರಾಗಿ, ಮನೆಗೆ ತೆರಳಿದ್ದಾರೆ. ಇನ್ನುಳಿದ ಶೇ 50ರಷ್ಟು ಪ್ರಕರಣಗಳಲ್ಲಿ ಶೇ 97 ರಷ್ಟು ಮಂದಿಯಲ್ಲಿ ರೋಗಲಕ್ಷಣಗಳು ಬಹಿರಂಗವಾಗಿ ಗೋಚರಿಸಿಲ್ಲ. ಹಾಗಾಗಿ ಶೇ 3ರಷ್ಟು ಮಂದಿಗೆ ಮಾತ್ರ ವಿಶೇಷ ಚಿಕಿತ್ಸೆ ನೀಡಲಾಗುತ್ತಿದೆ’ ಎಂದರು.

‘ಶೀತಜ್ವರ ಮಾದರಿಯ ಅನಾ ರೋಗ್ಯ ಸಮಸ್ಯೆಯಿಂದ (ಐಎಲ್‌ಐ) ಬಳಲುತ್ತಿರುವವರು ಕೂಡಲೇ ಹತ್ತಿರದ ಜ್ವರದ ಕ್ಲಿನಿಕ್‌ಗೆ ತೆರಳಿ, ತಪಾಸಣೆ ಮಾಡಿಸಿಕೊಳ್ಳಬೇಕು. 60 ವರ್ಷ ಮೇಲ್ಪಟ್ಟವರಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಆರೋಗ್ಯ ಕಡೆ ಹೆಚ್ಚಿನ ಗಮನ ನೀಡಬೇಕು. ಕುಟುಂಬದ ಸದಸ್ಯರು ಕೂಡ ವೃದ್ಧರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು’ ಎಂದು ಹೇಳಿದರು.

ADVERTISEMENT

ಕೋವಿಡ್‌ ಆಸ್ಪತ್ರೆ; ಅನ್ಯ ರೋಗಿಗಳಿಗೂ ಚಿಕಿತ್ಸೆ
‘ಕಂಟೈನ್‌ಮೆಂಟ್ ಪ್ರದೇಶಗಳ ವ್ಯಾಖ್ಯಾನ ಬದಲಾಗಿದೆ. ಮೊದಲು ಕೋವಿಡ್ ಪ್ರಕರಣ ವರದಿಯಾದ ಪೂರ್ಣ ವಾರ್ಡ್‌ಗಳನ್ನು ಅಥವಾ 1 ಕಿ.ಮೀ. ವ್ಯಾಪ್ತಿಯ ಪ್ರದೇಶವನ್ನು ಕಂಟೈನ್‌ಮೆಂಟ್ ಆಗಿ ಘೋಷಿಸಲಾಗುತ್ತಿತ್ತು. ಈಗ ಅದು ಸೋಂಕಿತ ವ್ಯಕ್ತಿಯ ಮನೆಗೆ ಮಾತ್ರ ಸೀಮಿತವಾಗಿದೆ’ ಎಂದು ಡಾ.ಕೆ. ಸುಧಾಕರ್ ತಿಳಿಸಿದರು.

‘ನಗರದಲ್ಲಿ ಅನ್ಯ ರೋಗಗಳಿಂದ ಬಳಲುತ್ತಿರುವವರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಕೋವಿಡ್‌ ಆಸ್ಪತ್ರೆಗಳಲ್ಲಿಯೂ ಅವರಿಗೆ ಚಿಕಿತ್ಸೆ ವ್ಯವಸ್ಥೆ ಮಾಡಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.