ADVERTISEMENT

ಬೆಂಗಳೂರು: ವೈದ್ಯಕೀಯ ವಿದ್ಯಾರ್ಥಿ ಮೃತದೇಹ ಪತ್ತೆ; ಕೊಲೆ ಶಂಕೆ

​ಪ್ರಜಾವಾಣಿ ವಾರ್ತೆ
Published 27 ಜುಲೈ 2021, 4:14 IST
Last Updated 27 ಜುಲೈ 2021, 4:14 IST

ಬೆಂಗಳೂರು: ಪ್ರತಿಷ್ಠಿತ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ಸೈಯದ್ ಉಮೈದ್ ಅಹಮ್ಮದ್ (30) ಎಂಬುವರು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ.

‘ಸುಲ್ತಾನ್ ಪಾಳ್ಯದ ನಿವಾಸಿ ಉಮೈದ್ ಅಹಮ್ಮದ್, ಹುಬ್ಬಳ್ಳಿಯ ಮಹಾವಿದ್ಯಾಲಯವೊಂದರಲ್ಲಿ ವೈದ್ಯಕೀಯ ಸ್ನಾತಕೋತ್ತರ ವ್ಯಾಸಂಗ ಮಾಡುತ್ತಿದ್ದರು. ಕಸ್ತೂರಿನಗರ ಬಳಿಯ ರೈಲು ಹಳಿ ಮೇಲೆ ಅವರ ಮೃತದೇಹ ಸೋಮವಾರ ಬೆಳಿಗ್ಗೆ ಪತ್ತೆಯಾಗಿದೆ’ ಎಂದು ಬೈಯಪ್ಪನಹಳ್ಳಿ ರೈಲ್ವೆ ಪೊಲೀಸ್ ಠಾಣೆ ಮೂಲಗಳು ಹೇಳಿವೆ.

’ವಿದ್ಯಾರ್ಥಿ ಕತ್ತಿನಲ್ಲಿ ಚಾಕುವಿನಿಂದ ಇರಿದ ಗುರುತು ಇದೆ. ಯಾರೋ ದುಷ್ಕರ್ಮಿಗಳು, ವಿದ್ಯಾರ್ಥಿಯನ್ನು ಕೊಂದು ಮೃತದೇಹವನ್ನು ಹಳಿ ಬಳಿ ಎಸೆದು ಹೋಗಿರುವ ಸಾಧ್ಯತೆ ಇದೆ. ಪ್ರಕರಣ ದಾಖಲಿಸಿಕೊಂಡು ಎಲ್ಲ ಆಯಾಮದಲ್ಲಿ ತನಿಖೆ ಮುಂದುವರಿಸಲಾಗಿದೆ’ ಎಂದೂ ಮೂಲಗಳು ತಿಳಿಸಿವೆ.

ADVERTISEMENT

ಹಬ್ಬಕ್ಕೆ ಬಂದಿದ್ದರು: ‘ಹುಬ್ಬಳ್ಳಿಯಲ್ಲಿ ಉಳಿದುಕೊಂಡು ವ್ಯಾಸಂಗ ಮಾಡುತ್ತಿದ್ದ ಉಮೈದ್ ಅಹಮ್ಮದ್, ಬಕ್ರೀದ್ ಹಬ್ಬಕ್ಕಾಗಿ ಬೆಂಗಳೂರಿನಲ್ಲಿರುವ ತಮ್ಮ ಮನೆಗೆ ಇತ್ತೀಚೆಗಷ್ಟೇ ಬಂದಿದ್ದರು. ಹಬ್ಬ ಮುಗಿಸಿ ಕುಟುಂಬದ ಜೊತೆ ಕೆಲದಿನ ಕಾಲ ಕಳೆದಿದ್ದ ಉಮೈದ್, ಹುಬ್ಬಳ್ಳಿಗೆ ಹೋಗುವುದಾಗಿ ಪೋಷಕರಿಗೆ ಹೇಳಿ ಶನಿವಾರ ಮನೆ ಬಿಟ್ಟಿದ್ದರು’ ಎಂದೂ ಪೊಲೀಸ್ ಮೂಲಗಳು ಹೇಳಿವೆ.

‘ಉಮೈದ್ ಅಹಮ್ಮದ್ ಅವರ ಮೊಬೈಲ್ ಭಾನುವಾರ ಸ್ವಿಚ್ ಆಫ್ ಆಗಿತ್ತು. ರಾತ್ರಿಯಾದರೂ ಸ್ವಿಚ್ ಆನ್ ಆಗಿರಲಿಲ್ಲ. ಸೋಮವಾರ ಬೆಳಿಗ್ಗೆ ಮೃತದೇಹ ನೋಡಿದ್ದ ಸಾರ್ವಜನಿಕರು, ಠಾಣೆಗೆ ಮಾಹಿತಿ ನೀಡಿದ್ದರು. ವಿದ್ಯಾರ್ಥಿ ಪರ್ಸ್‌ನಲ್ಲಿ ಆಧಾರ್ ಕಾರ್ಡ್‌ ಇತ್ತು. ಅದರ ಮೂಲಕ ಪೋಷಕರ ವಿಳಾಸ ಪತ್ತೆ ಮಾಡಿ ವಿಷಯ ತಿಳಿಸಲಾಯಿತು’ ಎಂದೂ ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.