ADVERTISEMENT

ಮರು ಪ್ಯಾಕಿಂಗ್: ನವೋದ್ಯಮಗಳ ವಿರುದ್ಧ ಕ್ರಮಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2025, 16:06 IST
Last Updated 2 ಆಗಸ್ಟ್ 2025, 16:06 IST
.
.   

ಬೆಂಗಳೂರು: ‘ಕೆಲ ನವೋದ್ಯಮಗಳು ಔಷಧಗಳನ್ನು ಮರು ಪ್ಯಾಂಕಿಂಗ್ ಮಾಡಿ, ಮಾರಾಟ ಮಾಡುತ್ತಿವೆ. ರೋಗಿಗಳ ಸುರಕ್ಷತೆ ದೃಷ್ಟಿಯಿಂದ ಅಂತಹ ನವೋದ್ಯಮಗಳ ಮೇಲೆ ಕ್ರಮ ಕೈಗೊಳ್ಳಬೇಕು’ ಎಂದು ಬೆಂಗಳೂರು ಜಿಲ್ಲಾ ಔಷಧ ವ್ಯಾಪಾರಿಗಳ ಸಂಘವು (ಬಿಡಿಸಿಡಿಎ) ಭಾರತೀಯ ಔಷಧ ಮಹಾನಿಯಂತ್ರಕರನ್ನು (ಡಿಸಿಜಿಐ) ಆಗ್ರಹಿಸಿದೆ.

ಈ ಬಗ್ಗೆ ಸಂಘವು ಪತ್ರ ಬರೆದಿದೆ. ‘ಆನ್‌ಲೈನ್ ಔಷಧ ಮಾರಾಟ ವೇದಿಕೆಗಳು ಹಾಗೂ ಕೆಲ ನವೋದ್ಯಮಗಳು ಔಷಧ ಮತ್ತು ಕಾಂತಿವರ್ಧಕ ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸಿ, ಔಷಧ ಮಾರಾಟ ಮಾಡುತ್ತಿವೆ. ಸ್ಟ್ರಿಪ್‌ಗಳಲ್ಲಿರುವ ಮಾತ್ರೆಗಳನ್ನು ಮರು ಪ್ಯಾಕಿಂಗ್‌ ಮಾಡಿ, ಮಾರಾಟ ಮಾಡುವುದರಿಂದ ಔಷಧದ ವಿವರ ಲಭ್ಯವಾಗುವುದಿಲ್ಲ. ಸಾರ್ವಜನಿಕರ ಆರೋಗ್ಯವನ್ನು ಅಪಾಯಕ್ಕೆ ದೂಡುವ ನಡೆಯಾಗಿದೆ. ಇದು ಕಾನೂನು ಬಾಹಿರವಾಗಿದ್ದು, ಸಂಬಂಧಪಟ್ಟವರ ಮೇಲೆ ಕ್ರಮ ಕೈಗೊಳ್ಳಬೇಕು’ ಎಂದು ಬಿಡಿಸಿಡಿಎ ಅಧ್ಯಕ್ಷ ಬಿ. ತಿರುನಾವುಕ್ಕರಸು ತಿಳಿಸಿದ್ದಾರೆ. 

‘ಈ ರೀತಿ ಕ್ರಮದಿಂದ ಬ್ಯಾಚ್‌ ಸಂಖ್ಯೆ, ಔಷಧದ ಅವಧಿ ಮುಕ್ತಾಯದ ಮಾಹಿತಿ, ಗರಿಷ್ಠ ಮಾರಾಟ ದರ ಸೇರಿ ವಿವಿಧ ವಿವರಗಳು ರೋಗಿಗೆ ಲಭ್ಯವಾಗುವುದಿಲ್ಲ. ಇದರಿಂದ ಔಷಧ ವ್ಯವಸ್ಥೆಯ ಮೇಲೆ ಕೆಟ್ಟ ಅಭಿಪ್ರಾಯ ಮೂಡಿ, ಜನರು ವಿಶ್ವಾಸಾರ್ಹತೆ ಕಳೆದುಕೊಳ್ಳುವ ಸಾಧ್ಯತೆ ಇದೆ. ವೈದ್ಯರ ಚೀಟಿ ಇಲ್ಲದೆಯೂ ಆಲ್‌ನೈನ್ ವೇದಿಕೆಗಳಲ್ಲಿ ಔಷಧಗಳನ್ನು ಮಾರಾಟ ಮಾಡಲಾಗುತ್ತಿದೆ. ಶೇ 50 ರಷ್ಟು ರಿಯಾಯಿತಿ ಎಂಬ ಜಾಹೀರಾತುಗಳನ್ನು ನೀಡಿ, ಜನರ ದಿಕ್ಕು ತಪ್ಪಿಸಲಾಗುತ್ತಿದೆ’ ಎಂದು ಹೇಳಿದ್ದಾರೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.