ಧ್ಯಾನ ( ಸಾಂಕೇತಿಕ ಚಿತ್ರ)
ಬೆಂಗಳೂರು: ‘ಸದ್ಗುರು ಅವರ ನೇತೃತ್ವದಲ್ಲಿ ನಡೆಸಲಾಗುತ್ತಿರುವ ‘ಸಂಯಮ ಸಾಧನ’ ಎಂಬ ಧ್ಯಾನದಿಂದ ಮಿದುಳಿನ ವಯಸ್ಸನ್ನು ಸರಾಸರಿ 5.9 ವರ್ಷಗಳಷ್ಟು ಹಿಮ್ಮುಖಗೊಳಿಸಬಹುದು ಎಂಬುದು ಅಧ್ಯಯನದಿಂದ ದೃಢಪಟ್ಟಿದೆ’ ಎಂದು ಈಶಾ ಫೌಂಡೇಷನ್ ತಿಳಿಸಿದೆ.
ಶುಕ್ರವಾರ ಇಲ್ಲಿ ಫೌಂಡೇಷನ್ ಪರವಾಗಿ ಮಾತನಾಡಿದ ನಿಮ್ಹಾನ್ಸ್ ನರವಿಜ್ಞಾನ ವಿಭಾಗದ ಸಂಶೋಧಕ ಡಾ.ಸಾಕೇತ್, ‘ಹಾರ್ವರ್ಡ್ ಮೆಡಿಕಲ್ ಸ್ಕೂಲ್, ದಕ್ಷಿಣ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ, ಇಂಡಿಯಾನಾ ವಿಶ್ವವಿದ್ಯಾಲಯದ ಸಂಶೋಧಕರನ್ನು ಒಳಗೊಂಡ ತಂಡವು ಈ ಅಧ್ಯಯನ ನಡೆಸಿದೆ. ಫೌಂಡೇಷನ್‌ನ ಯೋಗ ಕೇಂದ್ರದಲ್ಲಿ ನಡೆಸಲಾಗುತ್ತಿರುವ ‘ಸಂಯಮ ಧ್ಯಾನ’ ಎಂಟು ದಿನಗಳ ಶಿಬಿರಗಳಲ್ಲಿ ಭಾಗವಹಿಸಿದ ಸಾವಿರಾರು ಮಂದಿಯನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಈ ಧ್ಯಾನದಿಂದ ಉತ್ತಮ ನಿದ್ದೆ, ಮಾನಸಿಕ ಒತ್ತಡ ಇಳಿಕೆ ಹಾಗೂ ಮನೋ ಆರೋಗ್ಯ ಸುಧಾರಣೆ ಸಾಧ್ಯವಾಗಲಿದೆ. ಪರಿಣಾಮ, ಮಿದುಳಿನ ಆರೋಗ್ಯ ವೃದ್ಧಿಯಾಗಲಿದೆ’ ಎಂದು ಹೇಳಿದರು.
‘ವ್ಯಕ್ತಿಯ ನಿದ್ದೆಯನ್ನು ಆಧರಿಸಿ, ‘ಎಲೆಕ್ಟ್ರೋ ಎನ್ಸೆಫಲೋಗ್ರಾಮ್ (ಇಇಜಿ) ಸ್ಕ್ಯಾನ್’ ಹಾಗೂ ಎಂಆರ್‌ಐ ಸ್ಕ್ಯಾನ್ ಬಳಸಿ ಮಿದುಳಿನ ವಯಸ್ಸು ಹಿಮ್ಮುಖ ಆಗುವುದನ್ನು ಗುರುತಿಸಲಾಗಿದೆ. ‘ಶಾಂಭವಿ ಮಹಾಮುದ್ರ ಕ್ರಿಯೆ’ಯ ನಿಯಮಿತ ಅಭ್ಯಾಸವು ನಿದ್ದೆಗೆ ಸಂಬಂಧಿಸಿದ ಮಿದುಳಿನ ಅನೇಕ ತರಂಗ ಮಾದರಿಗಳನ್ನು ಮರುಸೃಷ್ಟಿಸಿ, ನಿದ್ದೆಯ ಗುಣಮಟ್ಟವನ್ನು ಹೆಚ್ಚಿಸಲಿದೆ ಎನ್ನುವುದೂ ಅಧ್ಯಯನದಿಂದ ದೃಢಪಟ್ಟಿದೆ. ಈ ಅಭ್ಯಾಸ ಅನುಸರಿಸಿದ ಕಾರ್ಪೊರೇಟ್ ನೌಕರರ ಒತ್ತಡವು ಶೇ 50ರಷ್ಟು ಇಳಿಕೆಯಾಗಿದೆ’ ಎಂದರು.
‘ಈ ಅಧ್ಯಯನ ವರದಿಯು ‘ಮೈಂಡ್‌ಫುಲ್’ ಜರ್ನಲ್‌ನಲ್ಲಿ ಪ್ರಕಟವಾಗಿದೆ. ಮಿದುಳಿನ ಚಟುವಟಿಕೆಗಳ ಬಗ್ಗೆ ನಿಗಾ ವಹಿಸಲು ಅಧ್ಯಯನಕ್ಕೆ ಒಳಗಾದವರಿಗೆ ‘ಇಇಜಿ ಹೆಡ್‌ಬ್ಯಾಂಡ್’ ಅಳವಡಿಸಲಾಗಿತ್ತು. ಇದರಿಂದ ನಿಖರ ದತ್ತಾಂಶ ಸಂಗ್ರಹ ಸಾಧ್ಯವಾಯಿತು. ಈ ಧ್ಯಾನದಿಂದ ಮಿದುಳಿನ ಮೇಲಿನ ಒತ್ತಡ ಕಡಿಮೆಯಾಗುವ ಜತೆಗೆ, ‘ಅಲ್ಜಮೈರ್’, ‘ಡಿಮೆನ್ಶಿಯಾ’ದಂತಹ (ಮರೆಗುಳಿತನ) ಕಾಯಿಲೆಗಳ ಅಪಾಯ ಕಡಿಮೆಯಾಗಲಿದೆ’ ಎಂದು ಹೇಳಿದರು.
ಈಶಾ ಯೋಗಾ ಕೇಂದ್ರದದ ಸ್ವಾಮಿ ಪ್ರಬೋಧ, ಈಶಾ ಫೌಂಡೇಷನ್‌ನ ಲತಾ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.