ADVERTISEMENT

ಗ್ರೇಟರ್ ಬೆಂಗಳೂರು: ಭೂಸ್ವಾಧೀನಕ್ಕೆ ವಿರೋಧ

ಟೌನ್‌ಶಿಪ್‌ ಯೋಜನೆಗೆ ವಿರೋಧ; ಭೂ ಸ್ವಾಧೀನದ ವಿರುದ್ಧ ಪಾದಯಾತ್ರೆಗೆ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2025, 0:15 IST
Last Updated 12 ಮಾರ್ಚ್ 2025, 0:15 IST
ರಾಮನಗರ ತಾಲ್ಲೂಕಿನ ಬಿಡದಿ ಹೋಬಳಿ ವ್ಯಾಪ್ತಿಯಲ್ಲಿ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಟೌನ್‌ಶಿಫ್ ನಿರ್ಮಾಣಕ್ಕೆ ಭೂ ಸ್ವಾಧೀನ ವಿರೋಧಿಸಿ ಹೊಸೂರು ಗ್ರಾಮದ ಮದ್ದೂರಮ್ಮ ದೇವಸ್ಥಾನದ ಆವರಣದಲ್ಲಿ ಮಂಗಳವಾರ ನಡೆದ ಸ್ಥಳೀಯ ಗ್ರಾಮಸ್ಥರ ಸಭೆಯಲ್ಲಿ ಮಹಿಳೆಯೊಬ್ಬರು ಅಭಿಪ್ರಾಯ ಹಂಚಿಕೊಂಡರು. ವಿವಿಧ ಗ್ರಾಮಗಳ ಸ್ಥಳೀಯ ಮುಖಂಡರು ಇದ್ದಾರೆ
ರಾಮನಗರ ತಾಲ್ಲೂಕಿನ ಬಿಡದಿ ಹೋಬಳಿ ವ್ಯಾಪ್ತಿಯಲ್ಲಿ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಟೌನ್‌ಶಿಫ್ ನಿರ್ಮಾಣಕ್ಕೆ ಭೂ ಸ್ವಾಧೀನ ವಿರೋಧಿಸಿ ಹೊಸೂರು ಗ್ರಾಮದ ಮದ್ದೂರಮ್ಮ ದೇವಸ್ಥಾನದ ಆವರಣದಲ್ಲಿ ಮಂಗಳವಾರ ನಡೆದ ಸ್ಥಳೀಯ ಗ್ರಾಮಸ್ಥರ ಸಭೆಯಲ್ಲಿ ಮಹಿಳೆಯೊಬ್ಬರು ಅಭಿಪ್ರಾಯ ಹಂಚಿಕೊಂಡರು. ವಿವಿಧ ಗ್ರಾಮಗಳ ಸ್ಥಳೀಯ ಮುಖಂಡರು ಇದ್ದಾರೆ   

ಬಿಡದಿ (ರಾಮನಗರ): ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಜಿಬಿಡಿಎ) ಟೌನ್‌ಶಿಫ್ ನಿರ್ಮಾಣಕ್ಕೆ ತಾಲ್ಲೂಕಿನ ಬಿಡದಿ ಹೋಬಳಿ ಸುತ್ತಮುತ್ತ 9,600 ಎಕರೆ ಭೂ ಸ್ವಾಧೀನಕ್ಕೆ ವಿರೋಧ ವ್ಯಕ್ತಪಡಿಸಿರುವ ಕೆಲ ಗ್ರಾಮಸ್ಥರು, ಭೂ ಸ್ವಾಧೀನದ ವಿರುದ್ಧ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ನಡೆಸಲು ನಿರ್ಧರಿಸಿದರು.

ಯೋಜನೆ ವಿರೋಧಿಸಿ ಭೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರು ಇಲ್ಲಿನ ಹೊಸೂರು ಗ್ರಾಮದ ಮದ್ದೂರಮ್ಮ ದೇವಸ್ಥಾನದ ಆವರಣದಲ್ಲಿ ಮಂಗಳವಾರ ಸಭೆ ಸೇರಿ ಮುಂದಿನ ಹೋರಾಟದ ರೂಪುರೇಷೆಗಳ ಕುರಿತು ಚರ್ಚಿಸಿದರು. ಹೊಸೂರು ಅಥವಾ ಭೈರಮಂಗಲದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಶೀಘ್ರದಲ್ಲೇ ಪಾದಯಾತ್ರೆ ನಡೆಸಿ ಡಿ.ಸಿ.ಗೆ ಮನವಿ ಕೊಡಲು ನಿರ್ಣಯ ಕೈಗೊಂಡರು.

ಸಮಿತಿ ರಚನೆ: ಹೋರಾಟವನ್ನು ಪಕ್ಷಾತೀತವಾಗಿ ಹಾಗೂ ರಾಜಕೀಯ ರಹಿತವಾಗಿ ಮುನ್ನಡೆಸಲು ಜಿಬಿಡಿಎ ವ್ಯಾಪ್ತಿಗೆ ಸೇರಿಸಿರುವ ಪ್ರತಿ ಗ್ರಾಮಗಳಿಂದ ತಲಾ ಮೂವರನ್ನು ಒಳಗೊಂಡ ಹೋರಾಟ ಸಮಿತಿ ರಚಿಸಲು ಮುಖಂಡರು ನಿರ್ಧರಿಸಿದರು. ಸಮಿತಿಯಲ್ಲಿ ಹೋರಾಟದ ಸ್ವರೂಪವನ್ನು ಸಮಿತಿಯಲ್ಲಿ ಚರ್ಚಿಸಿ ಅಂಗೀಕರಿಸಿ ಮುಂದುವರಿಯಲು ತೀರ್ಮಾನಿಸಿದರು.

ADVERTISEMENT

ಜಿಬಿಡಿಎ ವ್ಯಾಪ್ತಿಗೆ ಸೇರಿರುವ ಭೈರಮಂಗಲ ಪಂಚಾಯಿತಿ ಗ್ರಾಮಗಳಾದ ಭೈರಮಂಗಲ, ಬನ್ನಿಗಿರಿ, ಮಂಡಲಹಳ್ಳಿ, ಕಂಚುಗಾರನಹಳ್ಳಿ ಪಂಚಾಯಿತಿಯ ಕಂಚುಗಾರನಹಳ್ಳಿ, ಕಂಚುಗಾರನಹಳ್ಳಿ ಕಾವಲು, ಕೆಂಪಯ್ಯನಪಾಳ್ಯ, ಹೊಸೂರು, ಅರಾಳುಸಂದ್ರ, ಕೆ.ಜೆ. ಗೊಲ್ಲರಪಾಳ್ಯ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು, ರೈತರು, ಸ್ತ್ರೀ ಶಕ್ತಿ ಮತ್ತು ಸ್ವಸಹಾಯ ಸಂಘಗಳ ಸದಸ್ಯರು, ರೈತ ಸಂಘದ ಮುಖಂಡರು ಸೇರಿದಂತೆ ಹಲವರು ಸಭೆಯಲ್ಲಿ ಭಾಗವಹಿಸಿದ್ದರು.

ಒಪ್ಪಿಗೆ ಪಡೆಯದೆ ನಿರ್ಧಾರ: ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಟೌನ್‌ಶಿಫ್ ನಿರ್ಮಾಣ ಯೋಜನೆಗೆ ಸ್ಥಳೀಯರ ಒಪ್ಪಿಗೆ ಮತ್ತು ವಿಶ್ವಾಸ ಪಡೆಯದೆ ಗ್ರಾಮಗಳನ್ನು ಜಿಬಿಡಿಎ ವ್ಯಾಪ್ತಿಗೆ ಸೇರಿಸಲಾಗಿದೆ. ಯಾರಿಗೋ ಅನುಕೂಲ ಮಾಡಿಕೊಡಲು ಮನಸ್ಸಿಗೆ ಬಂದಂತೆ ಸರ್ಕಾರ ನಿರ್ಧಾರ ಕೈಗೊಂಡಿದೆ. ಇದರ ವಿರುದ್ಧ ನಾವು ಸುಮ್ಮನೆ ಕೂರುವುದಿಲ್ಲ. ದುಡ್ಡಿನ ಆಸೆಗೆ ಭೂಮಿ ಕೊಟ್ಟರೆ ಮುಂದೊಂದು ದಿನ ನಾವೆಲ್ಲರೂ ಬೀದಿ ಪಾಲಾಗುವುದು ಖಚಿತ ಎಂದು ಹೊಸೂರು ಗ್ರಾಮದ ಶ್ರೀಧರ್, ಕಂಚುಗಾರನಹಳ್ಳಿಯ ದಾಸಪ್ಪ, ಮಂಡಲಹಳ್ಳಿ ನಾಗರಾಜು, ರಾಧಾಕೃಷ್ಣ, ಭೈರಮಂಗಲ ಹೇಮಂತ್, ಅರಳಾಳುಸಂದ್ರ ಅಶ್ವಥ್, ಸೀನಪ್ಪ ಹಾಗೂ ಇತರರು ಆತಂಕ ವ್ಯಕ್ತಪಡಿಸಿದರು.

ಗ್ರಾಮವಾರು ಮುಖಂಡರು ತಮ್ಮ ಅಭಿಪ್ರಾಯ ಹಂಚಿಕೊಂಡರು. ‘ಭೂ ಸ್ವಾಧೀನ ಪ್ರಕ್ರಿಯೆ ಕೈ ಬಿಡುವವರೆಗೆ ಹೋರಾಟ ನಿಲ್ಲಿಸಬಾರದು’ ಎಂದು ಸಾಮೂಹಿಕವಾಗಿ ನುಡಿದ ಮುಖಂಡರು, ‘ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ’ದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಸಭೆಯಲ್ಲಿ ಮುಖಂಡರ ನಡುವೆ ಮಾತಿನ ಚಕಮಕಿ ನಡೆಯಿತು
ಸಭೆಯಲ್ಲಿ ಜಿಬಿಡಿಎ ಭೂ ಸ್ವಾಧೀನ ವಿರುದ್ಧದ ಹೋರಾಟಕ್ಕೆ ಕೈ ಎತ್ತಿ ಬೆಂಬಲ ಸೂಚಿಸಿದ ಗ್ರಾಮಸ್ಥರು
ನಮ್ಮ ಹೋರಾಟದ ದಿಕ್ಕು ತಪ್ಪಿಸಲು ರೈತರನ್ನು ಎತ್ತಿ ಕಟ್ಟುವ ಕೆಲಸವನ್ನು ವ್ಯವಸ್ಥಿತವಾಗಿ ಮಾಡುತ್ತಾರೆ. ಅದರ ಬಗ್ಗೆ ಎಚ್ವರಿಕೆ ವಹಿಸೋಣ. ಮೋಸ ಮಾಡುವವರನ್ನು ಹಿಮ್ಮೆಟ್ಟಿಸೋಣ. ಹೋರಾಟಕ್ಕೆ ಇಡೀ ಬಿಡದಿ ಹೋಬಳಿಯ ಜನ ಕೈ ಜೋಡಿಸಬೇಕು
–ಇಟ್ಟಮಡು ಗೋಪಾಲ್ ಅಧ್ಯಕ್ಷ ಜಿಲ್ಲಾ ಕೃಷಿಕ ಸಮಾಜ
ಹೋರಾಟದಲ್ಲಿ ಒಗ್ಗಟ್ಟಿದ್ದರಷ್ಟೆ ನಮ್ಮ ಭೂಮಿ ಉಳಿಯುತ್ತದೆ. ನಮ್ಮ ನಡುವೆ ಒಡಕುಂಟಾದರೆ ಭೂಮಿ ಕೈ ತಪ್ಪಲಿದೆ. ಕಡೆಗೆ ನಾವು ಬೀದಿ ಪಾಲಾಗಲಿದ್ದೇವೆ. ಡಾ. ಬಿ.ಆರ್. ಅಂಬೇಡ್ಕರ್ ತೋರಿಸಿರುವ ಹಾದಿಯಲ್ಲಿ ಹೋರಾಡಿ ಭೂಮಿ ಉಳಿಸಿಕೊಳ್ಳೋಣ
–ಎಚ್‌.ಸಿ. ಆನಂದ ಹೊಸೂರು

ಮಾತಿನ ಚಕಮಕಿ; ಪರಸ್ಪ‍ರ ತಳ್ಳಾಟ

ಸಭೆಯಲ್ಲಿ ಕೆಲ ಮುಖಂಡರ ಮಾತುಗಳಲ್ಲಿ ರಾಜಕೀಯ ಇಣುಕಿದ್ದರಿಂದ ಮಾತಿನ ಚಕಮಕಿ ನಡೆದು ಕೈ–ಕೈ ಮಿಲಾಯಿಸುವ ಹಂತಕ್ಕೂ ಹೋಯಿತು. ಭೈರಮಂಗಲದ ಮುಖಂಡ ಸಿದ್ದರಾಜು ಅವರು ‘ಹದಿನೆಂಟು ವರ್ಷವಾದರೂ ನಮ್ಮ ಭಾಗ ಕೆಂಪು ವಲಯದಲ್ಲಿದೆ. ಇದನ್ನು ತೆಗೆಸುವುದು ಯಾರು? ಈ ಅವಧಿಯಲ್ಲಿ ಮೂರೂ ಪಕ್ಷಗಳ ಸರ್ಕಾರ ಬಂದು ಹೋಗಿದೆ. ಹಿಂದೆ ನಾವು ಭೂ ಸ್ವಾಧೀನದ ಪರ ಇದ್ದು ಈಗ ವಿರುದ್ಧ ನಿಲ್ಲಬೇಕಾದ ಸ್ಥಿತಿಯಲ್ಲಿದ್ದೇವೆ. ಈ ಸಭೆಯು ಭೂ ಸ್ವಾಧೀನದ ಪರವೋ ಅಥವಾ ವಿರುದ್ಧವೋ ಎಂಬುದು ಮೊದಲು ಸ್ಪಷ್ಟವಾಗಬೇಕು. ಹೋರಾಟಕ್ಕೆ ಸಂಬಂಧಿಸಿದಂತೆ ನಮ್ಮ ನಿಲುವು ಸ್ಪಷ್ಟವಾಗಿರಬೇಕು’ ಎಂದು ಮಾತಿನ ಮಧ್ಯೆ ಕೆಲ ರಾಜಕೀಯ ನಾಯಕರ ಹೆಸರು ಪ್ರಸ್ತಾಪಿಸಿದರು.

ಆಗ ಕೆಲವರು ‘ಸಭೆಯಲ್ಲಿ ರಾಜಕೀಯ ತರಬೇಡಿ. ನಿಮ್ಮ ನಾಯಕರು ಇದ್ದಾಗ ಏನು ಮಾಡಿದರು?’ ಎಂದು ವೇದಿಕೆಗೆ ಬಂದು ಆಕ್ಷೇಪ ವ್ಯಕ್ತಪಡಿಸಿದರು. ಪರಸ್ಪರ ಮಾತಿನ ಚಕಮಕಿ ನಡೆಯುತ್ತಿದ್ದಂತೆ ಎರಡೂ ಅಭಿಪ್ರಾಯಗಳ ಪರ–ವಿರುದ್ದ ಇರುವವರು ವೇದಿಕೆಯತ್ತ ಧಾವಿಸಿದರು. ಈ ವೇಳೆ ಪರಸ್ಪರ ತಳ್ಳಾಟ ನಡೆದು ಕೈ–ಕೈ ಮಿಲಾಯಿಸುವ ಹಂತಕ್ಕೆ ಹೋಯಿತು. ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಹಿರಿಯ ಮುಖಂಡರು ಎಲ್ಲರನ್ನು ಸಮಾಧಾನಪಡಿಸಿದರು. ‘ಭೂ ಸ್ವಾಧೀನದ ವಿರುದ್ಧ ಈ ಸಭೆ ಆಯೋಜಿಸಲಾಗಿದೆ. ಆ ಆಶಯಕ್ಕೆ ಬದ್ಧರಾಗಿ ಎಲ್ಲರೂ ಮುಕ್ತವಾಗಿ ಅಭಿಪ್ರಾಯ ಹಂಚಿಕೊಂಡು ಮುಂದಿನ ಹೋರಾಟಕ್ಕೆ ಸಲಹೆ ನೀಡಬೇಕು’ ಎಂದು ಸ್ಪಷ್ಟಪಡಿಸಿದರು. ಬಳಿಕ ಸಭೆ ಮುಂದುವರಿಯಿತು.

‘ರೈತರ ಸಹಭಾಗಿತ್ವದ ಯೋಜನೆ; ಅನ್ಯಾಯಕ್ಕೆ ಅವಕಾಶವಿಲ್ಲ’

‘ಬೆಂಗಳೂರಿನಾಚೆ ಟೌನ್‌ಶಿಫ್ ನಿರ್ಮಾಣ ಮಾಡಲು 2007ರಲ್ಲೇ ಭೂ ಸ್ವಾಧೀನಕ್ಕೆ ತೀರ್ಮಾನಿಸಲಾಗಿತ್ತು. ವಿವಿಧ ಕಾರಣಗಳಿಗಾಗಿ ಅಷ್ಟು ವರ್ಷಗಳಿಂದ ಗ್ರಹಣ ಹಿಡಿದಿದ್ದ ಯೋಜನೆಗೆ ನಮ್ಮ ಸರ್ಕಾರ ಚಾಲನೆ ನೀಡಿದೆ. ರೈತರ ಹಾಗೂ ಸ್ಥಳೀಯರ ಸಹಭಾಗಿತ್ವದಲ್ಲಿ ನವ ಬೆಂಗಳೂರು ನಿರ್ಮಾಣ ಯೋಜನೆಗೆ ಮುಂದಾಗಿದೆ. ಭೂ ಸ್ವಾಧೀನ ಪ್ರಕ್ರಿಯೆ ಪರಿಹಾರ ಬೇಡಿಕೆಗಳು ಸೇರಿದಂತೆ ರೈತರ ಗೊಂದಲಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಶೀಘ್ರದಲ್ಲೇ ಜಿಲ್ಲಾಧಿಕಾರಿ ರೈತರೊಂದಿಗೆ ಸಭೆ ನಡೆಸಲಿದ್ದಾರೆ. ಯೋಜನೆಯಲ್ಲಿ ರೈತರಿಗೆ ಅನ್ಯಾಯವಾಗುವುದಕ್ಕೆ ಅವಕಾಶ ನೀಡುವುದಿಲ್ಲ. ರಾಮನಗರದ ಕಂದಾಯ ಭವನದಲ್ಲಿ ಪ್ರಾಧಿಕಾರದ ಕಚೇರಿ ತೆರೆಯಲಾಗಿದೆ. ನಾನು ಆಯುಕ್ತರು ಸೇರಿದಂತೆ ವಿವಿಧ ಹಂತದ ಅಧಿಕಾರಿಗಳು ಇಲ್ಲಿ ಲಭ್ಯವಿರುತ್ತೇವೆ. ರೈತರು ಏನೇ ಗೊಂದಲಗಳಿದ್ದರೂ ಇಲ್ಲಿಗೆ ಬಂದು ಪರಿಹರಿಸಿಕೊಳ್ಳಬಹುದು’ ಎಂದು ಭೂ ಸ್ವಾಧೀನಕ್ಕೆ ಕೆಲ ಗ್ರಾಮಗಳ ವಿರೋಧ ಕುರಿತು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜಿ.ಎನ್. ನಟರಾಜ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.