ಬೆಂಗಳೂರು: ಸಂಚಾರ ನಿಯಂತ್ರಣಾಧಿಕಾರಿಗಳಿಲ್ಲದ ಕುರ್ಚಿಗಳು, ಬಸ್‌ಗಳ ಮಾಹಿತಿಯಿಲ್ಲದೇ ಒಂದು ಪ್ಲಾಟ್‌ಫಾರ್ಮ್‌ನಿಂದ ಮತ್ತೊಂದು ಪ್ಲಾಟ್‌ಫಾರ್ಮ್‌ಗೆ ಅಲೆಯುವ ಪ್ರಯಾಣಿಕರು, ಸ್ಥಗಿತಗೊಂಡ ಶುದ್ಧ ಕುಡಿಯುವ ನೀರಿನ ಘಟಕ, ಮರಿಚೀಕೆಯಾದ ಸ್ವಚ್ಛತೆ...
ಇದು ರಾಜಧಾನಿ ಬೆಂಗಳೂರಿನ ಸಾರ್ವಜನಿಕ ಸಾರಿಗೆಯ ಜೀವನಾಡಿಯಾಗಿರುವ ಕೆಂಪೇಗೌಡ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಕಂಡುಬರುವ ದೃಶ್ಯಗಳು.
ನಗರದ ಎಲ್ಲ ಬಡಾವಣೆಗಳಿಗೆ ಮೆಜೆಸ್ಟಿಕ್ ಬಸ್ ನಿಲ್ದಾಣವೇ ಸಂಪರ್ಕ ಕೊಂಡಿಯಾಗಿದೆ. ಆದ್ದರಿಂದ, ಇಲ್ಲಿಗೆ ಪ್ರತಿನಿತ್ಯ ಬೆಂಗಳೂರಿಗರು ಸೇರಿದಂತೆ ರಾಜ್ಯ ಮತ್ತು ಹೊರರಾಜ್ಯಗಳಿಂದ ಲಕ್ಷಾಂತರ ಜನ ಪ್ರಯಾಣಿಕರು ಬಂದು ಬೇರೆ ಕಡೆಗೆ ತೆರಳುತ್ತಾರೆ. ಆದರೆ, ಇಲ್ಲಿ ಮೂಲಸೌಕರ್ಯದ ಕೊರತೆಯಿಂದ ಪ್ರಯಾಣಿಕರು ಪ್ರಯಾಸ ಪಡುತ್ತಿದ್ದಾರೆ.
ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಬಸ್‌ಗಳ ಸಂಚಾರದ ಸಮಯ, ಬಸ್‌ಗಳ ಕುರಿತು ಮಾಹಿತಿ ನೀಡುವ ಎಲ್‌ಇಡಿ ಪರದೆಗಳು ಸ್ಥಗಿತಗೊಂಡಿವೆ. ಪ್ರಯಾಣಿಕರಿಗೆ ಬಸ್‌ಗಳ ಮಾಹಿತಿ ನೀಡಲು ನಿಯೋಜನೆಗೊಂಡಿರುವ ಸಂಚಾರ ನಿಯಂತ್ರಣಾಧಿಕಾರಿಗಳು ಲಭ್ಯವಿರುವುದಿಲ್ಲ. ಅವರು ಕುಳಿತುಕೊಳ್ಳುವ ಆಸನಗಳ ಮೇಲೆ ಪ್ರಯಾಣಿಕರ ಲಗೇಜ್ ಬ್ಯಾಗ್‌ಗಳಿರುತ್ತವೆ ಅಥವಾ ವಿದ್ಯಾರ್ಥಿಗಳೋ, ವಯಸ್ಸಾದವರೋ ಅದರ ಮೇಲೆ ಕುಳಿತಿರುತ್ತಾರೆ !
ರಾತ್ರಿ 8 ಗಂಟೆಯ ನಂತರ ಇಲ್ಲಿಗೆ ಬರುವ ಪ್ರಯಾಣಿಕರು ಬಸ್‌ಗಳ ಮಾಹಿತಿ ಸಿಗದೇ ಪರದಾಡುತ್ತಾರೆ. ಅದರಲ್ಲೂ ಮಹಿಳೆಯರು, ಬರುವ ಬಸ್‌ಗಳನ್ನು ಎದುರು ನೋಡುತ್ತಾ, ಭೀತಿಯಲ್ಲಿ ಕಾಯಬೇಕಾದ ಪರಿಸ್ಥಿತಿ ಇದೆ. ಶಿವಾಜಿನಗರದ ಬಸ್‌ಗಳು ನಿಲ್ಲುವ ಪ್ಲಾಟ್‌ಫಾರ್ಮ್‌ಗೆ ಅಳವಡಿಸಿರುವ ಗೇಟ್ ಕಿತ್ತುಹೋಗಿದ್ದು, ಪ್ರಯಾಣಿಕರ ಓಡಾಟಕ್ಕೆ ಸಮಸ್ಯೆಯಾಗಿದೆ. ಬಸ್ ನಿಲ್ದಾಣದಲ್ಲಿ ಸ್ವಚ್ಛತೆ ಕೊರತೆ ಇದೆ. ಕೆಲ ಪ್ಲಾಟ್‌ಫಾರ್ಮ್‌ಗಳು ಗಬ್ಬೆದ್ದು ನಾರುತ್ತಿವೆ. ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡುತ್ತಿದ್ದಾರೆ.
‘ಬಸ್ ನಿಲ್ದಾಣದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕ ಸ್ಥಗಿತಗೊಂಡು ವರ್ಷವಾದರೂ ಸರಿಪಡಿಸಿಲ್ಲ. ಮಕ್ಕಳು, ಮಹಿಳೆಯರು ಮತ್ತು ವೃದ್ಧರು ಕುಡಿಯುವ ನೀರಿಲ್ಲದೇ ಪರದಾಡುವ ಸ್ಥಿತಿ ಇದೆ’ ಎಂದು ಚಿಕ್ಕಪೇಟೆಯ ಸುರೇಶ್ ಬೇಸರ ವ್ಯಕ್ತಪಡಿಸಿದರು.
‘ಬಸ್ ನಿಲ್ದಾಣದಲ್ಲಿರುವ ವಾಣಿಜ್ಯ ಮಳಿಗೆಗಳಲ್ಲಿ ಯಾವುದೇ ವಸ್ತುಗಳನ್ನು ಖರೀದಿಸಿದರೂ ಗರಿಷ್ಠ ಮಾರಾಟ ದರಕ್ಕಿಂತ ಹೆಚ್ಚು ಹಣ ಪಡೆಯುತ್ತಾರೆ. ತಂಪು ಪಾನೀಯ, ತಿನಿಸುಗಳು, ಸಿದ್ಧ ಆಹಾರ, ಸಿಹಿ ತಿನಿಸುಗಳ ಮೇಲೆ ವ್ಯಾಪಾರಿಗಳು ಶೇ 10ರಿಂದ 20ರಷ್ಟು ಅಧಿಕ ಹಣ ತೆಗೆದುಕೊಳ್ಳುತ್ತಾರೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.
‘ಶುದ್ಧ ಕುಡಿಯುವ ನೀರಿನ ಘಟಕದ ದುರಸ್ತಿಗೊಳಿಸಲಾಗುವುದು. ನಿಲ್ದಾಣದ ಸ್ವಚ್ಛತೆಗೆ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗುವುದು. ಬಸ್‌ಗಳ ಮಾಹಿತಿ ಬಿತ್ತರಿಸುವ ಎಲ್‌ಇಡಿ ಪರದೆಗಳ ಟೆಂಡರ್ ಮುಗಿದ ಕಾರಣ ಸ್ಥಗಿತಗೊಳಿಸಲಾಗಿದೆ’ ಎಂದು ಬಿಎಂಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕ ಪ್ರಭಾಕರ್ ರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.
ಮೆಜೆಸ್ಟಿಕ್ ಬಸ್ ನಿಲ್ದಾಣದ ಮೂಲಕ ಪ್ರತಿನಿತ್ಯ 5 ಲಕ್ಷದಿಂದ 6 ಲಕ್ಷ ಜನ ಪ್ರಯಾಣಿಸುತ್ತಿದ್ದಾರೆ. ಪ್ರಯಾಣಿಕರಿಗೆ ಬೇಕಾದ ಎಲ್ಲ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ. ಇಲ್ಲಿರುವ ನಾಲ್ಕು ಶೌಚಾಲಯಗಳ ದುರಸ್ತಿಗೆ ಟೆಂಡರ್ ಕರೆಯಲಾಗಿದೆರಾಮಚಂದ್ರನ್ ಆರ್ ವ್ಯವಸ್ಥಾಪಕ ನಿರ್ದೇಶಕರು ಬಿಎಂಟಿಸಿ
ಪ್ರಯಾಣಿಕರು ಏನಂತಾರೆ!
ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಸ್ವಚ್ಛತೆಯಿಲ್ಲದೆ ಶೌಚಾಲಯಗಳು ಗಬ್ಬು ನಾರುತ್ತಿವೆ. ಪ್ರಯಾಣಿಕರು ಮೂಗು ಮುಚ್ಚಿಕೊಂಡು ಶೌಚಾಲಯಗಳನ್ನು ಬಳಸುವಂತಾಗಿದೆ. ಶೌಚಾಲಯ ನಿರ್ವಹಿಸುವ ಸಿಬ್ಬಂದಿ ಪ್ರಯಾಣಿಕರಿಂದ ಹೆಚ್ಚು ಹಣ ವಸೂಲಿ ಮಾಡುತ್ತಿದ್ದಾರೆ. ಇದನ್ನು ಪ್ರಶ್ನಿಸಿದರೆ ಜಗಳಕ್ಕೆ ಬರುತ್ತಾರೆ
-ಜಗದೀಶ್, ಕೆಂಗೇರಿ ನಿವಾಸಿ
ದೇಶದ ವಿವಿಧ ಭಾಗಗಳಿಂದ ಬರುವ ಪ್ರಯಾಣಿಕರಿಗೆ ಬಸ್‌ಗಳ ಬಗ್ಗೆ ಮಾಹಿತಿ ಇರುವುದಿಲ್ಲ. ಆದ್ದರಿಂದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಬಸ್‌ಗಳ ತೆರಳುವ ಮಾರ್ಗ ಸಮಯ ತಿಳಿಸುವ ಎಲ್‌ಇಡಿ ಪರದೆಗಳನ್ನು ಅಳವಡಿಸಬೇಕು. ಇದರಿಂದ ನಗರಕ್ಕೆ ಬರುವ ಹೊಸಬರಿಗೆ ಹೆಚ್ಚು ಅನುಕೂಲವಾಗಲಿದೆ.
-ಮಂಜುನಾಥ್, ಪ್ರಯಾಣಿಕ ಕೋರಮಂಗಲ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.