‘ಸಮುದಾಯ ಸಂಪರ್ಕ’ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಯುವ ಜನರು
ಬೆಂಗಳೂರು: ‘ಮಾನಸಿಕ ಅನಾರೋಗ್ಯ ಸಮಸ್ಯೆಗಳು ಆತ್ಮಹತ್ಯೆಯಂತಹ ನಿರ್ಧಾರಕ್ಕೆ ಕಾರಣವಾಗುತ್ತಿವೆ. ಆದ್ದರಿಂದ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಆದ್ಯತೆ ನೀಡಬೇಕು’ ಎಂದು ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರವಿಜ್ಞಾನ ಸಂಸ್ಥೆಯ (ನಿಮ್ಹಾನ್ಸ್) ಪ್ರಾಧ್ಯಾಪಕಿ ಡಾ. ಪ್ರಭಾ ಎಸ್. ಚಂದ್ರ ಅಭಿಪ್ರಾಯ ವ್ಯಕ್ತಪಡಿಸಿದರು.
ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ಸಂಸ್ಥೆಯು ನಗರದಲ್ಲಿ ಹಮ್ಮಿಕೊಂಡಿದ್ದ ‘ಸಮುದಾಯ ಸಂಪರ್ಕ’ ಕಾರ್ಯಕ್ರಮದಲ್ಲಿ ಆತ್ಮಹತ್ಯೆ ತಡೆಗಟ್ಟುವಿಕೆ ಬಗ್ಗೆ ಮಾತನಾಡಿದರು.
‘ಇಂದಿಗೂ ಮಾನಸಿಕ ಆರೋಗ್ಯ ಸಮಸ್ಯೆ ಹೊಂದಿರುವವರನ್ನು ಕೀಳಾಗಿ ಕಾಣುವುದು, ಅವರನ್ನು ನಿರ್ಲಕ್ಷ್ಯ ಮಾಡುವುದು ಕಾಣಬಹುದಾಗಿದೆ. ಜನರು ಮಾನಸಿಕ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯಲು ಹಿಂಜರಿಯುತ್ತಿದ್ದಾರೆ. ಹೀಗಾಗಿ, ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವ ಮಹತ್ವದ ಬಗ್ಗೆ ಅರಿವು ಮೂಡಿಸುವ ಅಗತ್ಯ ಇದೆ. ದೈಹಿಕ ಆರೋಗ್ಯದ ಜತೆಗೆ ಮಾನಸಿಕ ಆರೋಗ್ಯವೂ ಅತಿ ಮುಖ್ಯ’ ಎಂದು ಹೇಳಿದರು.
‘ಆತ್ಮೀಯರನ್ನು ಕಳೆದುಕೊಂಡಾಗ ಉಂಟಾಗುವ ಭಾವನೆಗಳು, ಗೊಂದಲ, ಅಪರಾಧ, ಕಳಂಕ, ಅವಮಾನ ಸೇರಿದಂತೆ ವಿವಿಧ ಸಂದರ್ಭದಲ್ಲಿ ಆತ್ಮಹತ್ಯೆಯ ಆಲೋಚನೆಗಳು ಸುಳಿದಾಡುತ್ತವೆ. ಆತ್ಮಹತ್ಯೆಯನ್ನು ತಡೆಯಲು ಆತ್ಮಹತ್ಯೆ ಪ್ರಯತ್ನದಿಂದ ಬದುಕುಳಿದವರ ಧ್ವನಿಗಳು ಅತ್ಯಗತ್ಯ’ ಎಂದರು.
‘ಆತ್ಮಹತ್ಯೆ ಪ್ರಯತ್ನದ ಬಳಿಕ ಬದುಕುಳಿದವರನ್ನು ಕಳಂಕಿತರಂತೆ ನೋಡದೆ, ಅವರ ಜತೆಗೆ ಸಮಾಲೋಚನೆ ನಡೆಸುವ ಮೂಲಕ ಆ ಯೋಚನೆಯಿಂದ ಹೊರ ತರಬೇಕು. ಕುಟುಂಬದ ಸದಸ್ಯರು ಮತ್ತು ಸ್ನೇಹಿತರು ಈ ಕೆಲಸ ಮಾಡಬೇಕು. ಸಾಮಾಜಿಕ ಮಾಧ್ಯಮಗಳ ಬಳಕೆ ಕೂಡ ವ್ಯಕ್ತಿಯ ಮನಸ್ಥಿತಿ ಮೇಲೆ ಪರಿಣಾಮ ಬೀರಲಿದೆ’ ಎಂದು ಹೇಳಿದರು.
‘ಮಾನಸಿಕ ಅನಾರೋಗ್ಯ ಸಮಸ್ಯೆಗಳ ನಿವಾರಣೆಗೆ ‘ಟೆಲಿ ಮನಸ್’ ಸಹಾಯವಾಣಿ (14416) ಸಹಕಾರಿಯಾಗಿದೆ. ಆತ್ಮಹತ್ಯೆಯ ಆಲೋಚನೆ ಮಾಡುತ್ತಿರುವವರು ಕೂಡ ಈ ಸಹಾಯವಾಣಿಗೆ ಕರೆ ಮಾಡಿದಲ್ಲಿ ಪರಿಹಾರೋಪಾಯ ದೊರೆಯಲಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.