ಬೆಂಗಳೂರು: ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯು (ನಿಮ್ಹಾನ್ಸ್) ಇದೇ 17 ಮತ್ತು 18ರಂದು ನಿಮ್ಹಾನ್ಸ್ ಕನ್ವೆನ್ಷನ್ ಸೆಂಟರ್‌ನಲ್ಲಿ ಮಾನಸಿಕ ಆರೋಗ್ಯ ಸಂತೆ ಹಮ್ಮಿಕೊಂಡಿದೆ.
ಬೆಳಿಗ್ಗೆ 10 ಗಂಟೆಯಿಂದ ನಡೆಯುವ ನಾಲ್ಕನೇ ಆವೃತ್ತಿಯ ಈ ಸಂತೆಗೆ ಉಚಿತ ಪ್ರವೇಶ ಇರಲಿದೆ. ಮಾನಸಿಕ ಅನಾರೋಗ್ಯ ಸಮಸ್ಯೆಗಳ ಬಗೆಗಿನ ಕಳಂಕ ಹೋಗಲಾಡಿಸಿ, ರೋಗದ ಬಗ್ಗೆ ಅರಿವು ಮೂಡಿಸುವುದು ಈ ಸಂತೆಯ ಮುಖ್ಯ ಉದ್ದೇಶವಾಗಿದೆ.
ಸಂದರ್ಶಕರು ಮಾನಸಿಕ ಆರೋಗ್ಯ ಹಾಗೂ ಶಿಕ್ಷಣಕ್ಕೆ ಸಂಬಂಧಿಸಿದಂತೆ ವಿಷಯ ತಜ್ಞರ ಜತೆಗೆ ಸಂವಾದ ಮತ್ತು ಚರ್ಚೆ ನಡೆಸಲು ಅವಕಾಶ ಇರಲಿದೆ. ಮಾನಸಿಕ ಆರೋಗ್ಯ ಕಾರ್ಯಕ್ರಮಗಳು, ಸೇವೆಗಳು, ಪುನರ್ವಸತಿ ಬಗ್ಗೆಯೂ ಸಂತೆಯಲ್ಲಿ ಪರಿಚಯಿಸಲಾಗುತ್ತದೆ. ಮಿದುಳಿನ ಮಾದರಿ, ಶೈಕ್ಷಣಿಕ ಕಲಿಕಾ ಸಾಮಗ್ರಿಗಳನ್ನು ವೀಕ್ಷಿಸಬಹುದಾಗಿದೆ. ವಿದ್ಯಾರ್ಥಿಗಳು, ಸಾರ್ವಜನಿಕರು ಸೇರಿ ಈ ಕ್ಷೇತ್ರದ ಬಗ್ಗೆ ತಿಳಿದುಕೊಳ್ಳಲು ಆಸಕ್ತಿ ಹೊಂದಿರುವ ಎಲ್ಲರೂ ಭಾಗವಹಿಸಬಹುದಾಗಿದೆ.
‘ಇಂದಿಗೂ ಮಾನಸಿಕ ಆರೋಗ್ಯ ಸಮಸ್ಯೆ ಹೊಂದಿರುವವರನ್ನು ಕೀಳಾಗಿ ಕಾಣುವುದು, ಅವರನ್ನು ನಿರ್ಲಕ್ಷ್ಯ ಮಾಡುವುದು ಕಾಣಬಹುದಾಗಿದೆ. ಜನರು ಮಾನಸಿಕ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯಲು ಹಿಂಜರಿಯುತ್ತಿದ್ದಾರೆ. ಹೀಗಾಗಿ, ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವ ಮಹತ್ವದ ಬಗ್ಗೆ ಅರಿವು ಮೂಡಿಸುವ ಅಗತ್ಯ ಇದೆ. ದೈಹಿಕ ಆರೋಗ್ಯದ ಜತೆಗೆ ಮಾನಸಿಕ ಆರೋಗ್ಯವೂ ಅತಿ ಮುಖ್ಯ. ವಿವಿಧ ವಿಭಾಗಗಳಿಂದ ಲಭ್ಯವಿರುವ ಸೇವೆಗಳ ಬಗ್ಗೆ ಮಾಹಿತಿ ನೀಡಲು ಮತ್ತು ಜನರಲ್ಲಿ ಮಾನಸಿಕ ಆರೋಗ್ಯ ಸಾಕ್ಷರತೆಯನ್ನು ಹೆಚ್ಚಿಸಲು ಈ ಸಂತೆ ಆಯೋಜಿಸಲಾಗಿದೆ’ ಎಂದು ಸಂಸ್ಥೆ ತಿಳಿಸಿದೆ.
‘ಮಾನಸಿಕ ಆರೋಗ್ಯದ ಬಗೆಗಿನ ತಿಳಿವಳಿಕೆಯ ಕೊರತೆ ನಿವಾರಿಸಿ, ಸಮಸ್ಯೆಗಳನ್ನು ಗುರುತಿಸುವುದು ಹಾಗೂ ಚಿಕಿತ್ಸೆ ಕುರಿತು ಅರಿವು ಮೂಡಿಸಬೇಕಿದೆ. ಈ ನಿಟ್ಟಿನಲ್ಲಿ ಸಂತೆ ಸಹಕಾರಿಯಾಗಲಿದೆ’ ಎಂದು ಸಂಸ್ಥೆ ಪ್ರಕಟಣೆಯಲ್ಲಿ ಹೇಳಿದೆ.
ನೋಂದಣಿ ಮತ್ತು ವಿವರಕ್ಕೆ: 080 2699 5156
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.