ADVERTISEMENT

ಶವಗಳೊಂದಿಗೆ ಮನೆಯಲ್ಲಿದ್ದ ಮಾನಸಿಕ ಅಸ್ವಸ್ಥೆ

​ಪ್ರಜಾವಾಣಿ ವಾರ್ತೆ
Published 12 ಮೇ 2021, 21:14 IST
Last Updated 12 ಮೇ 2021, 21:14 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಮಾನಸಿಕ ಅಸ್ವಸ್ಥೆಯೊಬ್ಬರು ತನ್ನ ತಾಯಿ ಹಾಗೂ ಸಹೋದರನ ಶವಗಳ ಜೊತೆಗೆ ಎರಡು ದಿನ ಮನೆಯಲ್ಲೇ ಕಳೆದಿರುವ ಘಟನೆ ರಾಜರಾಜೇಶ್ವರಿ ನಗರ ಠಾಣಾ ವ್ಯಾಪ್ತಿಯ ಬಿಇಎಂಎಲ್ ಬಡಾವಣೆಯಲ್ಲಿ ನಡೆದಿದೆ.

ತಾಯಿ ಆರ್ಯಾಂಬ (65) ಹಾಗೂ ಹರೀಶ್‌ (45) ಎಂಬುವರ ಮೃತದೇಹಗಳು ಮನೆಯಲ್ಲಿ ಪತ್ತೆಯಾಗಿದ್ದು, ಶ್ರೀಲಕ್ಷಿ ಎಂಬುವರು ಅದೇ ಮನೆಯಲ್ಲಿ ವಾಸವಿದ್ದ ಮಾನಸಿಕ ಅಸ್ವಸ್ಥೆ ಎನ್ನಲಾಗಿದೆ.

‘ಬುಧವಾರ ಮಧ್ಯಾಹ್ನ ಮನೆಯಿಂದ ದುರ್ವಾಸನೆ ಬರುತ್ತಿರುವುದನ್ನು ಗಮನಿಸಿದ ಮನೆಯ ಮಾಲೀಕ ಪ್ರವೀಣ್ ಈ ವಿಚಾರವನ್ನು ಪೊಲೀಸರಿಗೆ ತಿಳಿಸಿದ್ದರು. ಸ್ಥಳಕ್ಕೆ ಬಂದಿದ್ದ ಪೊಲೀಸರಿಗೆ ಮೊದಲಿಗೆ ಕೋಣೆಯೊಂದರಲ್ಲಿ ಹರೀಶ್ ಮೃತಪಟ್ಟಿರುವುದು ಕಂಡುಬಂತು. ಮನೆ ಬಾಗಿಲು ಮುರಿದು ಒಳ ಪ್ರವೇಶಿಸಿದಾಗ ಮತ್ತೊಂದು ಕೋಣೆಯಲ್ಲಿ ಆರ್ಯಾಂಬ ಅವರ ಮೃತದೇಹ ಪತ್ತೆಯಾಯಿತು’ ಎಂದು ಪೊಲೀಸರು ತಿಳಿಸಿದರು.

ADVERTISEMENT

‘ಮನೆಯನ್ನು ಪರಿಶೀಲಿಸಿದಾಗ ಮತ್ತೊಂದು ಕೋಣೆಯಲ್ಲಿ ಶ್ರೀಲಕ್ಷ್ಮಿ ಇದ್ದರು. ಆದರೆ, ಅವರು ನಡೆಯುವ ಸ್ಥಿತಿಯಲ್ಲಿ ಇರಲಿಲ್ಲ. ಬಳಿಕ ಅವರು ಮಾನಸಿಕ ಅಸ್ವಸ್ಥರೆಂದು ತಿಳಿದು ಬಂತು. ಅವರಿಗೆ ಮನೆಯಲ್ಲಿ ಇಬ್ಬರೂ ಮೃತಪಟ್ಟಿರುವ ಅರಿವೂ ಇಲ್ಲ. ಅವರನ್ನು ಸದ್ಯ ರಕ್ಷಿಸಲಾಗಿದೆ. ಆರ್ಯಾಂಬ ಹಾಗೂ ಹರೀಶ್ ಸೋಮವಾರ ಮೃತಪಟ್ಟಿರಬಹುದು’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

‘ಮೃತದೇಹಗಳನ್ನು ವಿಕ್ಟೋರಿಯಾ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಈವರೆಗೆ ಅವರ ಸಾವಿಗೆ ನಿಖರ ಮಾಹಿತಿ ತಿಳಿದಿಲ್ಲ.ಮರಣೋತ್ತರ ಪರೀಕ್ಷೆಯ ನಂತರ ವಿಚಾರ ತಿಳಿಯಲಿದೆ. ಘಟನೆ ಸಂಬಂಧ ಅಸ್ವಾಭಾವಿಕ ಸಾವು ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ್ ತಿಳಿಸಿದರು.

‘ಏ.25ರಂದು ರ‍್ಯಾಪಿಡ್‌ ಆ್ಯಂಟಿಜೆನ್‌ ಟೆಸ್ಟ್‌ನಲ್ಲಿ (ಆರ್‌ಎಟಿ) ಹರೀಶ್ ಅವರಿಗೆ ಕೊರೊನಾ ಸೋಂಕು ದೃಢವಾಗಿತ್ತು. ಈ ಸಂಬಂಧವೂ ಪೊಲೀಸರು ಮಾಹಿತಿ ಪಡೆಯುತ್ತಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.