ADVERTISEMENT

ಪೊಲೀಸರ ಕರ್ತವ್ಯಕ್ಕೆ ಅಡ್ಡಿ: ರೌಡಿಶೀಟರ್ ಪ್ರಸಾದ್‌ ಕುಟುಂಬದ ವಿರುದ್ಧ ಪ್ರಕರಣ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2025, 19:44 IST
Last Updated 19 ಅಕ್ಟೋಬರ್ 2025, 19:44 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಬೆಂಗಳೂರು: ದರೋಡೆ ಪ್ರಕರಣದ ಆರೋಪಿಯನ್ನು ಬಂಧಿಸಲು ತೆರಳಿದ್ದ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ರೌಡಿಶೀಟರ್ ಪ್ರಸಾದ್‌ ಅಲಿಯಾಸ್‌ ಮೆಂಟಲ್‌ ಪ್ರಸಾದ್‌ ಕುಟುಂಬದ ವಿರುದ್ಧ ವಿದ್ಯಾರಣ್ಯಪುರ ಠಾಣೆ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಎರಡು ವರ್ಷಗಳ ಹಿಂದೆ ಪ್ರಕರಣವೊಂದರ ಸಂಬಂಧ ಜೈಲು ಸೇರಿದ್ದ ಪ್ರಸಾದ್, ಜಾಮೀನಿನ ಮೇಲೆ ಅಕ್ಟೋಬರ್‌ 17ರಂದು ಬಿಡುಗಡೆಯಾಗಿದ್ದ. ಅದೇ ದಿನ ರಾತ್ರಿ ದೊಡ್ಡಬೊಮ್ಮಸಂದ್ರದಲ್ಲಿ ದರೋಡೆ ಪ್ರಕರಣ ವರದಿಯಾಗಿತ್ತು. ಈ ಸಂಬಂಧ ಆ ದಿನ ಠಾಣಾಧಿಕಾರಿಗಳು ಸೇರಿ 10ಕ್ಕೂ ಹೆಚ್ಚು ಮಂದಿ ಆತನ ಮನೆ ಬಳಿ ಹೋಗಿ ವಿಚಾರಣೆಗೆ ಮುಂದಾಗಿದ್ದರು.

ADVERTISEMENT

ಆಗ ಪ್ರಸಾದ್‌ ಮತ್ತು ಆತನ ಕುಟುಂಬ ಸದಸ್ಯರು ಪೊಲೀಸರ ಜತೆ ವಾಗ್ವಾದ ನಡೆಸಿದ್ದಾರೆ. ಗೇಟ್ ಹಾಕಿ ಮನೆ ಪ್ರವೇಶಿಸದಂತೆ ಅಡ್ಡಪಡಿಸಿ, ಹಲ್ಲೆಗೂ ಮುಂದಾಗಿದ್ದರು ಎಂದು ಹೇಳಲಾಗಿದೆ. ಈ ಸಂಬಂಧ ಪೊಲೀಸರು ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ.

ಪ್ರಸಾದ್ ವಿರುದ್ಧ ವಿದ್ಯಾರಣ್ಯಪುರ, ಗಂಗಮ್ಮನಗುಡಿ, ಜಯನಗರ ಠಾಣೆಗಳಲ್ಲಿ ಕೊಲೆ ಪ್ರಕರಣ ದಾಖಲಾಗಿವೆ. ನಗರದ ಆರು ಠಾಣೆಗಳಲ್ಲಿ ಹಲ್ಲೆ, ದರೋಡೆ ಪ್ರಕರಣಗಳು ಇವೆ. ಈತನ ವಿರುದ್ಧ ವಿದ್ಯಾರಣ್ಯಪುರ ಠಾಣೆಯಲ್ಲಿ ರೌಡಿ ಪಟ್ಟಿ ತೆರೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

ಮೀಟರ್‌ ಸೀನಾ ಎಂಬಾತನ ಪ್ರಚೋದನೆಯಿಂದ ಪ್ರಸಾದ್‌ನನ್ನು ಬಂಧಿಸಲು ಮುಂದಾಗಿದ್ದಾರೆ ಎಂದು ಪೊಲೀಸರ ವಿರುದ್ಧ ಪ್ರಸಾದ್‌ ಕುಟುಂಬ ಆರೋಪ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.