ADVERTISEMENT

ಚಕ್ರದಾಕಾರದ ಲೋಹದ ಡಬ್ಬಿಯಲ್ಲಿ ಮಾದಕ ವಸ್ತು ಪತ್ತೆ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2022, 2:56 IST
Last Updated 14 ಮಾರ್ಚ್ 2022, 2:56 IST

ಬೆಂಗಳೂರು: ತೆಳುವಾದ ತಾಮ್ರದ ತಂತಿ ಸುತ್ತಲು ಬಳಸುವ ಚಕ್ರದಾಕಾರದ ಸಣ್ಣ ಸಣ್ಣ ಲೋಹದ ಡಬ್ಬಿಗಳಲ್ಲಿ ಪೌಡರ್‌ ಮಾದರಿಯ ‘ಸ್ಯೂಡೋಫೆಡ್ರಿನ್‌’ ಮಾದಕ ವಸ್ತುವನ್ನು ಅಡಗಿಸಿಟ್ಟು ಕೊರಿಯರ್‌ ಮೂಲಕ ನ್ಯೂಜಿಲೆಂಡ್‌ಗೆ ರವಾನಿಸಲು ಮುಂದಾಗಿದ್ದ ಜಾಲವನ್ನು ಎನ್‌ಸಿಬಿ ಬೆಂಗಳೂರು ಘಟಕದ ಅಧಿಕಾರಿಗಳು ಭೇದಿಸಿದ್ದಾರೆ.

‘ನಗರದಲ್ಲಿ ವಾಸವಿರುವ ವ್ಯಕ್ತಿ ಹಾಗೂ ದಕ್ಷಿಣ ಆಫ್ರಿಕಾದ ಪ್ರಜೆಯನ್ನು ಬಂಧಿಸಲಾಗಿದೆ. ಒಟ್ಟು 1 ಕೆ.ಜಿ. 970 ಗ್ರಾಂ‘ಸ್ಯೂಡೋಫೆಡ್ರಿನ್‌’ ಜಪ್ತಿ ಮಾಡಲಾಗಿದೆ’ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

‘ಆರೋಪಿಗಳು ಕೊರಿಯರ್‌ ಮೂಲಕ ಮಾದಕ ವಸ್ತು ರವಾನೆ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಲಭಿಸಿತ್ತು. ಅದರ ಆಧಾರದಲ್ಲಿ ಶುಕ್ರವಾರ ರಾತ್ರಿ ಕೊರಿಯರ್‌ ಕೇಂದ್ರದ ಮೇಲೆ ದಾಳಿ ನಡೆಸಲಾಗಿತ್ತು. ಪಾರ್ಸೆಲ್‌‍ಪೆಟ್ಟಿಗೆಯನ್ನು ತೆರೆದು ನೋಡಿದಾಗ ಅದರಲ್ಲಿಸಣ್ಣ ಗಾತ್ರದ ಒಟ್ಟು 50 ಲೋಹದ ಡಬ್ಬಿಗಳು ಇದ್ದವು. ಡಬ್ಬಿಗಳ ಮೇಲ್ಭಾಗದಲ್ಲಿ ‘ಪೌಡರ್‌ ಮಾದರಿಯ ‘ಸ್ಯೂಡೋಫೆಡ್ರಿನ್‌’ ಹಾಕಿ ಪ್ಲಾಸ್ಟರ್‌ನಿಂದ ಸುತ್ತಲಾಗಿತ್ತು. ಅನುಮಾನ ಬಾರದಿರಲಿ ಎಂದು ಅದರ ಮೇಲೆ ತೆಳುವಾದ ತಾಮ್ರದ ತಂತಿ ಸುತ್ತಲಾಗಿತ್ತು. ಒಂದೊಂದು ಡಬ್ಬಿಯಲ್ಲೂ ಸುಮಾರು 40 ಗ್ರಾಂ ಪೌಡರ್‌ ಪತ್ತೆಯಾಗಿತ್ತು’ ಎಂದು ಮಾಹಿತಿ ನೀಡಿದರು.

ADVERTISEMENT

‘ಡ್ರಗ್‌ ಜಾಲದಲ್ಲಿ ಸಕ್ರಿಯವಾಗಿ ಭಾಗಿಯಾಗಿರುವುದನ್ನು ಆರೋಪಿಗಳಿಬ್ಬರೂ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.