ADVERTISEMENT

ನಮ್ಮ ಮೆಟ್ರೊ 3ನೇ ಹಂತ: 11 ಸಾವಿರ ಮರಗಳಿಗೆ ಕೊಡಲಿ!

ಎರಡು ಕಾರಿಡಾರ್‌ಗಳ ಒಟ್ಟು ಉದ್ದ 44.65 ಕಿ.ಮೀ; 2029ಕ್ಕೆ ಪೂರ್ಣಗೊಳ್ಳುವ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2024, 0:39 IST
Last Updated 13 ಡಿಸೆಂಬರ್ 2024, 0:39 IST
ನಮ್ಮ ಮೆಟ್ರೊ ಲೊಗೊ
ನಮ್ಮ ಮೆಟ್ರೊ ಲೊಗೊ   

ಬೆಂಗಳೂರು: ನಮ್ಮ ಮೆಟ್ರೊ 3ನೇ ಹಂತದ ಕಾಮಗಾರಿ ನಡೆಸಲು 11,137 ಮರಗಳಿಗೆ ಕೊಡಲಿಯೇಟು ಬೀಳಲಿದೆ.

ಜೆ.ಪಿ. ನಗರ–ಕೆಂ‍ಪಾಪುರ (ಕಾರಿಡಾರ್‌ 1) ಮತ್ತು ಹೊಸಹಳ್ಳಿ–ಕಡಬಗೆರೆ (ಕಾರಿಡಾರ್‌–2) ಕಾರಿಡಾರ್‌ಗಳಿರುವ 3ನೇ ಹಂತವು 44.65 ಕಿ.ಮೀ. ವ್ಯಾಪ್ತಿಯನ್ನು ಹೊಂದಿದೆ. ಹೊಸದಾಗಿ ಬಿಡುಗಡೆ ಮಾಡಲಾಗಿರುವ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಪ್ರಕಾರ 11,137 ಮರಗಳನ್ನು ಕಡಿಯಬೇಕು ಇಲ್ಲವೇ ಅಲ್ಲಿಂದ ಸ್ಥಳಾಂತರಿಸಬೇಕಾಗಿದೆ.

ಮರ ತೆರವು, ಜೊತೆಗೆ ಉತ್ಖನನ, ಸಾಮಗ್ರಿ ಸಾಗಣೆ, ನಿರ್ಮಾಣ ಚಟುವಟಿಕೆಗಳ ಸಮಯದಲ್ಲಿ ಉತ್ಪತ್ತಿಯಾಗುವ ದೂಳು, ಡೀಸೆಲ್ ಜನರೇಟರ್‌ಗಳ ಹೊಗೆ ಸೇರಿ ದಕ್ಷಿಣ, ಪಶ್ಚಿಮ ಮತ್ತು ವಾಯವ್ಯ ಬೆಂಗಳೂರಿನಲ್ಲಿ ಮಾಲಿನ್ಯ ಹೆಚ್ಚಲಿದೆ. ಪರಿಸರದ ಪರಿಸ್ಥಿತಿ ಹದಗೆಡಲಿದೆ.

ADVERTISEMENT

‘ಸಾಧ್ಯ ಇರುವ ಕಡೆಗಳಲ್ಲಿ ಹೆಚ್ಚಿನ ಗಿಡಮರ ಬೆಳೆಸಲು, ಸಾಧ್ಯವಿರುವ ಮಿಯಾವಾಕಿ ಅರಣ್ಯ ನಿರ್ಮಿಸಲು ಯೋಜನೆಗಳನ್ನು ರೂಪಿಸಲಾಗಿದೆ’ ಎಂದು ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಎಂ.ಮಹೇಶ್ವರರಾವ್‌ ಪ್ರತಿಕ್ರಿಯಿಸಿದರು.

ಪರಿಸರ ನಾಶವನ್ನು ತಗ್ಗಿಸಲು ಪರಿಸರ ಮೇಲ್ವಿಚಾರಣಾ ಯೋಜನೆಯಡಿಯಲ್ಲಿ ₹43.53 ಕೋಟಿ ವೆಚ್ಚದಲ್ಲಿ ಪರಿಹಾರ ಅರಣ್ಯೀಕರಣ ಮಾಡಲು ಬಿಎಂಆರ್‌ಸಿಎಲ್‌ ಪ್ರಸ್ತಾವ ಸಲ್ಲಿಸಿದೆ.

‘ಪರ್ಯಾಯ ಅರಣ್ಯೀಕರಣ ಪರಿಹಾರವಲ್ಲ. ಈಗಿರುವ ಪ್ರತಿ ಮರವನ್ನು ಉಳಿಸಿಕೊಳ್ಳಲು ಶ್ರಮಿಸಬೇಕು. ಪರಿಸರ ಪ್ರಭಾವದ ಮೌಲ್ಯಮಾಪನ ನಡೆಸಬೇಕು. ಸಾರ್ವಜನಿಕರೊಂದಿಗೆ ಸಮಾಲೋಚನೆ ನಡೆಸಬೇಕು’ ಎಂದು ಬೆಂಗಳೂರು ಪರಿಸರ ಟ್ರಸ್ಟ್‌ನ (ಬಿಇಟಿ) ಡಿ.ಟಿ. ದೇವರೆ ಒತ್ತಾಯಿಸಿದರು.

2029ಕ್ಕೆ ಕಾಮಗಾರಿ ಪೂರ್ಣ: ಕಿತ್ತಳೆ ಮಾರ್ಗ ಎಂದೂ ಕರೆಯಲಾಗುವ 3ನೇ ಹಂತದಲ್ಲಿ ಸುರಂಗ ಮಾರ್ಗಗಳು ಇರುವುದಿಲ್ಲ. ಸಂಪೂರ್ಣವಾಗಿ ಎತ್ತರಿಸಿದ ಮಾರ್ಗ ಇರಲಿದೆ. ಹೊರವರ್ತುಲ ರಸ್ತೆಯ ಪಶ್ಚಿಮ ಭಾಗ ಮತ್ತು ಮಾಗಡಿ ರಸ್ತೆಯ ಸುತ್ತಲಿನ ಭಾಗವನ್ನು ಮೆಟ್ರೊ ಸಂಪರ್ಕಿಸಲಿದೆ. 2029ರ ವೇಳೆಗೆ ಕಾಮಗಾರಿ ಪೂರ್ಣಗೊಳಿಸಿ ರೈಲು ಸಂಚಾರ ಆರಂಭಿಸುವ ಗುರಿಯನ್ನು ಇಟ್ಟುಕೊಂಡಿದೆ. ಆಗ ಬೆಂಗಳೂರಿನ ಮೆಟ್ರೊ ಜಾಲವು 222.2 ಕಿ.ಮೀ.ಗೆ ವಿಸ್ತರಿಸಲಿದೆ.

3ನೇ ಹಂತಕ್ಕೆ ಎಲ್ಲ ಹಂತದಲ್ಲಿ ಅನುಮೋದನೆಗೊಂಡಿದ್ದು, ಅಂತಿಮವಾಗಿ ಕೇಂದ್ರ ಸರ್ಕಾರ ಕೂಡ ಆಗಸ್ಟ್‌ನಲ್ಲಿ ಒಪ್ಪಿಗೆ ನೀಡಿದೆ. ಈ ಮಾರ್ಗ ಡಬಲ್ ಡೆಕರ್ (ಮೆಟ್ರೊ-ಕಮ್-ರೋಡ್) ಮಾದರಿಯಲ್ಲಿ ನಿರ್ಮಾಣವಾಗಲಿದೆ. ರಸ್ತೆಗಾಗಿ ಪ್ರತಿ ಕಿಲೋಮೀಟರ್‌ಗೆ ₹120 ಕೋಟಿ ವೆಚ್ಚವಾಗಲಿದೆ. 44.65 ಕಿ.ಮೀ. ರಸ್ತೆಗೆ ₹5,358 ಕೋಟಿ ಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ. ಬಿಬಿಎಂಪಿ ಅಥವಾ ರಾಜ್ಯ ಸರ್ಕಾರ ಈ ವೆಚ್ಚವನ್ನು ಭರಿಸಲಿದೆ. ಪ್ರಸ್ತಾವಕ್ಕೆ ತಾತ್ವಿಕವಾಗಿ ಒಪ್ಪಿಗೆ ನೀಡಲಾಗಿದ್ದರೂ ರಾಜ್ಯ ಸಚಿವ ಸಂಪುಟದ ಅನುಮತಿಗಾಗಿ ಬಿಎಂಆರ್‌ಸಿಎಲ್‌ ಕಾಯುತ್ತಿದೆ.

ಸುರಂಗ ಮಾರ್ಗಗಳು ಇರುವುದಿಲ್ಲ

ಕಿತ್ತಳೆ ಮಾರ್ಗ ಎಂದೂ ಕರೆಯಲಾಗುವ 3ನೇ ಹಂತದಲ್ಲಿ ಸುರಂಗ ಮಾರ್ಗಗಳು ಇರುವುದಿಲ್ಲ. ಸಂಪೂರ್ಣವಾಗಿ ಎತ್ತರಿಸಿದ ಮಾರ್ಗ ಇರಲಿದೆ. ಹೊರವರ್ತುಲ ರಸ್ತೆಯ ಪಶ್ಚಿಮ ಭಾಗ ಮತ್ತು ಮಾಗಡಿ ರಸ್ತೆಯ ಸುತ್ತಲಿನ ಭಾಗವನ್ನು ಮೆಟ್ರೊ ಸಂಪರ್ಕಿಸಲಿದೆ. 2029ರ ವೇಳೆಗೆ ಕಾಮಗಾರಿ ಪೂರ್ಣಗೊಳಿಸಿ ರೈಲು ಸಂಚಾರ ಆರಂಭಿಸುವ ಗುರಿಯನ್ನು ಇಟ್ಟುಕೊಂಡಿದೆ. ಆಗ ಬೆಂಗಳೂರಿನ ಮೆಟ್ರೊ ಜಾಲವು 222.2 ಕಿ.ಮೀ.ಗೆ ವಿಸ್ತರಿಸಲಿದೆ.

3ನೇ ಹಂತಕ್ಕೆ ಎಲ್ಲ ಹಂತದಲ್ಲಿ ಅನುಮೋದನೆಗೊಂಡಿದ್ದು, ಅಂತಿಮವಾಗಿ ಕೇಂದ್ರ ಸರ್ಕಾರ ಕೂಡ ಆಗಸ್ಟ್‌ನಲ್ಲಿ ಒಪ್ಪಿಗೆ ನೀಡಿದೆ. ಈ ಮಾರ್ಗ ಡಬಲ್ ಡೆಕರ್ (ಮೆಟ್ರೊ-ಕಮ್-ರೋಡ್) ಮಾದರಿಯಲ್ಲಿ ನಿರ್ಮಾಣವಾಗಲಿದೆ. ರಸ್ತೆಗಾಗಿ ಪ್ರತಿ ಕಿಲೋಮೀಟರ್‌ಗೆ ₹120 ಕೋಟಿ ವೆಚ್ಚವಾಗಲಿದೆ. 44.65 ಕಿ.ಮೀ. ರಸ್ತೆಗೆ ₹5,358 ಕೋಟಿ ವೆಚ್ಚ ಅಂದಾಜಿಸಲಾಗಿದೆ. ಬಿಬಿಎಂಪಿ ಅಥವಾ ರಾಜ್ಯ ಸರ್ಕಾರ ಈ ವೆಚ್ಚವನ್ನು ಭರಿಸಲಿದೆ. ಪ್ರಸ್ತಾವಕ್ಕೆ ತಾತ್ವಿಕ ಒಪ್ಪಿಗೆ ನೀಡಲಾಗಿದ್ದರೂ ರಾಜ್ಯ ಸಚಿವ ಸಂಪುಟದ ಅನುಮತಿಗಾಗಿ ಬಿಎಂಆರ್‌ಸಿಎಲ್‌ ಕಾಯುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.