ADVERTISEMENT

₹23 ಸಾವಿರ ಕೋಟಿ ವೆಚ್ಚದ ರೈಲು ಯೋಜನೆ: ಉಪನಗರ ರೈಲಿಗೆ ಅನುಮೋದನೆ

ಹೆಬ್ಬಾಳ ಮೂಲಕ ವಿಮಾನ ನಿಲ್ದಾಣಕ್ಕೆ ಮೆಟ್ರೊ

​ಪ್ರಜಾವಾಣಿ ವಾರ್ತೆ
Published 10 ಜನವರಿ 2019, 20:02 IST
Last Updated 10 ಜನವರಿ 2019, 20:02 IST
   

ಬೆಂಗಳೂರು: ನಗರದಲ್ಲಿ ₹23,093 ಕೋಟಿ ವೆಚ್ಚದ ಉಪನಗರ ರೈಲು ಯೋಜನೆ ಹಾಗೂ ಹೆಬ್ಬಾಳ ಮೂಲಕ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ₹10,584 ಕೋಟಿ ವೆಚ್ಚದ ‘ನಮ್ಮ ಮೆಟ್ರೊ’ ಮಾರ್ಗ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ.

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ನಗರಕ್ಕೆ ಭರಪೂರ ಯೋಜನೆಗಳ ಅನುಷ್ಠಾನಕ್ಕೆ ಒಪ್ಪಿಗೆ ನೀಡಲಾಯಿತು. ಈ ಮೂಲಕ ನಗರದ ಜನರಿಗೆ ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿ ಸರ್ಕಾರ ಹೊಸ ವರ್ಷದ ಕೊಡುಗೆ ನೀಡಿದೆ.

ನೈರುತ್ಯ ರೈಲ್ವೆಯು ಯೋಜನೆಯ ಉಪನಗರ ರೈಲು ಯೋಜನೆಯ ವಿಸ್ತೃತ ಯೋಜನಾ ವರದಿಯ (ಡಿಪಿಆರ್‌) ಕರಡನ್ನು ರಾಜ್ಯ ಸರ್ಕಾರಕ್ಕೆ 2018ರ ಡಿಸೆಂಬರ್ 4ರಂದು ಸಲ್ಲಿಸಿತ್ತು. ಈ ಯೋಜನೆಗೆ ₹19 ಸಾವಿರ ಕೋಟಿ ವೆಚ್ಚ ಆಗಲಿದೆ ಎಂದು ರೈಟ್ಸ್‌ ಸಂಸ್ಥೆ ತಿಳಿಸಿತ್ತು. ನಾಲ್ಕು ಕಾರಿಡಾರ್‌ಗಳ ಮೂಲಕ ಯೋಜನೆ ಅನುಷ್ಠಾನ ಮಾಡಲಾಗುತ್ತದೆ ಎಂದು ತಿಳಿಸಲಾಗಿತ್ತು.

ADVERTISEMENT

ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ರೈಲ್ವೆ ಹಾಗೂ ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಯೋಜನೆಯ ಅನುಷ್ಠಾನದ ಬಗ್ಗೆ ಚರ್ಚೆ ನಡೆಸಲಾಗಿತ್ತು. ನಮ್ಮ ಮೆಟ್ರೊದ ಸಮೀಪದಲ್ಲೇ ಉಪನಗರ ರೈಲು ಸಾಗಲಿದ್ದು, ಮಾರ್ಗ
ಬದಲಾವಣೆ ಮಾಡುವುದು ಉತ್ತಮ ಎಂದು ಹಿರಿಯ ಅಧಿಕಾರಿಗಳು ಸಲಹೆ ನೀಡಿದ್ದರು. ಹೀಗಾಗಿ, ಮಾರ್ಗ ಮಾರ್ಪಾಡು ಮಾಡಲು ಒಪ್ಪಿಗೆ ಸೂಚಿಸಲಾಯಿತು. ಆರು ಕಾರಿಡಾರ್‌ಗಳು ನಿರ್ಮಾಣವಾಗಲಿದ್ದು, ಯೋಜನಾ ವೆಚ್ಚ ಹಿಗ್ಗಲಿದೆ.

ಈ ಯೋಜನೆಗೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ತಲಾ ಶೇ 20 ಭರಿಸಲಿವೆ. ಉಳಿದ ಮೊತ್ತವನ್ನು (ಶೇ 60) ಸಾಲ ಪಡೆಯಲಾಗುತ್ತದೆ ಎಂದು ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ ಸುದ್ದಿಗಾರರಿಗೆ ತಿಳಿಸಿದರು.

ಪ್ರಸ್ತಾವಿತ ಜೋಡಣೆ ಹಾಗೂ ಆರು ಕಾರಿಡಾರ್‌ಗಳಲ್ಲಿ 81 ನಿಲ್ದಾಣಗಳನ್ನು ಒಳಗೊಂಡ 160.50 ಕಿ.ಮೀ. ಜಾಲ ನಿರ್ಮಾಣ ಮಾಡಲಾಗುತ್ತದೆ ಎಂದು ಅವರು ವಿವರ ನೀಡಿದರು.

2025, 2031 ಹಾಗೂ 2041ಕ್ಕೆ ಅನುಕ್ರಮವಾಗಿ 9.28ಲಕ್ಷ ಪ್ರಯಾಣಿಕರು, 12.41 ಲಕ್ಷ ಹಾಗೂ 16.83 ಲಕ್ಷ ಪ್ರಯಾಣಿಕರು ಸಂಚಾರ ಮಾಡಲಿದ್ದಾರೆ ಎಂದು ಅಂದಾಜಿಸಲಾಗಿದೆ. ಈ ಯೋಜನೆಯನ್ನು ಆರು ವರ್ಷಗಳಲ್ಲಿ ಪೂರ್ಣಗೊಳಿಸಲುಉದ್ದೇಶಿಸಲಾಗಿದೆ.

ವಿಮಾನ ನಿಲ್ದಾಣಕ್ಕೆ ಮೆಟ್ರೊ: ಬದಲಿ ಮಾರ್ಗಕ್ಕೆ ಅಸ್ತು

ಬೆಂಗಳೂರು: ದೇವನಹಳ್ಳಿಯ ಅಂತರರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಮೆಟ್ರೊ ಸಂಪರ್ಕ ಕಲ್ಪಿಸಲು ಈ ಹಿಂದೆ ಅಂತಿಮಗೊಳಿಸಿದ್ದ ಮಾರ್ಗವನ್ನು ಮಾರ್ಪಾಡು ಮಾಡುವ ಬೆಂಗಳೂರು ಮೆಟ್ರೊ ರೈಲು ನಿಗಮದ (ಬಿಎಂಆರ್‌ಸಿಎಲ್‌) ಪ್ರಸ್ತಾವಕ್ಕೆ ರಾಜ್ಯ ಸಚಿವ ಸಂಪುಟ ಗುರುವಾರ ಒಪ್ಪಿಗೆ ನೀಡಿದೆ.

ಈ ಹಿಂದೆ ಗೊಟ್ಟಿಗೆರೆ– ನಾಗವಾರ ಮಾರ್ಗವನ್ನು ವಿಮಾನ ನಿಲ್ದಾಣದವರೆಗೆ ವಿಸ್ತರಿಸಲು ಬಿಎಂಆರ್‌ಸಿಎಲ್‌ ನಿರ್ಧರಿಸಿತ್ತು. 29.8 ಕಿ.ಮೀ ಉದ್ದದ ಈ ಮಾರ್ಗವು ನಾಗವಾರದ ಬಳಿಕ ರಾಮಕೃಷ್ಣ ಹೆಗಡೆ ನಗರ, ಕೋಗಿಲು ಕ್ರಾಸ್‌, ಜಕ್ಕೂರು, ಜಿಕೆವಿಕೆ, ಟ್ರಂಪೆಟ್‌ ಮೂಲಕ ವಿಮಾನನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುತ್ತಿತ್ತು. ಇದಕ್ಕೆ ₹ 5,950 ಕೋಟಿ ವೆಚ್ಚವಾಗುತ್ತದೆ ಎಂದು ಅಂದಾಜು ಮಾಡಲಾಗಿತ್ತು. ಜಕ್ಕೂರು ಬಳಿ ಹಾದುಹೋಗಿರುವ ಪೆಟ್ರೋಲಿಯಂ ಕೊಳವೆಮಾರ್ಗವನ್ನು ಸ್ಥಳಾಂತರಗೊಳಿಸುವುದು ಕಷ್ಟಸಾಧ್ಯವಾದ ಕಾರಣ ಮೆಟ್ರೊ ಮಾರ್ಗವನ್ನು ಬದಲಿಸಲು ನಿಗಮವು ಮುಂದಾಗಿದೆ.

ನಮ್ಮ ಮೆಟ್ರೊ ಎರಡನೇ ಹಂತದಲ್ಲಿ ಸಿಲ್ಕ್‌ಬೋರ್ಡ್‌ನಿಂದ ಕೆ.ಆರ್‌.ಪುರವರೆಗೆ ನಿರ್ಮಾಣವಾಗಲಿರುವ ಎತ್ತರಿಸಿದ ಮಾರ್ಗವನ್ನೇ ವಿಮಾನನಿಲ್ದಾಣದವರೆಗೆ ವಿಸ್ತರಿಸಲು ನಿಗಮ ನಿರ್ಧರಿಸಿದೆ. ಈ ಹಿಂದೆ ಅಂತಿಮಗೊಳಿಸಿದ್ದ ಮಾರ್ಗಕ್ಕೆ ಹೋಲಿಸಿದರೆ ಹೊಸ ಮಾರ್ಗಕ್ಕೆ ₹ 4,634 ಕೋಟಿಗಳಷ್ಟು ಹೆಚ್ಚುವರಿ ವೆಚ್ಚವಾಗಲಿದೆ. ಈ ಪ್ರಸ್ತಾವಕ್ಕೆ ಸಂಪುಟದ ಅಂಗೀಕಾರ ಸಿಕ್ಕಂತಾಗಿದೆ.

ಹೊಸ ಮಾರ್ಗವು ಕೆಆರ್‌ಪುರ– ಹೆಬ್ಬಾಳ– ಯಲಹಂಕ– ಜಿಕೆವಿಕೆ– ಟ್ರಂಪೆಟ್‌ ಮೂಲಕ ವಿಮಾನನಿಲ್ದಾಣವನ್ನು ತಲುಪಲಿದೆ. ಇದರ ಮೂಲಕ ಹೆಬ್ಬಾಳಕ್ಕೂ ಮೆಟ್ರೊ ಸಂಪರ್ಕ ಸಿಕ್ಕಂತಾಗುತ್ತದೆ. ಹೆಬ್ಬಾಳ ಮೇಲ್ಸೇತುವೆ ಸಮೀಪದಲ್ಲಿ (ವರ್ತುಲ ರಸ್ತೆ ಪಕ್ಕ) ಹಾಗೂ ಕೊಡಿಗೆಹಳ್ಳಿಯಲ್ಲಿ ಮೆಟ್ರೊ ನಿಲ್ದಾಣಗಳು ನಿರ್ಮಾಣವಾಗಲಿವೆ.ನಾಗವಾರದಲ್ಲಿ ಇಂಟರ್‌ಚೇಂಜ್‌ ನಿಲ್ದಾಣ ನಿರ್ಮಾಣವಾಗಲಿದೆ.

‘ಹೊಸ ಮಾರ್ಗದಿಂದಾಗಿ ಸೆಂಟ್ರಲ್‌ ಸಿಲ್ಕ್‌ ಬೋರ್ಡ್‌ನಿಂದ ವಿಮಾನನಿಲ್ದಾಣದವರೆಗೆ ನೇರವಾಗಿ ಮೆಟ್ರೊದಲ್ಲಿ ಪ್ರಯಾಣಿಸಬಹುದು’ ಎಂದು ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಅಜಯ್‌ ಸೇಠ್‌ ತಿಳಿಸಿದರು. ‘ಭೂಸ್ವಾಧೀನ, ಅಗತ್ಯ ಪೂರ್ವ ಕಾಮಗಾರಿಗಳನ್ನು ನಡೆಸಲು ನಾವು ಈಗಾಗಲೇ ಒಪ್ಪಿಗೆ ಪಡೆದಿದ್ದೇವೆ. ಆ ಬಳಿಕ ಕೇಂದ್ರದ ಒಪ್ಪಿಗೆ ಪಡೆಯಲಾಗುತ್ತದೆ’ ಎಂದರು.

ನಮ್ಮ ಮೆಟ್ರೊ 2ಎ ಹಂತದಲ್ಲಿ ಕೆ.ಆರ್‌.ಪುರ– ಸಿಲ್ಕ್‌ ಬೋರ್ಡ್‌ ನಡುವೆ ನಿರ್ಮಿಸಲಾಗುತ್ತಿರುವ ಮೆಟ್ರೊ ಮಾರ್ಗದ ವೆಚ್ಚವನ್ನು ₹ 4,202 ಕೋಟಿಯಿಂದ ₹ 5,994 ಕೋಟಿಗೆ ಹೆಚ್ಚಳ ಮಾಡುವ ಪ್ರಸ್ತಾಪಕ್ಕೂ ಸಂಪುಟ ಒಪ್ಪಿಗೆ ನೀಡಿದೆ.

**

ಅಂಕಿ ಅಂಶ

38 ಕಿ.ಮೀ:ಕೆ.ಆರ್‌.ಪುರದಿಂದ ಹೆಬ್ಬಾಳ ಮೂಲಕ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗದ ಉದ್ದ

₹ 10,584 ಕೋಟಿ:ಹೊಸ ಮಾರ್ಗಕ್ಕೆ ತಗಲುವ ಅಂದಾಜು ವೆಚ್ಚ

45 ತಿಂಗಳು:‌ಕಾಮಗಾರಿ ಪೂರ್ಣಗೊಳಿಸಲು ನಿಗದಿಪಡಿಸಿದ ಗಡುವು

**

ಚಲ್ಲಘಟ್ಟದಲ್ಲಿ ಮೆಟ್ರೊ ನಿಲ್ದಾಣ

ಎರಡನೇ ಹಂತದಲ್ಲಿ ಬೈಯಪ್ಪನಹಳ್ಳಿ– ಮೈಸೂರು ರಸ್ತೆ ಮೆಟ್ರೊ ಮಾರ್ಗವನ್ನು ಕೆಂಗೇರಿವರೆಗೆ ವಿಸ್ತರಿಸಲು ಹಾಗೂ ಚಲ್ಲಘಟ್ಟದಲ್ಲಿ ಡಿಪೊ ನಿರ್ಮಿಸಲು ನಿರ್ಧರಿಸಲಾಗಿತ್ತು. ಚಲ್ಲಘಟ್ಟದಲ್ಲಿ ₹ 140 ಕೋಟಿ ವೆಚ್ಚದಲ್ಲಿ ಹೊಸ ಮೆಟ್ರೊ ನಿಲ್ದಾಣ ನಿರ್ಮಿಸುವ ಪ್ರಸ್ತಾಪಕ್ಕೂ ಸಂಪುಟ ಒಪ್ಪಿಗೆ ನೀಡಿದೆ.

ಚಲ್ಲಘಟ್ಟದವರೆಗೆ ಮೆಟ್ರೊ ನಿಲ್ದಾಣ ನಿರ್ಮಾಣವಾದರೆ ನಾಡಪ್ರಭು ಕೆಂಪೇಗೌಡ ಬಡಾವಣೆಯ ನಿವಾಸಿಗಳಿಗೂ ಅನುಕೂಲವಾಗಲಿದೆ. ಈ ಡಿಪೊ ಬಳಿಯಿಂದ 100 ಅಡಿ ರಸ್ತೆಯು ಈ ಬಡಾವಣೆ ಮೂಲಕ ಹಾದು ಹೋಗಲಿದೆ. ನಾಡಪ್ರಭು ಕೆಂಪೇಗೌಡ ಬಡಾವಣೆ ನಿವೇಶನದಾರರ ಸಂಘದವರು ಇತ್ತೀಚೆಗೆ ಬಿಡಿಎ ಹಾಗೂ ಬಿಎಂಆರ್‌ಸಿಎಲ್‌ ಅಧಿಕಾರಿಗಳನ್ನು ಭೇಟಿಯಾಗಿ ಚಲ್ಲಘಟ್ಟ ಡಿಪೊ ಬಳಿ ಹೊಸ ಮೆಟ್ರೊ ನಿಲ್ದಾಣ ನಿರ್ಮಿಸುವಂತೆ ಒತ್ತಾಯಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.