ADVERTISEMENT

ಮೆಟ್ರೊ ಪ್ರಯಾಣಿಕರ ಸಂಖ್ಯೆ ಹೆಚ್ಚಿಸಿದ ಸೇತುವೆ

​ಪ್ರಜಾವಾಣಿ ವಾರ್ತೆ
Published 2 ಮೇ 2019, 19:30 IST
Last Updated 2 ಮೇ 2019, 19:30 IST
ರೈಲ್ವೆ ನಿಲ್ದಾಣದ ಪ್ಲಾಟ್‌ಫಾರ್ಮ್‌ 10 ಹಾಗೂ ಮೆಟ್ರೊ ನಿಲ್ದಾಣದ ನಡುವೆ ನಿರ್ಮಾಣವಾಗಿರುವ ಸೇತುವೆ–ಪ್ರಜಾವಾಣಿ ಚಿತ್ರ
ರೈಲ್ವೆ ನಿಲ್ದಾಣದ ಪ್ಲಾಟ್‌ಫಾರ್ಮ್‌ 10 ಹಾಗೂ ಮೆಟ್ರೊ ನಿಲ್ದಾಣದ ನಡುವೆ ನಿರ್ಮಾಣವಾಗಿರುವ ಸೇತುವೆ–ಪ್ರಜಾವಾಣಿ ಚಿತ್ರ   

ಬೆಂಗಳೂರು:ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ ಹಾಗೂ ಮೆಟ್ರೊ ನಿಲ್ದಾಣದ ನಡುವೆ ನಿರ್ಮಿಸಲಾಗಿರುವ ಸೇತುವೆಯಿಂದಾಗಿ ಮೆಟ್ರೊಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ.

ಮೆಟ್ರೊ ನಿಲ್ದಾಣ ಹಾಗೂ ರೈಲ್ವೆ ನಿಲ್ದಾಣದ ಪ್ಲಾಟ್‌ಫಾರ್ಮ್‌ 10ರ ನಡುವೆ ಈ ಸೇತುವೆ ಸಂಪರ್ಕ ಕಲ್ಪಿಸುತ್ತದೆ.

ಫೆಬ್ರುವರಿ ತಿಂಗಳವರೆಗೆ ಪ್ರತಿದಿನ 4,599 ಪ್ರಯಾಣಿಕರು ಮಾತ್ರ ಈ ಮೆಟ್ರೊ ನಿಲ್ದಾಣ ಬಳಸಿದ್ದರು. ಈ ಹಿಂದೆ300 ಮೀಟರ್‌ ದೂರದಮೆಟ್ರೊ ನಿಲ್ದಾಣಕ್ಕೆ ಹೋಗಲು ಪ್ರಯಾಣಿಕರು ಪ್ರಯಾಸಪಡುತ್ತಿದ್ದರು. ಬೆಳಕಿನ ವ್ಯವಸ್ಥೆ ಇಲ್ಲದ, ಹಾಳಾಗಿದ್ದರಸ್ತೆಯ ಬಗ್ಗೆಮಹಿಳಾ ಪ್ರಯಾಣಿಕರು ಅಧಿಕಾರಿಗಳಿಗೆ ದೂರು ನೀಡಿದ್ದರು.

ADVERTISEMENT

ಫೆಬ್ರುವರಿ 18ರಂದು ರೈಲ್ವೆ–ಮೆಟ್ರೊ ನಿಲ್ದಾಣಗಳಿಗೆ ಸಂಪರ್ಕಿಸುವ ಸೇತುವೆಯನ್ನು ಉದ್ಘಾಟನೆ ಮಾಡಲಾಯಿತು. ಪ್ರಯಾಣಿಕರಿಗೆ ಎರಡೂ ನಿಲ್ದಾಣಗಳುಸಮೀಪಕ್ಕೆ ಬಂದಂತಾಗಿದೆ.

‘ಸೇತುವೆ ಉದ್ಘಾಟನೆಯಾದ ಬಳಿಕ ಈ ನಿಲ್ದಾಣವನ್ನು ಬಳಸುವ ಮೆಟ್ರೊ ಪ್ರಯಾಣಿಕರ ಸಂಖ್ಯೆ ತಿಂಗಳಿಗೆ 25 ಸಾವಿರದಷ್ಟು ಏರಿಕೆಯಾಗಿದೆ. ಈಗ ರೈಲು ಪ್ರಯಾಣಿಕರು ಮೆಜೆಸ್ಟಿಕ್‌ ಮೆಟ್ರೊ ನಿಲ್ದಾಣದ ಬದಲಿಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೆಟ್ರೊ ನಿಲ್ದಾಣವನ್ನೇ ಹೆಚ್ಚಾಗಿ ಬಳಸುತ್ತಿದ್ದಾರೆ. ಈ ವ್ಯವಸ್ಥೆ ಬಗ್ಗೆ ಜನರಿಗೆ ಹೆಚ್ಚಿನ ಮಾಹಿತಿ ಇಲ್ಲ. ವಿಷಯ ತಿಳಿದರೆ ಪ್ರಯಾಣಿಕರ ಸಂಖ್ಯೆ ಮತ್ತಷ್ಟು ಹೆಚ್ಚಳವಾಗಲಿದೆ’ ಎಂದು ನಿಗಮದ ಕಾರ್ಯನಿರ್ವಾಹಕ ನಿರ್ದೇಶಕ ಎ.ಎಸ್‌.ಶಂಕರ್‌ ಮಾಹಿತಿ ನೀಡಿದರು.

ಪ್ರಸ್ತುತ ಈ ನಿಲ್ದಾಣವನ್ನು ತಿಂಗಳಿಗೆ 2 ಲಕ್ಷ ಮಂದಿ ಪ್ರಯಾಣಿಕರು ಬಳಸುತ್ತಿದ್ದಾರೆ.

ಬೇರೆ ನಿಲ್ದಾಣಗಳಿಗೆ ಹೋಲಿಸಿದರೆ ಈ ಪ್ರಮಾಣ ಕಡಿಮೆ. ಮೊದಲು 1.75 ಲಕ್ಷ ಇದ್ದ ಪ್ರಯಾಣಿಕರ ಸಂಖ್ಯೆ ಕೇವಲ ಎರಡು ತಿಂಗಳ ಅವಧಿಯಲ್ಲಿ 2 ಲಕ್ಷಕ್ಕೆ ಏರಿಕೆಯಾಗಿದೆ. ಇದರಿಂದ ಶೀಘ್ರದಲ್ಲೇ ಪ್ರಯಾಣಿಕರ ಸಂಖ್ಯೆ ಮತ್ತಷ್ಟು ಹೆಚ್ಚಳವಾಗುವ ವಿಶ್ವಾಸವಿದೆ ಎಂದು ಅವರು ತಿಳಿಸಿದರು.

ಕೆಟ್ಟು ನಿಂತ ಎಸ್ಕಲೇಟರ್‌: ಹೊಸ ಸೇತುವೆ ಬಂದು ಪ್ರಯಾಣಿಕರಿಗೆ ಒಂದೆಡೆ ಅನುಕೂಲವಾದರೆ ಮತ್ತೊಂದೆಡೆ ಮೆಟ್ರೊ ನಿಲ್ದಾಣದಲ್ಲಿರುವ ಎಸ್ಕಲೇಟರ್‌ ಕೆಟ್ಟು ನಿಂತಿದೆ.

ಇದರಿಂದಸೇತುವೆವರೆಗೆ ಸುಲಭವಾಗಿ ಸಂಚರಿಸುತ್ತಿದ್ದ ಪ್ರಯಾಣಿಕರಿಗೆ ಸಮಸ್ಯೆ ಎದುರಾಗಿದೆ.

‘ಈ ಬಗ್ಗೆ ಹಲವು ಪ್ರಯಾಣಿಕರು ದೂರು ನೀಡಿದ್ದಾರೆ. ಸುರಕ್ಷಾ ತಪಾಸಣೆ ವಿಳಂಬವಾದ ಕಾರಣ ಸಮಸ್ಯೆಯಾಗಿದೆ. ಎರಡು ಮೂರು ದಿನಗಳಲ್ಲಿಎಸ್ಕಲೇಟರ್‌ ಕಾರ್ಯನಿರ್ವಹಿಸಲಿದೆ’ ಎಂದು ಮೆಟ್ರೊ ಅಧಿಕಾರಿಗಳು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.