
‘ನಮ್ಮ ಮೆಟ್ರೊ’ ಗುಲಾಬಿ ಮಾರ್ಗದ ನಾಗವಾರ ನಿಲ್ದಾಣದಲ್ಲಿ ನಿರ್ಮಾಣಗೊಳ್ಳಲಿರುವ ವಾಣಿಜ್ಯ ಸಂಕೀರ್ಣ
ಬೆಂಗಳೂರು: ‘ನಮ್ಮ ಮೆಟ್ರೊ’ ಗುಲಾಬಿ ಮಾರ್ಗದ ಟರ್ಮಿನಲ್ ಆಗಿರುವ ನಾಗವಾರ ನಿಲ್ದಾಣದಲ್ಲಿ ನಾಲ್ಕು ಅಂತಸ್ತಿನ ವಾಣಿಜ್ಯ ಸಂಕೀರ್ಣ, ಬಹುಮಹಡಿ ಪಾರ್ಕಿಂಗ್ ನಿರ್ಮಾಣಗೊಳ್ಳುತ್ತಿದೆ. ಸ್ಥಳಾವಕಾಶ ಬೇಡಿಕೆ ಬಗ್ಗೆ ಅಭಿಪ್ರಾಯಗಳನ್ನು ಬಿಎಂಆರ್‌ಸಿಎಲ್ ಆಹ್ವಾನಿಸಿದೆ.
ಡೆವಲಪರ್‌ಗಳು, ಕಾರ್ಪೊರೇಟ್ ಸಂಸ್ಥೆಗಳು, ನಿರ್ವಾಹಕರು, ವ್ಯಾಪಾರಿಗಳು ಮತ್ತು ಚಿಲ್ಲರೆ ಅಥವಾ ಮಾಲ್ ನಡೆಸುವವರು ಕಚೇರಿಗೆ ಅಥವಾ ವ್ಯಾಪಾರಕ್ಕೆ ಸ್ಥಳಾವಕಾಶ ಕೋರಿ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದೆ.
ನಾಗವಾರದ ಭೂಗತ ನಿಲ್ದಾಣದ ಪಕ್ಕದಲ್ಲಿ 3,225.73 ಚದರ ಮೀಟರ್ ವಿಸ್ತೀರ್ಣ ಲಭ್ಯವಿದೆ. ಕಟ್ಟಡದ ನಿಯಮಗಳ ಪ್ರಕಾರ ಬಹು ಹಂತದ ಪಾರ್ಕಿಂಗ್ ಸೌಲಭ್ಯಗಳ ಅಭಿವೃದ್ಧಿಗೆ ಬಳಕೆಯಾಗಲಿದೆ ಎಂದು ತಿಳಿಸಿದೆ.
ವಾಣಿಜ್ಯ ಸಂಕೀರ್ಣದಲ್ಲಿ ಮೊದಲ ಎರಡು ಮಹಡಿಗಳನ್ನು ಕಂಬ, ಬೀಮ್ ಮತ್ತು ತೊಲೆಗಳೊಂದಿಗೆ ಪೂರ್ಣಗೊಳಿಸಲಾಗಿದೆ. ಗೋಡೆಗಳ ಕೆಲಸವಷ್ಟೇ ಬಾಕಿ ಇದೆ. ಉಳಿದ ಎರಡು ಮಹಡಿಗಳನ್ನು 10 ತಿಂಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ಈ ಸ್ಥಳವು ಗ್ರೇಡ್ ‘ಎ’ ಕಚೇರಿಗಳು, ಕಾರ್ಯ ಕೇಂದ್ರಗಳು ಅಥವಾ ಪ್ರೀಮಿಯಂ ಶಾಪಿಂಗ್ ಮಾಲ್‌ಗಳಿಗೆ ಸೂಕ್ತವಾಗಿದೆ. ಮೆಟ್ರೊ ನಿಲ್ದಾಣದ ಕಾನ್ಕೋರ್ಸ್ ಮತ್ತು ಪ್ಲಾಟ್‌ಫಾರ್ಮ್‌ಗಳಿಗೆ ಮೀಸಲಾದ ಲಿಫ್ಟ್‌ಗಳು ಮತ್ತು ಎಸ್ಕಲೇಟರ್‌ಗಳನ್ನು ಸಂಯೋಜಿಸಲು ಅವಕಾಶವಿದೆ. ಎಂಬೆಸಿ ಮಾನ್ಯತಾ ಬಿಸಿನೆಸ್ ಪಾರ್ಕ್, ಕಾರ್ಲೆ ಟೌನ್ ಸೆಂಟರ್ ಮತ್ತು ಇತರ ಐಟಿ, ವಾಣಿಜ್ಯ ಕೇಂದ್ರಗಳಿಗೆ ಹತ್ತಿರವಿದೆ. 2026ರಲ್ಲಿ ಗುಲಾಬಿ ಮಾರ್ಗದಲ್ಲಿ ಮೆಟ್ರೊ ಸಂಚಾರ ಆರಂಭವಾಗಲಿದೆ.
ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ನೀಲಿ ಮಾರ್ಗವು ನಾಗವಾರದಲ್ಲಿ ಎತ್ತರಿಸಿದ ನಿಲ್ದಾಣದ ಮೂಲಕ ಹಾದು ಹೋಗಲಿದ್ದು, 2027ರಲ್ಲಿ ಆರಂಭಗೊಳ್ಳಲಿದೆ.
ಸದ್ಯ ಇಲ್ಲಿ ಉದ್ಯಮಿಗಳ ಆಸಕ್ತಿಯನ್ನು ತಿಳಿಯುವುದಕ್ಕಾಗಿ ಆಹ್ವಾನ ನೀಡಲಾಗಿದೆ. ಡಿಸೆಂಬರ್ 15ರ ಒಳಗೆ ಆಸಕ್ತರು ಪ್ರಸ್ತಾವ ಸಲ್ಲಿಸಬೇಕು. ಇದುವೇ ಅಂತಿಮವಲ್ಲ. ಬಿಎಂಆರ್‌ಸಿಎಲ್ ಎಲ್ಲ ಇಒಐ (ಆಸಕ್ತಿಯ ಅಭಿವ್ಯಕ್ತಿ) ಗಳನ್ನು ಮೌಲ್ಯಮಾಪನ ಮಾಡುತ್ತದೆ. ಸ್ವೀಕರಿಸಿದ ಪರಿಕಲ್ಪನೆ ಮತ್ತು ಪ್ರತಿಕ್ರಿಯೆಗಳ ಆಧಾರದಲ್ಲಿ ಅಭಿವೃದ್ಧಿ ಮಾದರಿಯನ್ನು ಅಂತಿಮಗೊಳಿಸಲಾಗುವುದು. ಬಳಿಕ ಟೆಂಡರ್ ಕರೆಯಲಾಗುವುದು ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ಮೂರನೇ ಆಸ್ತಿ ಅಭಿವೃದ್ಧಿ ಯೋಜನೆ
ಈ ವರ್ಷ ಬಿಎಂಆರ್‌ಸಿಎಲ್ ಘೋಷಿಸಿದ ಮೂರನೇ ಆಸ್ತಿ ಅಭಿವೃದ್ಧಿ ಯೋಜನೆ ಇದಾಗಿದೆ. ಕೆಆರ್ ಪುರ ಮೆಟ್ರೊ ನಿಲ್ದಾಣದ ಬಳಿ 1.66 ಎಕರೆ ವಿಸ್ತೀರ್ಣದಲ್ಲಿ ನೆಲಮಾಳಿಗೆಯ ಪಾರ್ಕಿಂಗ್ ಹೊಂದಿರುವ 11 ಅಂತಸ್ತಿನ ವಾಣಿಜ್ಯ ಕಟ್ಟಡ ನಿರ್ಮಿಸಲು ಈಗಾಗಲೇ ಯೋಜನೆ ರೂಪಿಸಿದೆ. ಮೆಜೆಸ್ಟಿಕ್‌ನಲ್ಲಿ ಮೆಟ್ರೊ ನಿಲ್ದಾಣದ ಮೇಲಿರುವ 31920 ಚದರ ಮೀಟರ್ ಸ್ಥಳದಲ್ಲಿ 10 ಲಕ್ಷ ಚದರ ಮೀಟರ್ ವಾಣಿಜ್ಯ ಸಂಕೀರ್ಣ ಹಾಗೂ ಪಾರ್ಕಿಂಗ್ ಸೌಲಭ್ಯ ಕಲ್ಪಿಸಲು ಯೋಜನೆ ರೂಪಿಸಲಾಗಿದೆ.
ಪಾರ್ಕಿಂಗ್
ಥಣಿಸಂದ್ರ ಮುಖ್ಯ ರಸ್ತೆಯಲ್ಲಿರುವ ನಾಗವಾರ ಭೂಗತ ನಿಲ್ದಾಣದ ಪಕ್ಕದಲ್ಲಿ 3225.73 ಚದರ ಮೀಟರ್ ವಿಸ್ತೀರ್ಣದ ಬಹುಮಹಡಿ ಪಾರ್ಕಿಂಗ್ ಇರಲಿದೆ. 1927.94 ಚದರ ಮೀಟರ್ ಮತ್ತು 1297.79 ಚದರ ಮೀಟರ್‌ನ ಎರಡು ವಿಭಾಗಗಳಾಗಿ ವಿಂಗಡಿಸಲಾಗಿದೆ. 615 ಕಾರುಗಳು ಮತ್ತು 161 ದ್ವಿಚಕ್ರ ವಾಹನಗಳನ್ನು ನಿಲ್ಲಿಸುವ ಸಾಮರ್ಥ್ಯ ಇರಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.