ಬೆಳಗಾವಿ: ‘ಮುಂದಿನ ದಿನಗಳಲ್ಲಿ ಸಂಚಾರ ದಟ್ಟಣೆ ಗಮನದಲ್ಲಿಟ್ಟುಕೊಂಡು, ‘ನಮ್ಮ ಮೆಟ್ರೊ’ ಮಾರ್ಗವನ್ನು ಹೊಸಕೋಟೆ, ನೆಲಮಂಗಲ ಹಾಗೂ ಬಿಡದಿಯವರೆಗೆ ವಿಸ್ತರಿಸವು ಪ್ರಸ್ತಾವ ಸರ್ಕಾರದ ಮುಂದಿದೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ವಿಧಾನಸಭೆ ಕಲಾಪದಲ್ಲಿ ಕಾಂಗ್ರೆಸ್ ಶಾಸಕ ಶರತ್ ಬಚ್ಛೆಗೌಡ ಅವರು ಹೊಸಕೋಟೆಗೆ ಮೆಟ್ರೊ ಮಾರ್ಗ ವಿಸ್ತರಣೆ ವಿಚಾರವಾಗಿ ಕೇಳಿದ ಪ್ರಶ್ನೆಗೆ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆದ ಶಿವಕುಮಾರ್ ಅವರು ಗುರುವಾರ ಉತ್ತರಿಸಿದರು.
‘ಈ ವಿಚಾರವಾಗಿ ಶರತ್ ಅವರು ಬಹಳ ಹೋರಾಟ ಮಾಡುತ್ತಿದ್ದಾರೆ. ಬೆಂಗಳೂರು ಕೂಡ ವಿಪರೀತ ಬೆಳೆಯುತ್ತಿದೆ. ಸಾಮಾನ್ಯ ರೈಲಿನಲ್ಲಿ ಕೋಲಾರದಿಂದ ಸುಮಾರು 10 ಸಾವಿರಕ್ಕೂ ಹೆಚ್ಚು ಜನ ದಿನ ನಿತ್ಯ ಸಂಚರಿಸುತ್ತಾರೆ. ಐಟಿ ಕಾರಿಡಾರ್ ಬಹುತೇಕ ಹೊಸಕೋಟೆ ಮುಟ್ಟಿದೆ. ಹೀಗಾಗಿ ಮೆಟ್ರೊ ಅವಶ್ಯಕತೆ ಇದೆ’ ಎಂದು ತಿಳಿಸಿದರು.
‘ಮಾರ್ಗ ವಿಸ್ತರಣೆ ವಿಚಾರವನ್ನು ಈಗಾಗಲೇ ಯೋಜನೆಯಲ್ಲಿ ಸೇರಿಸಿ ವಿಸ್ತೃತ ಸಮೀಕ್ಷೆ ಮಾಡಿಸುತ್ತಿದ್ದೇನೆ. ಸರ್ಕಾರ ಹಾಗೂ ಮೆಟ್ರೊ ಸಂಸ್ಥೆ ಮನವಿಯನ್ನು ಸಹಾನುಭೂತಿಯಿಂದ ಪರಿಗಣಿಸಿದೆ. ಹೊಸಕೋಟೆ ಜತೆಗೆ ಬಿಡದಿ, ನೆಲಮಂಗಲದವರೆಗೂ ಮೆಟ್ರೊ ಮಾರ್ಗ ವಿಸ್ತರಣೆ ಯೋಜನೆ ಸಿದ್ಧಡಿಸಲು ವರದಿ ರೂಪಿಸಲಾಗುತ್ತಿದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.