ADVERTISEMENT

ಬೆಂಗಳೂರು ಮೆಟ್ರೊ ಪ್ರಯಾಣದರ ಏರಿಕೆ ಶೀಘ್ರ?

ಬಾಲಕೃಷ್ಣ ಪಿ.ಎಚ್‌
Published 5 ಜನವರಿ 2025, 23:30 IST
Last Updated 5 ಜನವರಿ 2025, 23:30 IST
ನಮ್ಮ ಮೆಟ್ರೊ ರೈಲು
ನಮ್ಮ ಮೆಟ್ರೊ ರೈಲು   

ಬೆಂಗಳೂರು: ಸಾರಿಗೆ ನಿಗಮಗಳ ಬಸ್‌ಗಳ ಟಿಕೆಟ್‌ ದರ ಏರಿಕೆಯಾದ ಬೆನ್ನಲ್ಲೇ ‘ನಮ್ಮ ಮೆಟ್ರೊ’ ಪ್ರಯಾಣ ದರವೂ ಏರಿಕೆಯಾಗಲಿದೆ ಎಂಬ ಚರ್ಚೆ ಆರಂಭವಾಗಿದೆ. ಇದಕ್ಕೆ ಪೂರಕ ಎಂಬಂತೆ ‘ನಮ್ಮ ಮೆಟ್ರೊ’ ದರ ಪರಿಷ್ಕರಣೆಗಾಗಿ ರಚಿಸಿದ್ದ ದರ ನಿಗದಿ ಸಮಿತಿಯು ವರದಿ ಸಲ್ಲಿಸಿದೆ.

ಸದ್ಯ ಮೆಟ್ರೊ ಪ್ರಯಾಣದ ಕನಿಷ್ಠ ದರ ₹ 10 ಹಾಗೂ ಗರಿಷ್ಠ ದರ ₹ 60 ಇದೆ. ಒಂದು ವಾರದ ಒಳಗೆ ನಡೆಯಲಿರುವ ಬಿಎಂಆರ್‌ಸಿಎಲ್‌ ಮಂಡಳಿಯ ಆಂತರಿಕ ಸಭೆಯಲ್ಲಿ ದರ ಏರಿಕೆಯ ಬಗ್ಗೆ ಅಂತಿಮ ತೀರ್ಮಾನವಾಗಲಿದೆ.

2011ರಲ್ಲಿ ಮೆಟ್ರೊ ಸಂಚಾರ ಆರಂಭವಾಗಿದ್ದು, 2017ರಲ್ಲಿ ದರ ಪರಿಷ್ಕರಣೆ ಮಾಡಲಾಗಿತ್ತು. ಮೆಟ್ರೊ ರೈಲ್ವೆ (ಕಾರ್ಯಾಚರಣೆ ಮತ್ತು ನಿರ್ವಹಣೆ) ಕಾಯ್ದೆ, 2002ರ ಸೆಕ್ಷನ್ 33 ಮತ್ತು 34ರ ಅಡಿಯಲ್ಲಿ ಕೇಂದ್ರ ಸರ್ಕಾರ ರಚಿಸಿದ ಬಿಎಂಆರ್‌ಸಿಎಲ್‌ನ ಮೊದಲ ದರ ನಿಗದಿ ಸಮಿತಿ ಇದಾಗಿದೆ.

ADVERTISEMENT

ಮೂವರು ಸದಸ್ಯರಿದ್ದ ಈ ಸಮಿತಿಯು ಸಾರ್ವಜನಿಕರಿಂದ 2,000ಕ್ಕೂ ಅಧಿಕ ಸಲಹೆಗಳನ್ನು ಸ್ವೀಕರಿಸಿತ್ತು. ಸಂಘ ಸಂಸ್ಥೆಗಳೊಂದಿಗೆ, ತಜ್ಞರೊಂದಿಗೆ ಚರ್ಚೆ ನಡೆಸಿತ್ತು. ಮೂಲ ಸೌಕರ್ಯ ಒದಗಿಸುವ ವೆಚ್ಚ, ಇಂಧನ ವೆಚ್ಚ, ಅಧಿಕಾರಿಗಳು ಮತ್ತು ಸಿಬ್ಬಂದಿಯ ವೇತನದ ವೆಚ್ಚ, ಮೆಟ್ರೊ ನಿರ್ವಹಣೆ ವೆಚ್ಚಗಳನ್ನೆಲ್ಲ ಪರಿಗಣಿಸಿದ ಬಳಿಕ ವರದಿ ಸಲ್ಲಿಸಿದೆ.

‘ದರ ಏರಿಕೆಯಾಗುವುದು ನಿಜ. ಎಷ್ಟು ಪ್ರಮಾಣ ಮತ್ತು ಯಾವಾಗ ಎಂಬುದು ಮಂಡಳಿಯಲ್ಲಿ ತೀರ್ಮಾನವಾಗಲಿದೆ. ಒಂದು ತಿಂಗಳ ಒಳಗೆ ಇಲ್ಲವೇ ಹಳದಿ ಮಾರ್ಗದಲ್ಲಿ ರೈಲು ಸಂಚಾರ ಆರಂಭವಾಗುವ ವೇಳೆ ಪರಿಷ್ಕೃತ ದರ ಜಾರಿಯಾಗುವ ಸಾಧ್ಯತೆಗಳಿವೆ. ಫೆಬ್ರುವರಿ ಅಂತ್ಯ ಇಲ್ಲವೇ ಮಾರ್ಚ್‌ ಆರಂಭದಲ್ಲಿ ಹಳದಿ ಮಾರ್ಗದಲ್ಲಿ ರೈಲು ಸಂಚಾರ ಶುರುವಾಗಲಿದೆ’ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೇಂದ್ರ ರೈಲ್ವೆ ಸಚಿವಾಲಯದ ಕಾರ್ಯದರ್ಶಿ ನೇತೃತ್ವದಲ್ಲಿ ಮಂಡಳಿ ಸಭೆ ನಡೆಯಲಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾರ್ಯದರ್ಶಿಗಳು, ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕರು, ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಶೇ 15–20 ದರ ನಿಗದಿ?:

ದರ ನಿಗದಿ ಸಮಿತಿಯು ಶೇ 40ರಷ್ಟು ಶಿಫಾರಸು ಮಾಡಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಆದರೆ, ಅದುವೇ ಅಂತಿಮವಾಗಿರುವುದಿಲ್ಲ. ಮಂಡಳಿಯ ತೀರ್ಮಾನ ಅಂತಿಮವಾಗಿರುತ್ತದೆ. ಪ್ರಯಾಣಿಕರ ಹಿತಾಸಕ್ತಿಯನ್ನೂ ನೋಡಿಕೊಂಡು, ಬಿಎಂಆರ್‌ಸಿಎಲ್‌ಗೂ ನಷ್ಟವಾಗದಂತೆ ದರ ನಿಗದಿಯಾಗಲಿದೆ. ಶೇ 15ರಿಂದ ಶೇ 20ರಷ್ಟು ದರ ಹೆಚ್ಚಳ ಮಾಡುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.

ಸಭೆಯ ಬಳಿಕ ಮಾಹಿತಿ
‘ದರ ನಿಗದಿ ಸಮಿತಿಯು ವರದಿ ಸಲ್ಲಿಸಿದೆ. ಮಂಡಳಿ ಸಭೆ ನಡೆಯುವವರೆಗೆ ದರ ಹೆಚ್ಚಳ ಆಗುತ್ತಾ? ಆಗುವುದಿದ್ದರೆ ಎಷ್ಟು? ಯಾವಾಗಿನಿಂದ ಎಂದೆಲ್ಲ ಈಗಲೇ ಹೇಳಲು ಸಾಧ್ಯವಿಲ್ಲ. ಸಭೆ ನಡೆದ ಬಳಿಕ ಅಧಿಕೃತವಾಗಿ ಮಾಹಿತಿ ನೀಡಲಾಗುವುದು’ ಎಂದು ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಎಸ್‌. ಮಹೇಶ್ವರ ರಾವ್‌ ಪ್ರತಿಕ್ರಿಯಿಸಿದ್ದಾರೆ.
‘ನಿರ್ವಹಣೆ ವೆಚ್ಚ ಕಡಿಮೆ ಮಾಡಿ’
ನಮ್ಮ ಮೆಟ್ರೊದಲ್ಲಿ ಹಲವು ಅನಗತ್ಯ ವೆಚ್ಚಗಳಿವೆ. ಅದಕ್ಕೆಲ್ಲ ಕಡಿವಾಣ ಹಾಕಿದರೆ, ನಿರ್ವಹಣೆಯ ಹೆಸರಲ್ಲಿ ಮಾಡುತ್ತಿರುವ ವೆಚ್ಚದಲ್ಲಿ ಪ್ರತಿ ತಿಂಗಳು ₹2 ಕೋಟಿ ಕಡಿಮೆ ಮಾಡಬಹುದು. ಆಗ ಮೆಟ್ರೊ ಪ್ರಯಾಣ ದರವನ್ನು ಏರಿಸಬೇಕಿಲ್ಲ. ಏರಿಕೆ ಮಾಡಲೇಬೇಕಿದ್ದರೆ ₹5ರಿಂದ ₹10ರ ಒಳಗೆ ಏರಿಸಬಹುದು ಎಂದು ಮೆಟ್ರೊ ಎಂಪ್ಲಾಯಿಸ್‌ ಯೂನಿಯನ್‌ ಉಪಾಧ್ಯಕ್ಷ ಸೂರ್ಯನಾರಾಯಣ ಮೂರ್ತಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.