ADVERTISEMENT

ಸೆ. 5ಕ್ಕೆ ಮೆಟ್ರೊ ರೈಲುಗಳ ಪರೀಕ್ಷೆ ?

ಎರಡೂ ಮಾರ್ಗಗಳಲ್ಲಿ ಎಲ್ಲ ರೈಲುಗಳ ಸಂಚಾರಕ್ಕೆ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2020, 19:34 IST
Last Updated 31 ಆಗಸ್ಟ್ 2020, 19:34 IST
   

ಬೆಂಗಳೂರು: ನಗರದಲ್ಲಿ ಮೆಟ್ರೊ ರೈಲುಗಳ ಸಂಚಾರ ಸೆ.7ರಿಂದ ಪುನರ್‌ ಪ್ರಾರಂಭಿಸಲಾಗುತ್ತಿದ್ದು, ಪೂರ್ವಭಾವಿಯಾಗಿ ಸೆ.5ರಂದೇ ರೈಲುಗಳ ಪರೀಕ್ಷೆ ನಡೆಸಲು ಬೆಂಗಳೂರು ಮೆಟ್ರೊ ರೈಲು ನಿಗಮ ಮುಂದಾಗಿದೆ.

ಲಾಕ್‌ಡೌನ್‌ಗೂ ಮೊದಲಿದ್ದ ವೇಳಾಪಟ್ಟಿಯ ಪ್ರಕಾರ, ಒಂದು ದಿನ ಪರೀಕ್ಷಾರ್ಥ ಸಂಚಾರ ನಡೆಸಲು ನಿರ್ಧರಿಸಲಾಗಿದೆ. ಈ ವೇಳೆ ತಾಂತ್ರಿಕ ಸಮಸ್ಯೆಗಳು ಎದುರಾದಲ್ಲಿ, ಅಂದೇ ಸರಿ ಮಾಡುವ ಉದ್ದೇಶದಿಂದ ನಿಗಮ ಈ ನಿರ್ಧಾರ ಕೈಗೊಂಡಿದೆ. ಅಂದು ಬಹುತೇಕ ಎಲ್ಲ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗುವ ಸಾಧ್ಯತೆ ಇದೆ.

ಕೇಂದ್ರ ಸರ್ಕಾರ ಮೆಟ್ರೊ ರೈಲು ಸೇವೆಗಳ ಪುನರಾರಂಭಕ್ಕೆ ಅನುಮತಿ ನೀಡಿರುವುದರಿಂದ, ಸೋಮವಾರ ಈ ಕುರಿತು ಸಭೆ ನಡೆದಿದೆ. ಅಧಿಕಾರಿಗಳ ಮಟ್ಟದ ಈ ಸಭೆಯಲ್ಲಿ ವಾಣಿಜ್ಯ ಸಂಚಾರ ಪುನರಾರಂಭಿಸಲು ಬೇಕಾದ ಸಿದ್ಧತೆಗಳು, ಕೋವಿಡ್‌ ಮಾರ್ಗಸೂಚಿಗಳ ಪಾಲನೆ, ಬಿಬಿಎಂಪಿಯ ಕೋವಿಡ್-19 ಕರ್ತವ್ಯದಲ್ಲಿರುವ ಸುಮಾರು 550 ಸಿಬ್ಬಂದಿಯನ್ನು ವಾಪಸ್ ಕರೆಸಿಕೊಳ್ಳುವುದು ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚಿಸಲಾಯಿತು ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ADVERTISEMENT

‘ಕೇಂದ್ರದ ನಗರಾಭಿವೃದ್ಧಿ ಸಚಿವಾಲಯದಿಂದ ಒಂದೆರಡು ದಿನಗಳಲ್ಲಿ ಅಧಿಕೃತ ನಿರ್ದೇಶನ ಬರುವ ಸಾಧ್ಯತೆ ಇದೆ. ಜತೆಗೆ ಸೋಂಕು ನಿಯಂತ್ರಣಕ್ಕೆ ಗುಣಮಟ್ಟದ ಕ್ರಮಗಳ (ಎಸ್‌ಒಪಿ) ಬಗ್ಗೆಯೂ ಮಾರ್ಗಸೂಚಿ ಪ್ರಕಟಿಸಲಾಗುತ್ತದೆ. ಅದಕ್ಕೆ ತಕ್ಕಂತೆ ಕೈಗೊಳ್ಳಬೇಕಾದ ಸಿದ್ಧತೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಸೆ. 5ರಂದು ವೇಳಾಪಟ್ಟಿ ಪ್ರಕಾರ ಪರೀಕ್ಷಾರ್ಥವಾಗಿ ಎಲ್ಲ ರೈಲುಗಳನ್ನು ಓಡಿಸಲಾಗುವುದು’ ಎಂದು ಅವರು ತಿಳಿಸಿದರು.

ಬೆಳಿಗ್ಗೆ ಮತ್ತು ಸಂಜೆಯ ವೇಳೆ 5 ನಿಮಿಷಕ್ಕೆ ಒಂದು ಹಾಗೂ ಉಳಿದ ಅವಧಿಯಲ್ಲಿ 10 ರಿಂದ 15 ನಿಮಿಷಗಳ ಅಂತರದಲ್ಲಿ ಈ ರೈಲುಗಳು ಸಂಚರಿಸಲಿವೆ. ಸುಮಾರು 90 ಸುತ್ತುಗಳು ಆಗಬಹುದು ಎಂದು ಅವರು ಮಾಹಿತಿ ನೀಡಿದರು.

‘ಸುದೀರ್ಘ ಐದು ತಿಂಗಳ ನಂತರ ವಾಣಿಜ್ಯ ಸೇವೆ ಪುನಾರಂಭಗೊಳ್ಳುತ್ತಿದೆ. ಈ ಅವಧಿಯಲ್ಲಿ ನಿತ್ಯ ಎರಡೂ ಮಾರ್ಗಗಳಲ್ಲಿ ಎರಡು ರೈಲುಗಳು ಪರೀಕ್ಷಾರ್ಥ ಸಂಚಾರ ನಡೆಸಲಾಗುತ್ತಿತ್ತು. ಆದಾಗ್ಯೂ ಸುರಕ್ಷತೆ ದೃಷ್ಟಿಯಿಂದ ಎರಡು ದಿನ ಮೊದಲೇ ಪರೀಕ್ಷಾರ್ಥ ಸಂಚಾರ ನಡೆಸಲಾಗುವುದು’ ಎಂದೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.