ADVERTISEMENT

₹73 ಕೋಟಿ ಲಾಭ ಗಳಿಸಿದ ‘ಮೆಟ್ರೊ’

ಪ್ರಯಾಣದ ಟೋಕನ್‌ ಮಾರಾಟದಿಂದ ₹ 281 ಕೋಟಿ ಆದಾಯ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2018, 20:27 IST
Last Updated 19 ನವೆಂಬರ್ 2018, 20:27 IST
ಮೆಟ್ರೊ
ಮೆಟ್ರೊ   

ಬೆಂಗಳೂರು: ಮೆಟ್ರೊ ರೈಲು ನಿಗಮ ಮೊದಲ ಹಂತದ ಯೋಜನೆಯ ಕಾರ್ಯಾಚರಣೆಯಿಂದ 2017–18ನೇ ಆರ್ಥಿಕ ವರ್ಷದಲ್ಲಿ ₹ 73.11 ಕೋಟಿ ಲಾಭ ಗಳಿಸಿದೆ. ನಷ್ಟದಲ್ಲಿದ್ದ ಮೆಟ್ರೊ ನಿಧಾನಕ್ಕೆ ಲಾಭದತ್ತ ಮುಖ ಮಾಡುತ್ತಿದೆ.

ಆದರೆ, ಯೋಜನೆಗಾಗಿ ಪಡೆದ ಸಾಲಕ್ಕೆ ಬಡ್ಡಿಯೇ ವಾರ್ಷಿಕವಾಗಿ ₹ 110 ಕೋಟಿಗಳಷ್ಟಿದೆ. ಈ ಬಡ್ಡಿ ಕಟ್ಟಬೇಕಾದರೆ ನಿಗಮಕ್ಕೆ ಇನ್ನೂ
₹ 38.73 ಕೋಟಿ ಆದಾಯ ಬರಬೇಕಿದೆ ಎಂದು ನಿಗಮದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಬಿ.ಎಲ್‌.ವೈ.ಚವಾಣ್‌ ಹೇಳಿದರು.

ಪ್ರಯಾಣದ ಟೋಕನ್‌ ಮಾರಾಟದಿಂದ ₹281 ಕೋಟಿ, ವಾಣಿಜ್ಯ ಮಳಿಗೆಗಳ ಬಾಡಿಗೆ, ಪಾರ್ಕಿಂಗ್‌ ಶುಲ್ಕ, ಜಾಹೀರಾತು ಮೂಲಗಳಿಂದ ₹ 56.21 ಕೋಟಿ ಆದಾಯ ಬಂದಿದೆ.ಮೆಟ್ರೊ ಕಾರ್ಯಾಚರಣೆ, ಸಿಬ್ಬಂದಿ ವೇತನ, ನಿರ್ವಹಣೆಗಾಗಿ ₹264.10 ಕೋಟಿ ವೆಚ್ಚವಾಗಿದೆ ಎಂದು ನಿಗಮದ ವಾರ್ಷಿಕ ಲೆಕ್ಕಪತ್ರದಲ್ಲಿ ಉಲ್ಲೇಖ ಮಾಡಲಾಗಿದೆ.

ADVERTISEMENT

ಮೆಟ್ರೊದಲ್ಲಿ ಪ್ರತಿದಿನ 3.60 ಲಕ್ಷದಿಂದ ನಾಲ್ಕು ಲಕ್ಷಜನ ಪ್ರಯಾಣಿಸುತ್ತಿದ್ದಾರೆ. ಪ್ರತಿದಿನ ಸರಾಸರಿ ₹ 1 ಕೋಟಿ ಆದಾಯ ಬರುತ್ತಿದೆ.

42 ಕಿಲೋಮೀಟರ್‌ ಉದ್ದದ ಮೆಟ್ರೊ ಮೊದಲ ಹಂತದ ಮಾರ್ಗ ನಿರ್ಮಾಣಕ್ಕೆ ನಿಗಮವು ವಿವಿಧ ಮೂಲಗಳಿಂದ₹ 5,689 ಕೋಟಿ ದೀರ್ಘಾವಧಿ ಸಾಲ ಪಡೆದಿದೆ. ಜಪಾನ್‌ ಇಂಟರ್‌ ನ್ಯಾಷನಲ್‌ ಕೋ ಆ‍ಪರೇಷನ್‌ ಏಜೆನ್ಸಿ (ಜೈಕಾ), ಏಜೆನ್ಸಿ ಫ್ರಾನ್ಸಿಸ್‌ ದಿ ಡೆವಲಪ್‌ಮೆಂಟ್‌ ಮತ್ತು ಹುಡ್ಕೊದಿಂದ ಸಾಲ ಪಡೆಯಲಾಗಿದೆ.

‘ಕೇವಲ ರೈಲುಗಳ ಕಾರ್ಯಾಚರಣೆ, ವಾಣಿಜ್ಯ ಮಳಿಗೆಗಳ ಬಾಡಿಗೆ ಇಷ್ಟನ್ನೇ ಪರಿಗಣಿಸಿದರೆ ಮೆಟ್ರೊ ಲಾಭದಲ್ಲಿದೆ. ಯೋಜನೆ ವಿಸ್ತರಣೆ, ಕಾಮಗಾರಿಗಳು, ಸಾಲದ ಮೊತ್ತ, ಇತರ ವೆಚ್ಚಗಳನ್ನು ಪರಿಗಣಿಸಿದರೆ ಈ ಮೊತ್ತವನ್ನು ಲಾಭ ಎಂದು ಹೇಳಲಾಗದು. ಎಲ್ಲ ಕಾಮಗಾರಿಗಳು ಮುಗಿದು ಪೂರ್ಣ ಪ್ರಮಾಣದಲ್ಲಿ ಮೆಟ್ರೊ ಕಾರ್ಯಾಚರಣೆ ಮಾಡಿದಂದಿನಿಂದ ವೆಚ್ಚ ಕಳೆದು ಉಳಿಯುವ ಮೊತ್ತವನ್ನು ಲಾಭ ಎಂದು ಪರಿಗಣಿಸಬಹುದು. ಇದೆಲ್ಲಾ ದೀರ್ಘಾವಧಿ ತೆಗೆದುಕೊಳ್ಳುತ್ತದೆ' ಎಂದು ಚವಾಣ್‌ ವಿವರಿಸಿದರು.

ಈ ತಿಂಗಳ ಅಂತ್ಯಕ್ಕೆ ಆರು ಬೋಗಿಗಳ ರೈಲು: ಇನ್ನೊಂದು ಆರು ಬೋಗಿಗಳ ರೈಲು ಸಿದ್ಧವಾಗಿದೆ. ಅದರ ಪರೀಕ್ಷೆಗಳು ನಡೆದಿವೆ. ಈ ತಿಂಗಳಲ್ಲೇ ಆ ಬೋಗಿಯನ್ನು ಸಂಚಾರಕ್ಕೆ ಬಿಡಲಾಗುವುದು. ಆದರೆ, ದಿನಾಂಕ ನಿಗದಿಪಡಿಸಿಲ್ಲ ಎಂದು ಚವಾಣ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.