ADVERTISEMENT

ಗೂಗಲ್ ಪೇ, ಪೇಟಿಎಂನಲ್ಲೂ ಸ್ಮಾರ್ಟ್‌ಕಾರ್ಡ್‌ ರಿಜಾರ್ಚ್‌

15 ದಿನಗಳಲ್ಲಿ ಜಾರಿಗೆ ಮೆಟ್ರೊ ನಿಗಮ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2020, 21:53 IST
Last Updated 12 ಅಕ್ಟೋಬರ್ 2020, 21:53 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ನಮ್ಮ ಮೆಟ್ರೊ’ ಸ್ಮಾರ್ಟ್‌ಕಾರ್ಡ್‌ಗಳನ್ನು ಗೂಗಲ್‌ ಪೇ, ಪೇಟಿಎಂನಂತಹ ಆ್ಯಪ್‌ಗಳ ಮೂಲಕವೂ ರಿಚಾರ್ಜ್ ಮಾಡಿಕೊಳ್ಳುವ ವ್ಯವಸ್ಥೆಯನ್ನು ಬೆಂಗಳೂರು ಮೆಟ್ರೊ ರೈಲು ನಿಗಮ ಶೀಘ್ರದಲ್ಲಿಯೇ ಜಾರಿಗೆ ತರಲಿದೆ.

‘ಸ್ಮಾರ್ಟ್‌ಕಾರ್ಡ್‌ ರಿಚಾರ್ಜ್‌ ಮಾಡಿಕೊಳ್ಳಲು ಈ ಆಯ್ಕೆಗಳನ್ನು ಒದಗಿಸುವ ಬಗ್ಗೆ ನಮ್ಮ ತಂಡ ಕೆಲಸ ಮಾಡುತ್ತಿದೆ. ಮುಂದಿನ 10ರಿಂದ 15 ದಿನಗಳಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳಬಹುದು’ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಜಯ್‌ ಸೇಠ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ನಿಗಮದ ವೆಬ್‌ಸೈಟ್‌ ಮೂಲಕ ಅಥವಾ ಆ್ಯಪ್‌ ಮೂಲಕ ಈಗ ಸ್ಮಾರ್ಟ್‌ಕಾರ್ಡ್‌ ರಿಚಾರ್ಜ್‌ ಮಾಡಿಸಿಕೊಳ್ಳಬೇಕು. ಪ್ರಯಾಣಿಸುವುದಕ್ಕೂ ಒಂದು ಗಂಟೆ ಮೊದಲೇ ಈ ರಿಚಾರ್ಜ್‌ ಮಾಡಿಕೊಳ್ಳಬೇಕಾಗಿರುವುದರಿಂದ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ. ಹೊಸ ಕಾರ್ಡ್‌ ಪಡೆದವರಿಗೆ ಮಾತ್ರ ನಿಲ್ದಾಣದಲ್ಲಿಯೇ ರಿಚಾರ್ಜ್‌ ಮಾಡಿಕೊಳ್ಳುವ ಅವಕಾಶವಿದೆ.

ADVERTISEMENT

ಬಹುತೇಕ ಪ್ರಯಾಣಿಕರು ರಿಚಾರ್ಜ್ ಮಾಡಿಸಿಕೊಂಡ ತಕ್ಷಣ ಪ್ರಯಾಣಕ್ಕೆ ಸಜ್ಜಾಗುತ್ತಾರೆ. ಒಂದು ತಾಸು ಕಾಯುವಷ್ಟು ಸಮಯ ಅಥವಾ ತಾಳ್ಮೆ ಬಹುತೇಕ ಪ್ರಯಾಣಿಕರಲ್ಲಿ ಇರುವುದಿಲ್ಲ. ಅಲ್ಲದೆ, ಸ್ಮಾರ್ಟ್‌ಕಾರ್ಡ್‌ನಲ್ಲಿ ಇರುವ ಮೊತ್ತ ಸರಿಯಾಗಿ ನಮೂದಾಗದೆ ಇರುವುದರಿಂದಲೂ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ. ಟೋಕನ್‌ ವಿತರಣೆಯೂ ಸ್ಥಗಿತಗೊಂಡಿರುವುದರಿಂದಲೂ ಪ್ರಯಾಣಿಕರಿಗೆ ಸಮಸ್ಯೆಯಾಗಿದೆ.

ಇದೇ ಕಾರಣಕ್ಕೆ ನಿಗಮವು, ‘ರಿಚಾರ್ಜ್ ವಿಧಾನ', `ನಮ್ಮ ಮೆಟ್ರೊ ಮತ್ತೆ ನಿಮ್ಮ ಸೇವೆಗೆ’, ‘ನಮ್ಮ ಮೆಟ್ರೊ ಆ್ಯಪ್‌ ಬಳಸುವುದು ಹೇಗೆ’ ಎನ್ನುವುದು ಸೇರಿದಂತೆ ಕೆಲವು ವಿಡಿಯೊ ತುಣುಕುಗಳನ್ನು ಸಿದ್ಧಪಡಿಸಿ, ಸಾಮಾಜಿಕ ಜಾಲತಾಣ ಮೂಲಕ ಬಿತ್ತರಿಸುತ್ತಿದೆ.

ಹೊಸ ವ್ಯವಸ್ಥೆ ಬಂದ ನಂತರ, ಕ್ಷಣಾರ್ಧದಲ್ಲಿಯೇ ಈ ಪೇಟಿಎಂ, ಗೂಗಲ್‌ಪೇ ಆ್ಯಪ್‌ಗಳ ಮೂಲಕ ಕಾರ್ಡ್‌ ರಿಚಾರ್ಜ್‌ ಮಾಡಿ ಪ್ರಯಾಣಿಸಬಹುದಾಗಿದೆ.

‘ಸ್ಮಾರ್ಟ್‌ಕಾರ್ಡ್‌ ರಿಚಾರ್ಜ್‌ಗೆ ಈಗಿರುವ ಪೇಮೆಂಟ್ (ಪಾವತಿಗಳು) ಆಯ್ಕೆಗಳನ್ನು ಹೆಚ್ಚಿಸಿ, ಸರಳೀಕೃತ ವ್ಯವಸ್ಥೆಯನ್ನು ಪರಿಚಯಿಸಲಾಗುವುದು. ಇದರಿಂದ ಸೋಂಕಿನ ಹಾವಳಿ ಮಧ್ಯೆಯೂ ಪ್ರಯಾಣಿಕರ ಸಂಖ್ಯೆ ಬರುವ ತಿಂಗಳಲ್ಲಿ ದುಪ್ಪಟ್ಟಾಗಲಿದೆ’ ಎಂದು ಅಜಯ್‌ ಸೇಠ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.