ADVERTISEMENT

Tobacco Fine | ತಂಬಾಕು ಜಗಿದರೆ ದಂಡ: ಬಿಎಂಆರ್‌ಸಿಎಲ್‌ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2025, 9:01 IST
Last Updated 23 ಏಪ್ರಿಲ್ 2025, 9:01 IST
<div class="paragraphs"><p>&nbsp; ಬಿಎಂಆರ್‌ಸಿಎಲ್‌</p></div>

  ಬಿಎಂಆರ್‌ಸಿಎಲ್‌

   

ಬೆಂಗಳೂರು: ‘ನಮ್ಮ ಮೆಟ್ರೊ’ ರೈಲಿನಲ್ಲಿ ಪ್ರಯಾಣಿಕರೊಬ್ಬರು ಪಾನ್‌ಮಸಾಲ ಸೇವಿಸಿದ ವಿಡಿಯೊ ಹರಿದಾಡಿದ ಮೇಲೆ ಬಿಎಂಆರ್‌ಸಿಎಲ್‌ ಎಚ್ಚೆತ್ತುಕೊಂಡಿದೆ. ಮೆಟ್ರೊ ನಿಲ್ದಾಣ ಹಾಗೂ ರೈಲುಗಳ ಒಳಗೆ ತಂಬಾಕು ಆಧರಿತ ಉತ್ಪನ್ನಗಳನ್ನು ಸೇವಿಸುವ ಪ್ರಯಾಣಿಕರಿಗೆ ದಂಡ ವಿಧಿಸಲು ನಿರ್ಧರಿಸಿದೆ.

ಗುಟ್ಕಾ, ಪಾನ್ ಮಸಾಲಾದಂತಹ ತಂಬಾಕು ಆಧಾರಿತ ಉತ್ಪನ್ನಗಳನ್ನು ಅಗಿದು ಉಗುಳುವ ಬಗ್ಗೆ ಸಾರ್ವಜನಿಕ ದೂರುಗಳು ಹೆಚ್ಚಾಗುತ್ತಿವೆ. ಈ ಸಮಸ್ಯೆಯನ್ನು ಪರಿಹಾರಿಸಲು, ಮೆಟ್ರೊ ಆವರಣದಲ್ಲಿ ಉಗುಳುವುದು, ಕಸ ಹಾಕುವುದನ್ನು ತಪ್ಪಿಸಲು ಜನದಟ್ಟಣೆ ಇಲ್ಲದ ಸಮಯಗಳಲ್ಲಿ ಗಸ್ತು ತಿರುಗುವುದನ್ನು ಬಲಪಡಿಸಲಾಗುವುದು. ಮೆಟ್ರೊ ರೈಲು ಮತ್ತು ನಿಲ್ದಾಣಗಳಲ್ಲಿ ಕಣ್ಗಾವಲು ಹೆಚ್ಚಿಸುವ ಕ್ರಮ ಕೈಗೊಳ್ಳಲಾಗುವುದು. ತಪ್ಪಿತಸ್ಥ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ ನಿಯಮಗಳ ಪ್ರಕಾರ ದಂಡ ವಿಧಿಸಲಾಗುವುದು.

ADVERTISEMENT

ಅಂತಹ ವಸ್ತುಗಳನ್ನು ಲೋಹ ಶೋಧಕಗಳ ಮೂಲಕ ಪತ್ತೆಹಚ್ಚಲು ಸಾಧ್ಯವಾಗದ ಕಾರಣ, ಎಲ್ಲ ಮೆಟ್ರೊ ನಿಲ್ದಾಣಗಳಲ್ಲಿ ಅನುಮಾನ ಬಂದ ಜಾಗಗಳಲ್ಲಿ ಆಗಾಗ ತಪಾಸಣೆ ಮಾಡಲಾಗುವುದು. ತಂಬಾಕು ಪದಾರ್ಥ ಜಗಿಯುವ ಪ್ರಯಾಣಿಕರನ್ನು ಸೂಕ್ಷ್ಮ ರೀತಿಯಲ್ಲಿ ಗಮನಿಸಲು, ಜನರೊಂದಿಗೆ ಈ ಕುರಿತು ಸಂವೇದನಾಶೀಲವಾಗಿ ನಡೆದುಕೊಳ್ಳಲು ಪ್ಲ್ಯಾಟ್‌ಫಾರ್ಮ್ ಭದ್ರತಾ ಸಿಬ್ಬಂದಿಗೆ ತರಬೇತಿ ನೀಡಲಾಗುವುದು.

ಯಾವುದೇ ಉಲ್ಲಂಘನೆಗಳು ಕಂಡು ಬಂದ ಕೂಡಲೇ ಸಂಬಧಿಸಿದ ಪ್ಲ್ಯಾಟ್‌ಫಾರ್ಮ್ ಭದ್ರತಾ ಸಿಬ್ಬಂದಿಗೆ ಎಚ್ಚರಿಕೆ ನೀಡಲು ಕೇಂದ್ರ ಭದ್ರತಾ ಕಣ್ಗಾವಲು ಕೊಠಡಿಗೆ ಸೂಚನೆ ನೀಡಲಾಗಿದೆ. ತಂಬಾಕು ಆಧರಿತ ಉತ್ಪನ್ನಗಳನ್ನು ಬಳಸದಂತೆ ಪ್ರಯಾಣಿಕರಲ್ಲಿ ಜಾಗೃತಿ ಮೂಡಿಸಲು ಅಭಿಯಾನ ನಡೆಸಲಾಗುವುದು ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.