ಬೆಂಗಳೂರು: ದಟ್ಟಣೆ ಅವಧಿಯಲ್ಲಿ ಕೂಡ ‘ನಮ್ಮ ಮೆಟ್ರೊ‘ ರೈಲಿನಲ್ಲಿ ನಿರೀಕ್ಷಿತ ಪ್ರಯಾಣಿಕರು ಸಂಚರಿಸುತ್ತಿಲ್ಲವಾದ್ದರಿಂದ ರೈಲುಗಳ ನಡುವಿನ ಕಾರ್ಯಾಚರಣೆ ಅವಧಿಯನ್ನು ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್) ಪರಿಷ್ಕರಿಸಿದೆ.
ಅ.22ರಿಂದ ಪರಿಷ್ಕೃತ ವೇಳಾಪಟ್ಟಿ ಜಾರಿಗೆ ಬರಲಿದೆ ಎಂದು ಅದು ಹೇಳಿದೆ.
ಸಂಚರಿಸುವ ರೈಲುಗಳ ಸಂಖ್ಯೆಯಲ್ಲಿ ಕಡಿತ ಮಾಡಲಾಗಿದ್ದು, ಪ್ರಯಾಣಿಕರ ಸಂಖ್ಯೆ ಏರಿಕೆಯಾದರೆ, ಆಯ್ದ ನಿಲ್ದಾಣಗಳಿಂದ ಹೆಚ್ಚುವರಿ ರೈಲು ಸೇವೆಗಳನ್ನೂ ಕಲ್ಪಿಸಲಾಗುವುದು ಎಂದೂ ನಿಗಮ ತಿಳಿಸಿದೆ.
ಸೋಮವಾರದಿಂದ ಶುಕ್ರವಾರದವರೆಗೆ ‘ದಟ್ಟಣೆ ಅವಧಿ’ಯಲ್ಲಿ ಪ್ರತಿ ಐದು ನಿಮಿಷಗಳ ಅಂತರದಲ್ಲಿ ಮೆಟ್ರೊ ರೈಲುಗಳು ಸಂಚರಿಸಲಿವೆ. ಉಳಿದ ಸಮಯದಲ್ಲಿ 12 ನಿಮಿಷಕ್ಕೊಂದು ರೈಲು ಸೇವೆ ಇರಲಿದೆ. ಅದೇ ರೀತಿ, 2 ಮತ್ತು 4ನೇ ಶನಿವಾರ ದಟ್ಟಣೆ ಅವಧಿಯಲ್ಲಿ 8 ನಿಮಿಷ ಹಾಗೂ ಉಳಿದ ಸಮಯದಲ್ಲಿ 12 ನಿಮಿಷಗಳ ಅಂತರದಲ್ಲಿ ರೈಲು ಸೇವೆ ಲಭ್ಯವಾಗಲಿದೆ.
ಸದ್ಯ ನಿತ್ಯ ಬೆಳಿಗ್ಗೆ 7ರಿಂದ ರಾತ್ರಿ 9ರವರೆಗೆ ಮೆಟ್ರೊ ರೈಲು ಸೇವೆ ಇದ್ದು, ನಿತ್ಯ ಸರಾಸರಿ 55 ಸಾವಿರ ಪ್ರಯಾಣಿಕರು ಸಂಚರಿಸುತ್ತಿದ್ದಾರೆ.
ಮೆಟ್ರೊ ರೈಲುಗಳ ಕಾರ್ಯಾಚರಣೆ ವಿವರ
ಸೋಮವಾರ-ಶುಕ್ರವಾರ
* ಬೆಳಿಗ್ಗೆ 9-10 ಮತ್ತು ಸಂಜೆ 5.30- 6.30ರ ಅವಧಿಯಲ್ಲಿ 5 ನಿಮಿಷಗಳ ಅಂತರ
* ಬೆಳಿಗ್ಗೆ 8-9 ಹಾಗೂ ಬೆಳಿಗ್ಗೆ 10-11 ಮತ್ತು ಸಂಜೆ 4.30-8 ಗಂಟೆವರೆಗೆ 6 ನಿಮಿಷಗಳ ಅಂತರ
* ಉಳಿದ ಸಮಯದಲ್ಲಿ 12 ನಿಮಿಷಗಳ ಅಂತರದಲ್ಲಿ ರೈಲುಗಳು ಸಂಚರಿಸಲಿವೆ
2/ 4ನೇ ಶನಿವಾರ, ಭಾನುವಾರ ಮತ್ತು ಸಾಮಾನ್ಯ ರಜಾ ದಿನಗಳು
* ಬೆಳಿಗ್ಗೆ 10ರಿಂದ ಮಧ್ಯಾಹ್ನ 12 ಹಾಗೂ ಸಂಜೆ 5ರಿಂದ 7ರವರೆಗೆ 8 ನಿಮಿಷಗಳ ಅಂತರ
* ಉಳಿದ ಸಮಯದಲ್ಲಿ 12 ನಿಮಿಷಗಳ ಅಂತರದಲ್ಲಿ ರೈಲುಗಳು ಸಂಚರಿಸಲಿವೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.