ADVERTISEMENT

‘ಸ್ಪೀಡೊ ಮೀಟರ್‌’ನಂತೆ ಮೇಲೇರುವ ಬಡ್ಡಿ

ಅಕ್ರಮ ವಹಿವಾಟಿಗೆ ರಾಜಕಾರಣಿಗಳು, ಅಧಿಕಾರಿಗಳ ಬೆಂಬಲದ ಆರೋಪ

ಆದಿತ್ಯ ಕೆ.ಎ
Published 10 ಫೆಬ್ರುವರಿ 2025, 21:00 IST
Last Updated 10 ಫೆಬ್ರುವರಿ 2025, 21:00 IST
   

ಆದಿತ್ಯ ಕೆ.ಎ.

ಬೆಂಗಳೂರು: ರಾಜ್ಯದ ಗ್ರಾಮೀಣ ಹಾಗೂ ನಗರ ಪ್ರದೇಶಗಳ ಕೊಳೆಗೇರಿ, ತರಕಾರಿ– ಮೀನು–ಮಾಂಸ ಮಾರುಕಟ್ಟೆಗಳೂ ಸೇರಿದಂತೆ ಹಲವೆಡೆ ಮೀಟರ್‌ ಬಡ್ಡಿ ದಂಧೆ ಅವ್ಯಾಹತವಾಗಿ ನಡೆಯುತ್ತಿದೆ. ‌‌

ರೈತರು, ಬೀದಿಬದಿಯ ವ್ಯಾಪಾರಿಗಳು, ಕೂಲಿ ಕಾರ್ಮಿಕರ ಸಂಕಷ್ಟದ ಪರಿಸ್ಥಿತಿಯನ್ನೇ ಬಂಡವಾಳ ಮಾಡಿಕೊಂಡಿರುವ ಲೇವಾದೇವಿದಾರರು ಹಾಗೂ ಶ್ರೀಮಂತರು, ಅವರಿಗೆ ಸಾಲ ನೀಡುತ್ತಿದ್ದಾರೆ. ಸಾಲದ ಮೇಲಿನ ಬಡ್ಡಿ ಮಾತ್ರ ವಾಹನಗಳ ‘ಸ್ಪೀಡೊ ಮೀಟರ್‌’ನಂತೆ ಮೇಲೇರುತ್ತಲೇ ಇರುತ್ತದೆ. 

ADVERTISEMENT

ನೋಂದಾಯಿತ ಕಂಪನಿಗಳನ್ನು ಹೊರತುಪಡಿಸಿ, ಹಳ್ಳಿಗಳಲ್ಲಿ ಹಲವರು ಕಾನೂನುಬಾಹಿರವಾಗಿ ಮೀಟರ್‌ ಬಡ್ಡಿ ದಂಧೆ ನಡೆಸುತ್ತಿದ್ದಾರೆ. ಅಸಲು, ಬಡ್ಡಿ ವಸೂಲಿಗೆ ಲೇವಾದೇವಿದಾರರು ಅನುಸರಿಸುತ್ತಿರುವ ಕ್ರಮವೂ ಮಿತಿಮೀರಿದೆ. ಭಯವನ್ನೂ ಹುಟ್ಟಿಸುತ್ತಿದೆ.

ರಾಜಕಾರಣಿಗಳ ಬೆಂಬಲದಿಂದ ಪ್ರಭಾವಿಗಳು ರಾಜಾರೋಷವಾಗಿ ಮೀಟರ್ ಬಡ್ಡಿ ದಂಧೆಯಲ್ಲಿ ತೊಡಗಿದ್ದಾರೆ. ಜನರು ಮೀಟರ್ ಬಡ್ಡಿ ಸಾಲದ ಉರುಳಿಗೆ ಸಿಲುಕಿ ನರಳುತ್ತಿದ್ದಾರೆ ಎಂದು ಕುಣಿಗಲ್‌ನ ಚಂದ್ರಶೇಖರ್‌ ಅವರು, ಕರಾಳ ದಂಧೆಯನ್ನು ತೆರೆದಿಟ್ಟರು.

‘ಬ್ಯಾಂಕ್‌ಗಳಿಗೆ ಹೋದರೆ ಸುಲಭವಾಗಿ ಸಾಲ ದೊರೆಯುವುದಿಲ್ಲ. ಹತ್ತಾರು ದಾಖಲೆಗಳನ್ನು ಕೇಳುತ್ತಾರೆ. ಭದ್ರತೆ ನೀಡುವುದಕ್ಕೂ ನಮ್ಮ ಬಳಿ ಯಾವುದೇ ಆಸ್ತಿ ಇರುವುದಿಲ್ಲ. ಇಂತಹ ಸಂದರ್ಭದಲ್ಲಿ ಹಣವುಳ್ಳವರನ್ನು ಕೇಳಿದಾಗ ಸುಲಭವಾಗಿ ಕೈಸಾಲ ನೀಡುತ್ತಾರೆ. ಆದರೆ, ಬಡ್ಡಿ ನೀಡುವುದನ್ನು ಒಂದು ಕ್ಷಣ ಕೂಡ ವಿಳಂಬ ಮಾಡುವಂತಿಲ್ಲ. ವಿಳಂಬ ಮಾಡಿದರೆ ಮೈಕ್ರೊ ಫೈನಾನ್ಸ್‌ ಕಂಪನಿಗಳಂತೆಯೇ ಕಿರುಕುಳ ನೀಡುತ್ತಾರೆ. ಮೈಕ್ರೊ ಫೈನಾನ್ಸ್‌ ಕಂಪನಿಗಳವರು ವಸೂಲಿಗೆ ಪ್ರತಿನಿಧಿಗಳನ್ನು ನೇಮಿಸಿಕೊಂಡಿದ್ದಾರೆ. ಲೇವಾದೇವಿದಾರರು ತಮ್ಮ ಜತೆಗೆ ರೌಡಿಗಳನ್ನು ಇರಿಸಿಕೊಂಡಿದ್ದಾರೆ. ರೌಡಿಗಳು ಮನೆಗೆ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ. ಹಲ್ಲೆ ನಡೆಸಿರುವ ಉದಾಹರಣೆಗಳೂ ಇವೆ’ ಎಂದು ಸಾಲ ಪಡೆದವರು ನೋವಿನಿಂದ ನುಡಿಯುತ್ತಾರೆ.

‘ಗಂಟೆ, ದಿನ, ವಾರ ಹಾಗೂ ತಿಂಗಳ ಬಡ್ಡಿ ರೂಪದಲ್ಲಿ ಮೀಟರ್‌ ಬಡ್ಡಿ ದಂಧೆಕೋರರು ಕೈಸಾಲ ನೀಡುತ್ತಾರೆ. ಮೈಕ್ರೊ ಫೈನಾನ್ಸ್‌ ಕಂಪನಿಗಳು ಅನುಮತಿ ಪಡೆದು ಸಾಲದ ವ್ಯವಹಾರ ನಡೆಸಿದರೆ, ಮೀಟರ್‌ ಬಡ್ಡಿ ದಂಧೆ ನಡೆಸುವವರದ್ದು ಅಕ್ರಮ ವ್ಯವಹಾರ. ಇವರಿಗೆ ರಾಜಕಾರಣಿಗಳು, ಪೊಲೀಸರು ಹಾಗೂ ಅಧಿಕಾರಿಗಳು ಶ್ರೀರಕ್ಷೆ ನೀಡುತ್ತಿದ್ದಾರೆ. ಸಾಲ ಪಡೆದವರಿಂದ ಆಸ್ತಿ ಪತ್ರ, ಮನೆಯ ದಾಖಲೆಗಳನ್ನು ವಶಕ್ಕೆ ಪಡೆದು ಚಿತ್ರಹಿಂಸೆ ನೀಡಲಾಗುತ್ತಿದೆ’ ಎನ್ನುತ್ತಾ ಸಾಲಗಾರರು ಕಣ್ಣೀರು ಹಾಕಿದರು.

ಮೀಟರ್‌ ಬಡ್ಡಿ ದಂಧೆ ಮೈಸೂರು, ಬೆಂಗಳೂರು, ಹಾಸನ, ಬೆಳಗಾವಿ, ಕೋಲಾರ, ಶಿವಮೊಗ್ಗ, ಹಾವೇರಿ, ದಾವಣಗೆರೆ, ಚಿತ್ರದುರ್ಗ, ಬಳ್ಳಾರಿಯಲ್ಲಿ ವ್ಯಾಪಕವಾಗಿ ನಡೆಯುತ್ತಿದೆ.  

ದಿನಕ್ಕೆ ಶೇಕಡ 10ರಷ್ಟು ಬಡ್ಡಿ ಪಾವತಿಸಬೇಕು. ಬೆಳಿಗ್ಗೆ ₹ 1,000 ಸಾಲ ಪಡೆದರೆ, ₹900 ಅಷ್ಟೇ ನೀಡುತ್ತಾರೆ. ರಾತ್ರಿ ₹ 1,000 ವಾಪಸ್‌ ನೀಡಬೇಕು. ಅದೇ ರೀತಿ ₹10 ಸಾವಿರ ಪಡೆದರೆ ₹9 ಸಾವಿರ ಕೊಡುತ್ತಾರೆ. ರಾತ್ರಿ ₹10 ಸಾವಿರವನ್ನೇ ಮರುಪಾವತಿ ಮಾಡಬೇಕಿದೆ.‌

ಮೈಸೂರು ಜಿಲ್ಲೆಯಲ್ಲಿ ತರಕಾರಿ ವ್ಯಾಪಾರಸ್ಥರಿಗೆ ಸಾಲ ನೀಡಿ ಪ್ರತಿದಿನ ಅಥವಾ ವಾರಕ್ಕೊಮ್ಮೆ ವಸೂಲಿ ಮಾಡುತ್ತಾರೆ. ₹10 ಸಾವಿರ ಸಾಲದಲ್ಲಿ ₹1 ಸಾವಿರ ಇಟ್ಟುಕೊಂಡು, ₹9 ಸಾವಿರ ನೀಡುತ್ತಾರೆ. ಸಾಲ ಪಡೆದಾತ 10 ಕಂತುಗಳಲ್ಲಿ ಒಂದು ಸಾವಿರ ರೂಪಾಯಿಯಂತೆ ವಾಪಸ್ ನೀಡಬೇಕು. ಅದೇ ಮಂಡ್ಯದಲ್ಲಿ ದಿನಕ್ಕೆ ಶೇಕಡ 10ರಷ್ಟು ಬಡ್ಡಿ ವಿಧಿಸಲಾಗುತ್ತಿದೆ. ವಾರ್ಷಿಕವಾಗಿ ಕೈಸಾಲ ಸಹ ನೀಡಲಾಗುತ್ತಿದೆ. ವಾರ್ಷಿಕವಾಗಿ ಸಾಲ ಪಡೆದವರಿಗೆ ಶೇ 10ರಿಂದ ಶೇ 25ರವರೆಗೆ ಬಡ್ಡಿ ವಿಧಿಸಲಾಗುತ್ತಿದೆ.

ಹೊರ ಜಿಲ್ಲೆಯವರೂ ಇದ್ದಾರೆ: ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 2,242 ಹಣಕಾಸು ಕಂಪನಿಗಳು ನೋಂದಣಿ ಮಾಡಿಕೊಂಡಿವೆ. 347 ಖಾಸಗಿ ಲೇವಾದೇವಿದಾರರು, 324 ಗಿರವಿದಾರರು, 1,571 ಫೈನಾನ್ಸ್‌ಗಳು ಅಧಿಕೃತವಾಗಿವೆ. ನೋಂದಣಿಯೇ ಇಲ್ಲದ ಫೈನಾನ್ಸ್‌ಗಳೂ ಸಾಕಷ್ಟು ಚಾಲ್ತಿಯಲ್ಲಿವೆ. ಬೆಳಗಾವಿಯ ತಾರಿಹಾಳ, ರಾಯಬಾಗ ತಾಲ್ಲೂಕಿನ ನಾಗನೂರು, ಕಿತ್ತೂರು ತಾಲ್ಲೂಕಿನ ಬೈಲೂರು ಗ್ರಾಮಗಳಲ್ಲಿ ಸಾಲ ಪಡೆದವರ ಮನೆಗಳನ್ನು ಹರಾಜಿಗೆ ಇಡಲಾಗಿದೆ.

ನೆರೆಯ ಮಹಾರಾಷ್ಟ್ರದಿಂದ ಬರುವ ಕೆಲವು ಬಡ್ಡಿ ದಂಧೆಕೋರರು ಬೆಳಗಾವಿ ಗಡಿ ಭಾಗದಲ್ಲಿ ಮೀಟರ್‌ ಬಡ್ಡಿ, ಚಕ್ರ ಬಡ್ಡಿ ದಂಧೆ ನಡೆಸಿದ್ದಾರೆ. ಬೆಳಗಾವಿ ತಾಲ್ಲೂಕಿನ ಬೆನಕನಳ್ಳಿ, ಅಂಬೇವಾಡಿ, ಗಣೇಶಪುರ, ಬೆಳಕುಂದಿ, ಬೆನ್ನಾಳಿ, ಮುತ್ಯಾನಟ್ಟಿ, ಸುಳೇಭಾವಿ, ಕಾಕತಿ, ನಿಪ್ಪಾಣಿ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲೂ ಈ ಬಡ್ಡಿ ದಂಧೆಗೆ ಮಿತಿಯೇ ಇಲ್ಲ.

ಬಳ್ಳಾರಿ ಜಿಲ್ಲೆಯಲ್ಲಿ ಮಟ್ಕಾ, ಇಸ್ಪೀಟ್‌, ರಿಯಲ್‌ ಎಸ್ಟೇಟ್‌ನಲ್ಲಿ ತೊಡಗಿರುವವರು ಮೀಟರ್ ಬಡ್ಡಿಗೆ ಸಾಲ ಪಡೆದುಕೊಳ್ಳುತ್ತಿದ್ದಾರೆ. ಜೂಜಾಟದಲ್ಲಿ ಹಣ ಕಳೆದುಕೊಂಡವರು ಸಾಲ ತೀರಿಸಲು ಸಾಧ್ಯವಾಗದೇ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ ಎಂದು ಸ್ಥಳೀಯರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.