ADVERTISEMENT

ಬೇಡಿಕೆ ಈಡೇರಿಸದಿದ್ದರೆ ಬಿಸಿಯೂಟ ತಯಾರಿಕೆ ಸ್ಥಗಿತ: ದಾಸೋಹ ನೌಕರರ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2023, 16:08 IST
Last Updated 4 ನವೆಂಬರ್ 2023, 16:08 IST
<div class="paragraphs"><p>ಬೆಂಗಳೂರು ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿಯಲ್ಲಿ ಶನಿವಾರ ಪಾಲ್ಗೊಂಡಿದ್ದ ಬಿಸಿಯೂಟ ತಯಾರಿಕೆ ಮಹಿಳೆಯರು, ಬೇಡಿಕೆ ಈಡೇರಿಕೆಗಾಗಿ ಘೋಷಣೆ ಕೂಗಿದರು</p></div>

ಬೆಂಗಳೂರು ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿಯಲ್ಲಿ ಶನಿವಾರ ಪಾಲ್ಗೊಂಡಿದ್ದ ಬಿಸಿಯೂಟ ತಯಾರಿಕೆ ಮಹಿಳೆಯರು, ಬೇಡಿಕೆ ಈಡೇರಿಕೆಗಾಗಿ ಘೋಷಣೆ ಕೂಗಿದರು

   

– ಪ್ರಜಾವಾಣಿ ಚಿತ್ರ

ಬೆಂಗಳೂರು: ‘ಕೆಲಸ ಕಾಯಂಗೊಳಿಸಬೇಕು’ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆ ಆಗ್ರಹಿಸಿ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದಿಂದ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಶನಿವಾರ ಐದನೇ ದಿನ ಪೂರೈಸಿತು.

ADVERTISEMENT

ಸ್ವಾತಂತ್ರ್ಯ ಉದ್ಯಾನದಲ್ಲಿ ಸೋಮವಾರದಿಂದ (ಅ. 30) ಆರಂಭವಾಗಿರುವ ಧರಣಿಯಲ್ಲಿ ರಾಜ್ಯ ಎಲ್ಲ ಜಿಲ್ಲೆಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದಾರೆ.

‘ಬಿಸಿಯೂಟ ತಯಾರಿಸುವ ಮಹಿಳೆಯರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವುಗಳ ನಿವಾರಣೆಗಾಗಿ ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಲಾಗಿದ್ದು, ನಮ್ಮ ಬೇಡಿಕೆಗಳು ಪೂರ್ಣ ಪ್ರಮಾಣದಲ್ಲಿ ಈಡೇರುತ್ತಿಲ್ಲ. ಹೀಗಾಗಿ, ಈ ಬಾರಿ ಅನಿರ್ದಿಷ್ಟಾವಧಿ ಧರಣಿ ಆರಂಭಿಸಲಾಗಿದೆ’ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಮಾಲಿನಿ ಮೇಸ್ತಾ ಹೇಳಿದರು.

‘ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನ ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ನವೆಂಬರ್ 10ರವರೆಗೂ ಧರಣಿ ನಡೆಸಲಾಗುವುದು. ನಂತರ, ಬೇಡಿಕೆ ಈಡೇರಿಸಲು ಸರ್ಕಾರಕ್ಕೆ ಕಾಲಾವಕಾಶ ನೀಡಲಾಗುವುದು. ಬೇಡಿಕೆ ಈಡೇರಿಸದಿದ್ದರೆ, ನ. 16ರ ನಂತರ ಬಿಸಿಯೂಟ ತಯಾರಿಕೆ ಸ್ಥಗಿತಗೊಳಿಸಿ ಪುನಃ ಧರಣಿ ಆರಂಭಿಸಲಾಗುವುದು’ ಎಂದು ಅವರು ಎಚ್ಚರಿಸಿದರು.

‘ರಾಜ್ಯದ ಮಕ್ಕಳಿಗೆ ಬಿಸಿಯೂಟ ತಯಾರಿಸುತ್ತಿರುವ ಮಹಿಳೆಯರಿಗೆ ಸೇವಾ ಭದ್ರತೆ ನೀಡಬೇಕು. ನಿವೃತ್ತಿಯಾದ ನೌಕರರಿಗೆ ₹1 ಲಕ್ಷ ಇಡುಗಂಟು ನೀಡಬೇಕು. ಕೆಲಸದ ಸ್ಥಳಗಳಲ್ಲಿ ಮರಣ ಹೊಂದಿದರೆ ₹25 ಲಕ್ಷ ಪರಿಹಾರ ಘೋಷಿಸಬೇಕು’ ಎಂದು ಅವರು ಆಗ್ರಹಿಸಿದರು.

ಜಿಲ್ಲಾವಾರು ಪ್ರತಿನಿಧಿಗಳು ಭಾಗಿ: ರಾಜ್ಯದ ಹಲವು ಜಿಲ್ಲೆಗಳ ಬಿಸಿಯೂಟ ತಯಾರಿಕೆ ಮಹಿಳೆಯರು ಸರದಿ ಪ್ರಕಾರ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಶನಿವಾರ ಕಲಬುರಗಿ, ಬೀದರ್‌ ಹಾಗೂ ಯಾದಗಿರಿ ಜಿಲ್ಲೆಯ ಪ್ರತಿನಿಧಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.