ADVERTISEMENT

ಖಾಸಗಿ ಕನ್ನಡ ಮಾಧ್ಯಮ ಶಾಲೆಗಳಿಗೂ ಬಿಸಿಯೂಟ?

ಡಾ.ಕಲ್ಲಡ್ಕ ಪ್ರಭಾಕರ ಭಟ್‌ ಸಲಹೆ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2019, 8:51 IST
Last Updated 28 ನವೆಂಬರ್ 2019, 8:51 IST
   

ಬೆಂಗಳೂರು: ರಾಜ್ಯದಲ್ಲಿರುವ ಖಾಸಗಿ ಕನ್ನಡ ಮಾಧ್ಯಮ ಶಾಲೆಗಳಿಗೂ ಮಧ್ಯಾಹ್ನದ ಬಿಸಿಯೂಟ ವಿಸ್ತರಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ.

ಆರ್‌ಎಸ್‌ಎಸ್‌ ನಾಯಕ ಡಾ.ಕಲ್ಲಡ್ಕ ಪ್ರಭಾಕರ ಭಟ್‌ ಅವರು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಮನವಿ ಮಾಡಿಕೊಂಡ ಮೇರೆಗೆ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ ಎಂದು ಹೇಳಲಾಗುತ್ತಿದೆ.

ಇದನ್ನು ಖಚಿತಪಡಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆಯ ಮೂಲಗಳು, ಖಾಸಗಿ ಆಡಳಿತ ಮಂಡಳಿಗಳಿಂದ ನಡೆಯುತ್ತಿರುವ ಕನ್ನಡ ಮಾಧ್ಯಮ ಶಾಲೆಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಹೇಳಿವೆ.

ADVERTISEMENT

‘ತಮ್ಮ ಜಿಲ್ಲೆಯಲ್ಲಿರುವ ಎಲ್ಲಾ ಖಾಸಗಿ ಕನ್ನಡ ಮಾಧ್ಯಮ ಶಾಲೆಗಳ ಬಗ್ಗೆ ಶೀಘ್ರ ಮಾಹಿತಿ ನೀಡಲು ಸೂಚಿಸಿದ್ದೇವೆ’ ಎಂದು ಇಲಾಖೆಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಭಾಕರ ಭಟ್‌ ಅವರ ಕೋರಿಕೆಯ ಬಗ್ಗೆ ಮುಖ್ಯಮಂತ್ರಿ ಅವರು ಈಚೆಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್‌ ಕುಮಾರ್‌ ಜತೆಗೆ ಚರ್ಚಿಸಿದ್ದರು. ಬಳಿಕ ಈ ಬೆಳವಣಿಗೆ ನಡೆದಿದೆ ಎಂದು ಹೇಳಲಾಗುತ್ತಿದೆ.

ಸದ್ಯ ಈ ಕಡತ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್‌.ಆರ್‌.ಉಮಾಶಂಕರ್‌ ಅವರ ಬಳಿ ಒಪ್ಪಿಗೆಗಾಗಿ ಕಾದು ಕುಳಿತಿದೆ. ಹಿನ್ನೆಲೆ:ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಡಾ.ಪ್ರಭಾಕರ ಭಟ್‌ ಅವರ ಕಲ್ಲಡ್ಕದ ಶ್ರೀರಾಮ ಶಾಲೆಗೆ ಕೊಲ್ಲೂರು ದೇವಸ್ಥಾನದಿಂದ ಬಿಸಿಯೂಟ ನೀಡುವುದನ್ನು ಸ್ಥಗಿತಗೊಳಿಸಲಾಗಿತ್ತು. ಮುಜರಾಯಿ ಇಲಾಖೆಗೆ ಸೇರಿದ ಕೊಲ್ಲೂರು ದೇವಸ್ಥಾನದಿಂದ ಖಾಸಗಿ ಶಾಲೆಗೆ ಬಿಸಿಯೂಟ ನೀಡುವುದಕ್ಕೆ ಆಕ್ಷೇಪ ಇದೆ ಎಂದು ಹೇಳಿ ಈ ಕ್ರಮ ಕೈಗೊಳ್ಳಲಾಗಿತ್ತು. 2018ರ ವಿಧಾನಸಭಾ ಚುನಾವಣೆ ವೇಳೆ ಈ ವಿಷಯವೂ ಒಂದು ಭಾವನಾತ್ಮಕ ಚುನಾವಣಾ ವಿಚಾರವಾಗಿತ್ತು.

'ಖಾಸಗಿ ಕನ್ನಡ ಮಾಧ್ಯಮ ಶಾಲೆಗಳಿಗೆ ಮಧ್ಯಾಹ್ನದ ಬಿಸಿಯೂಟ ವಿಸ್ತರಿಸುವ ಯೋಜನೆಯ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ '

-ಎಸ್‌.ಆರ್‌.ಉಮಾಶಂಕರ್‌, ಪ್ರಧಾನ ಕಾರ್ಯದರ್ಶಿ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.