ADVERTISEMENT

ನಾಯಂಡಹಳ್ಳಿ ಕೆರೆ ಕಾಮಗಾರಿ 4 ತಿಂಗಳಲ್ಲಿ ಪೂರ್ಣಗೊಳಿಸಲು ಸೂಚನೆ

ವಸತಿ ಸಚಿವ ವಿ.ಸೋಮಣ್ಣ ಗಡುವು

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2021, 20:05 IST
Last Updated 26 ಸೆಪ್ಟೆಂಬರ್ 2021, 20:05 IST
ನಾಯಂಡಹಳ್ಳಿ ಕೆರೆ ಅಭಿವೃದ್ಧಿ ಕಾಮಗಾರಿಯನ್ನು ಸಚಿವ ಸೋಮಣ್ಣ ಅವರು ಭಾನುವಾರ ಪರಿಶೀಲಿಸಿದರು
ನಾಯಂಡಹಳ್ಳಿ ಕೆರೆ ಅಭಿವೃದ್ಧಿ ಕಾಮಗಾರಿಯನ್ನು ಸಚಿವ ಸೋಮಣ್ಣ ಅವರು ಭಾನುವಾರ ಪರಿಶೀಲಿಸಿದರು   

ಬೆಂಗಳೂರು: ನಾಯಂಡಹಳ್ಳಿ ಕೆರೆ ಅಭಿವೃದ್ಧಿ ಕಾಮಗಾರಿಯನ್ನು ನಾಲ್ಕು ತಿಂಗಳ ಒಳಗೆ ಪೂರ್ಣಗೊಳಿಸುವಂತೆ ಮೂಲಸೌಕರ್ಯ ಅಭಿವೃದ್ಧಿ ಹಾಗೂ ವಸತಿ ಸಚಿವ ವಿ.ಸೋಮಣ್ಣ ಅವರು ಬಿಬಿಎಂಪಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬಿಬಿಎಂಪಿ ವತಿಯಿಂದ ಗೋವಿಂದ ರಾಜ ನಗರ ವಿಧಾನ‌ಸಭಾ ಕ್ಷೇತ್ರ ವ್ಯಾಪ್ತಿಯ ನಾಯಂಡಹಳ್ಳಿ ಕೆರೆ ಮತ್ತು ನಿರ್ಮಾಣ ಹಂತದಲ್ಲಿರುವ ಸರ್ಕಾರಿ ಆಸ್ಪತ್ರೆ ಕಟ್ಟಡದ ಕಾಮಗಾರಿಗಳನ್ನು ಅವರು ಭಾನುವಾರ ಪರಿಶೀಲನೆ ನಡೆಸಿದರು.

ನಾಯಂಡಹಳ್ಳಿ‌ ಕೆರೆಯು ಸುಮಾರು 15 ಎಕರೆ ಪ್ರದೇಶದಲ್ಲಿ ವ್ಯಾಪಿಸಿದೆ. ಈ ಕೆರೆಯನ್ನು ₹ 10 ಕೋಟಿ ವೆಚ್ಚದಲ್ಲಿ ಬಿಬಿಎಂಪಿ ಅಭಿವೃದ್ಧಿಪಡಿಸುತ್ತಿದೆ. ವೃಷಭಾವತಿ ಕಾಲುವೆಯಲ್ಲಿ ಹರಿಯುವ ನೀರನ್ನು ಶುದ್ಧೀಕರಿಸಿ ಕೆರೆಗೆ ಬಿಡುವ ಕಾಮಗಾರಿಯೂ ಇದರಲ್ಲಿ ಸೇರಿದೆ. ತ್ಯಾಜ್ಯ ನೀರು ಶುದ್ಧೀಕರಣ ಘಟಕ
ವನ್ನು ಇಲ್ಲಿ ಸ್ಥಾಪಿಸಲಾಗುತ್ತದೆ.
ಅಲ್ಲದೇ ಯೋಗ ಕೇಂದ್ರ, ವಾಯು ವಿಹಾರ ಪಥ, ಬೋಟಿಂಗ್,
ಮಕ್ಕಳ ಆಟದಂಗಳ, ವಯಸ್ಕರಿಗೆ ಹೊರಾಂಗಣ ವ್ಯಾಯಾಮ ಶಾಲೆಗಳು ಇಲ್ಲಿ ನಿರ್ಮಾಣಗೊಳ್ಳಲಿವೆ.

ADVERTISEMENT

ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕಾಮಗಾರಿ ತಪಾಸಣೆ: ಪಂತರಪಾಳ್ಯದ (ನಾಯಂಡ ಹಳ್ಳಿ ರೈಲ್ವೆ ನಿಲ್ದಾಣದ ದಾರಿ) ಕೊಳೆಗೇರಿ ಕಟ್ಟಡದ ಪಕ್ಕ ಖಾಲಿ ಇರುವ
4.16 ಎಕರೆ ಪ್ರದೇಶದಲ್ಲಿ 200 ಹಾಸಿಗೆಗಳ ಸಾಮರ್ಥ್ಯದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಗೊಳ್ಳುತ್ತಿದೆ.

‘ಆಸ್ಪತ್ರೆ ಕಾಮಗಾರಿಯನ್ನು ಎಂಟು ತಿಂಗಳಲ್ಲಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ’ ಎಂದು ಸೋಮಣ್ಣ ತಿಳಿಸಿದರು.

ಆಸ್ಪತ್ರೆಯ ಆವರಣದ ಸುತ್ತ ನೀರು ನುಗ್ಗದಂತೆ ಚರಂಡಿ ಕಾಮಗಾರಿ ನಡೆಸುವಂತೆ ಹಾಗೂ ಆಸ್ಪತ್ರೆಯ ಮುಂಭಾಗದ ರಸ್ತೆ ಸಮೀಪದ
ಟ್ರಾನ್ಸ್‌ಫಾರ್ಮರನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಸಚಿವರು ಅಧಿಕಾರಿಗಳಿಗೆ ಸಲಹೆ ನೀಡಿದರು.

ಬಿಬಿಎಂಪಿ ಮುಖ್ಯ ಎಂಜಿನಿಯರ್‌ ಮೃತ್ಯುಂಜಯ, ಜಲಮಂಡಳಿಯ ಮುಖ್ಯ ಎಂಜಿನಿಯರ್‌ ಗಂಗಾಧರ್, ಮುಖ್ಯ ಆರೋಗ್ಯಾಧಿಕಾರಿ (ಕ್ಲಿನಿಕಲ್) ಡಾ.ನಿರ್ಮಲಾ ಬುಗ್ಗಿ, ವಲಯ ಆರೋಗ್ಯಾಧಿಕಾರಿ ಡಾ.ಮನೋರಂಜನ್ ಹೆಗ್ಡೆ, ಡಾ.ಮಂಜುಳ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.