ADVERTISEMENT

ಬೆಂಗಳೂರು: 368 ಮರಗಳ ಕಡಿಯದಿರಲು ಸಚಿವರ ಸೂಚನೆ

ಪರಿಸರ ಕಾರ್ಯಕರ್ತರ ಮನವಿಗೆ ಸ್ಪಂದಿಸಿದ ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ

​ಪ್ರಜಾವಾಣಿ ವಾರ್ತೆ
Published 25 ಜೂನ್ 2025, 16:07 IST
Last Updated 25 ಜೂನ್ 2025, 16:07 IST
<div class="paragraphs"><p>ಈಶ್ವರ ಖಂಡ್ರೆ</p></div>

ಈಶ್ವರ ಖಂಡ್ರೆ

   

ಫೇಸ್‌ಬುಕ್ ಚಿತ್ರ

ಬೆಂಗಳೂರು: ಕಂಟೋನ್ಮೆಂಟ್‌ನ ರೈಲ್ವೆ ಕಾಲೊನಿಯಲ್ಲಿ 368 ಮರಗಳನ್ನು ಕಡಿಯಬಾರದು ಎಂದು ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಅವರು ಅಧಿಕಾರಿಗಳಿಗೆ ಸೂಚಿಸಿದರು.

ADVERTISEMENT

ಕರ್ನಾಟಕ ಜೀವವೈವಿಧ್ಯ ಮಂಡಳಿ ವಿಶೇಷ ಸಭೆಯಲ್ಲಿ ಮಾತನಾಡಿದ ಅವರು, ‘ರೈಲ್ವೆ ಕಾಲೊನಿ ಜೀವವೈವಿಧ್ಯ ತಾಣವಾಗಿದ್ದು, 368 ಮರಗಳು ನೂರಾರು ವರ್ಷಗಳಿಂದ ಇವೆ. ಈ ಪ್ರದೇಶವನ್ನು ಪಾರಂಪರಿಕ ತಾಣ ಎಂದು ಘೋಷಿಸುವಂತೆ ಪರಿಸರ ಕಾರ್ಯಕರ್ತರು, ಸ್ಥಳೀಯರು ಮನವಿ ಮಾಡಿದ್ದಾರೆ. ಹೀಗಾಗಿ, ಮರಗಳನ್ನು ಕಡಿಯಲು ಅನುಮತಿ ನೀಡಬಾರದು’ ಎಂದು ಅರಣ್ಯ ಅಧಿಕಾರಿಗಳಿಗೆ ಆದೇಶಿಸಿದರು.

‘ರೈಲ್ವೆ ಕಾಲೊನಿಯನ್ನು ಪಾರಂಪರಿಕ ತಾಣವನ್ನಾಗಿ ಘೋಷಿಸುವ ಪ್ರಕ್ರಿಯೆಯನ್ನು ಕೂಡಲೇ ಆರಂಭಿಸಬೇಕು’ ಎಂದೂ ಸೂಚಿಸಿದರು.

368 ಮರಗಳನ್ನು ಉಳಿಸಿ ಸಂರಕ್ಷಿಸಬೇಕು ಎಂದು ‘ಪರಿಸರಕ್ಕಾಗಿ ನಾವು’ ಸಂಘಟನೆ ಹಲವು ರೀತಿಯಲ್ಲಿ ಪ್ರತಿಭಟನೆ ನಡೆಸಿತ್ತು. ಅರಣ್ಯ ಸಚಿವರಿಗೆ ಮನವಿಯನ್ನೂ ನೀಡಿತ್ತು.

ಮೇ 20ರಂದು ನಡೆದ ಸಾರ್ವಜನಿಕ ವಿಚಾರಣೆಯಲ್ಲಿ ಮರಗಳನ್ನು ಕಡಿಯದಂತೆ ಸ್ಥಳೀಯರು ಸೇರಿದಂತೆ ನೂರಾರು ಪರಿಸರ ಕಾರ್ಯಕರ್ತರು ಒಕ್ಕೊರಲಿನಿಂದ ಆಗ್ರಹಿಸಿದ್ದರು. ಜೂನ್ 5ರಂದು ಕಂಟೋನ್ಮೆಂಟ್ ಕಾಲೊನಿಯಲ್ಲಿ ‘ವೃಕ್ಷ ರಕ್ಷಾ ಅಭಿಯಾನ’ ನಡೆಸಲಾಗಿತ್ತು.

‘ನೂರಾರು ವರ್ಷಗಳಿಂದ ಶುದ್ಧ ಗಾಳಿ ನೀಡುತ್ತಿರುವ 368 ಮರಗಳನ್ನು ರಕ್ಷಿಸಬೇಕಾದದ್ದು ನಮ್ಮ ಕರ್ತವ್ಯ. ಮುಂದಿನ ತಲೆಮಾರಿಗೆ ನಾವು, ಸಮೃದ್ಧ ಪರಿಸರವನ್ನೇ ಕೊಡುಗೆಯಾಗಿ ನೀಡಬೇಕು. ನಮ್ಮ ಮನವಿಗೆ ಸ್ಪಂದಿಸಿ, ಮರಗಳನ್ನು ಉಳಿಸಲು ಕ್ರಮ ಕೈಗೊಂಡ ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆಯವರನ್ನು ಅಭಿನಂದಿಸುತ್ತೇವೆ’ ಎಂದು ‘ಪರಿಸರಕ್ಕಾಗಿ ನಾವು’ ಸಂಘಟನೆಯ ಅಧ್ಯಕ್ಷ ಎ.ಟಿ. ರಾಮಸ್ವಾಮಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.