ADVERTISEMENT

ರೋಗಿಗಳ ಆಸ್ಪತ್ರೆ ದಾಖಲು ವಿಳಂಬ: ಅಧಿಕಾರಿಗಳಿಗೆ ಗೋಪಾಲಯ್ಯ ಎಚ್ಚರಿಕೆ

ಕೋವಿಡ್‌ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 10 ಜುಲೈ 2020, 21:26 IST
Last Updated 10 ಜುಲೈ 2020, 21:26 IST
ಅಧಿಕಾರಿಗಳಿಂದ ಸಚಿವ ಕೆ.ಗೋಪಾಲಯ್ಯ ಮಾಹಿತಿ ಪಡೆದರು. ಶಾಸಕ ಆರ್.ಮಂಜುನಾಥ್ ಇದ್ದರು.
ಅಧಿಕಾರಿಗಳಿಂದ ಸಚಿವ ಕೆ.ಗೋಪಾಲಯ್ಯ ಮಾಹಿತಿ ಪಡೆದರು. ಶಾಸಕ ಆರ್.ಮಂಜುನಾಥ್ ಇದ್ದರು.   

ಪೀಣ್ಯ ದಾಸರಹಳ್ಳಿ: 'ದಾಸರಹಳ್ಳಿ ವಲಯದ ಯಾವ ವಾರ್ಡ್‍ನಲ್ಲೂ ಕೊರೊನಾ ಪಾಸಿಟಿವ್ ಬಂದ ರೋಗಿಗಳನ್ನು ಕಾಯಿಸಬಾರದು. ಅವರನ್ನು ಕೂಡಲೇ ಆಸ್ಪತ್ರೆಗಳಿಗೆ ದಾಖಲು ಮಾಡಬೇಕು. ಒಂದು ವೇಳೆ ದೂರು ಬಂದರೆ ವಾರ್ಡ್‍ಮಟ್ಟದ ಪಾಲಿಕೆ ಸದಸ್ಯರು ಹಾಗೂ ಎಂಜಿನಿಯರ್‌ಗಳೇ ಹೊಣೆಗಾರರು' ಎಂದು ಆಹಾರ ಸಚಿವ ಕೆ.ಗೋಪಾಲಯ್ಯ ಎಚ್ಚರಿಸಿದರು.

ಕೊರೊನಾ ನಿಯಂತ್ರಣಕ್ಕಾಗಿ ದಾಸರಹಳ್ಳಿ ವಲಯದ ಜನಪ್ರತಿನಿಧಿಗಳು, ಪಾಲಿಕೆ ಸದಸ್ಯರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಶುಕ್ರವಾರ ಸಭೆ ನಡೆಸಿದರು.

'ಲಾಕ್‍ಡೌನ್ ಸಡಿಲಿಕೆಯಾದ ಬಳಿಕ ಸೋಂಕಿತರ ಪ್ರಮಾಣ ಹೆಚ್ಚಾಗುತ್ತಿದೆ. ವಾರ್ಡ್‍ಗಳಿಂದ ಬರುವ ದೂರುಗಳಿಗೆ ತಕ್ಷಣವೇ ಅಧಿಕಾರಿಗಳು ಸ್ಪಂದಿಸಬೇಕು. ಸೋಂಕಿನ ದೂರುಗಳು ಬಂದ ಸ್ಥಳಗಳಿಗೂ ಸೇರಿ ಪ್ರತಿ ವಾರ್ಡ್‍ನ ಬೀದಿಗಳು, ರಸ್ತೆ ಹಾಗೂ ಮನೆಗಳಿಗೆ ಸೋಮವಾರದೊಳಗೆ ಸ್ಯಾನಿಟೈಸ್ ಕಡ್ಡಾಯವಾಗಿ ಮಾಡಬೇಕು' ಎಂದು ಅಧಿಕಾರಿಗಳಿಗೆ ಸೂಚಿಸಿದರು.

ADVERTISEMENT

’ಕೋವಿಡ್‌ ಪರೀಕ್ಷಾ ವರದಿಗಳು ವಿಳಂಬವಾಗುತ್ತಿರುವ ಬಗ್ಗೆ ದೂರುಗಳು ಬಂದಿದ್ದು, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಗಮನಕ್ಕೆ ತಂದು ಶೀಘ್ರದಲ್ಲಿ ಬಗೆಹರಿಸಲಾಗುವುದು‘ ಎಂದು ಅವರು ಹೇಳಿದರು.

ಅಧಿಕಾರಿಗಳ ನಿರ್ಲಕ್ಷ್ಯ– ಶಾಸಕ ಕಿಡಿ: ಶಾಸಕ ಆರ್.ಮಂಜುನಾಥ್, ’ಲಾಕ್‌ಡೌನ್‌ ಇದ್ದಾಗ ಕ್ಷೇತ್ರದಲ್ಲಿ ಒಂದೇ ಒಂದು ಪ್ರಕರಣ ಇರಲಿಲ್ಲ. ಈಗ ಪ್ರಕರಣಗಳ ಸಂಖ್ಯೆ 116ಕ್ಕೆ ಏರಿದೆ. ಜಂಟಿ ಆಯುಕ್ತ ನರಸಿಂಹಮೂರ್ತಿ ನಿರ್ಲಕ್ಷ್ಯವೇ ಇದಕ್ಕೆ ಕಾರಣ‘ ಎಂದು ಆರೋಪಿಸಿದರು.

’ಕೊರೊನಾ ಸೋಂಕು ನಿಯಂತ್ರಣಕ್ಕಿಂತ ಅವರಿಗೆ ಬೇರೆ ವಿಷಯಗಳಲ್ಲೇ ಹೆಚ್ಚು ಆಸಕ್ತಿ. ಸೋಂಕು ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅವರು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಒಂದೇ ಒಂದು ಸಭೆ ನಡೆಸಿಲ್ಲ‘ ಎಂದು ಕಿಡಿಕಾರಿದರು.

’ಕ್ಷೇತ್ರದಲ್ಲಿ ಅಧಿಕಾರಿಗಳು ಸಬೂಬು ಹೇಳುವುದರಲ್ಲೇ ಕಾಲಹರಣ ಮಾಡುತ್ತಿದ್ದಾರೆ. ಸೋಂಕಿತರ ಮನೆಯವರಿಗೆ ಅಗತ್ಯ ಸೇವೆಗಳನ್ನು ಒದಗಿಸುತ್ತಿಲ್ಲ. ಅನಿವಾರ್ಯವಾಗಿ ಅವರು ಮನೆಯಿಂದ ಹೊರಬರಬೇಕಾದ ಸ್ಥಿತಿ ಇದೆ. ಸರಿಯಾಗಿ ಸೀಲ್‌ಡೌನ್‌ ಮಾಡುತ್ತಿಲ್ಲ‘ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.