ADVERTISEMENT

ಮಧುಬಲೆ ಪ್ರಕರಣ: ನೀಲಿ ಬಟ್ಟೆ ಧರಿಸಿದ್ದಳು, ನೀವು ಹುಡುಕಿದರೆ ಸಿಗಬಹುದು - ರಾಜಣ್ಣ

ಮಧುಬಲೆ ಪ್ರಕರಣದಲ್ಲಿ ಸಹಕಾರ ಸಚಿವ ಕೆ.ಎನ್‌.ರಾಜಣ್ಣ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2025, 0:06 IST
Last Updated 30 ಏಪ್ರಿಲ್ 2025, 0:06 IST
ಕೆ.ಎನ್‌.ರಾಜಣ್ಣ
ಕೆ.ಎನ್‌.ರಾಜಣ್ಣ   

ಬೆಂಗಳೂರು: ‘ಅಸಭ್ಯವಾಗಿ ವರ್ತಿಸಿದ ಯುವತಿ ನೀಲಿ ಬಟ್ಟೆ ಧರಿಸಿದ್ದಳು. ನೀವು (ಸಿಐಡಿ) ಹುಡುಕಿದರೆ ಆಕೆ ಸಿಗಬಹುದು...’

–ಮಧುಬಲೆ (ಹನಿಟ್ರ್ಯಾಪ್‌) ಪ್ರಕರಣಕ್ಕೆ ಸಂಬಂಧಿಸಿದಂತೆ ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಅವರು ಸಿಐಡಿ ಅಧಿಕಾರಿಗಳ ಎದುರು ಈ ರೀತಿ ಹೇಳಿಕೆ ನೀಡಿದ್ದಾರೆ ಎಂದು ಗೊತ್ತಾಗಿದೆ.

ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಅಲೋಕ್‌ ಮೋಹನ್‌ ಸೂಚನೆ ಮೇರೆಗೆ ಮಧುಬಲೆ ಪ್ರಕರಣದ ವಿಚಾರಣೆಯನ್ನು ಸಿಐಡಿ ಅಧಿಕಾರಿಗಳು ನಡೆಸುತ್ತಿದ್ದು, ನಾಲ್ಕು ದಿನಗಳ ಹಿಂದೆ ಇಲ್ಲಿನ ಜಯಮಹಲ್‌ ರಸ್ತೆಯಲ್ಲಿ ಸಚಿವರ ನಿವಾಸಕ್ಕೆ ತನಿಖಾಧಿಕಾರಿಗಳು ಭೇಟಿ ನೀಡಿ, ಸಚಿವರಿಂದ ಮಾಹಿತಿ ಕಲೆಹಾಕಿದ್ದಾರೆ.

ADVERTISEMENT

‘ಪ್ರಮುಖ ವಿಚಾರವನ್ನು ಮಾತನಾಡುವುದಾಗಿ ಹೇಳಿಕೊಂಡು ಮನೆಗೆ ಬಂದಿದ್ದಳು. ಪ್ರಮುಖ ವಿಚಾರ ಎಂದಾಗ ಕ್ಯಾಬಿನ್‌ ಒಳಗೆ ಕರೆದೊಯ್ದು ಮಾತನಾಡಿಸಿದ್ದೆ. ಆಗ ನನ್ನ ಕೈಹಿಡಿದು ಎಳೆಯಲು ಪ್ರಯತ್ನಿಸಿದ್ದಳು. ಅಸಭ್ಯವಾಗಿ ವರ್ತಿಸಿದ್ದಳು. ಆಗ ಕೆನ್ನೆಗೆ ಹೊಡೆದು ಕಳುಹಿಸಿದ್ದೆ. ಆಕೆಯ ಮುಖ ಪರಿಚಯ ಇಲ್ಲ ಎಂಬುದಾಗಿ ಸಚಿವರು ಹೇಳಿಕೆ ಕೊಟ್ಟಿದ್ದಾರೆ’ ಎಂದು ಮೂಲಗಳು ಹೇಳಿವೆ.

ಗಡ್ಡಧಾರಿ ವ್ಯಕ್ತಿ:

‘ಜಯಮಹಲ್‌ನಲ್ಲಿರುವ ಸರ್ಕಾರಿ ನಿವಾಸಕ್ಕೆ ಎರಡು ಬಾರಿ ಬೇರೆ ಬೇರೆ ಯುವತಿಯರು ಬಂದಿದ್ದರು. ಇಬ್ಬರ ಪರಿಚಯವೂ ಇಲ್ಲ. ಅವರ ಜತೆಗೆ ಗಡ್ಡಧಾರಿ ವ್ಯಕ್ತಿ ಬಂದಿದ್ದರು. ಘಟನೆ ನಡೆದ ದಿನ ಮನೆಯಲ್ಲಿ ಕಾರ್ಯಕರ್ತರು ಹಾಗೂ ಮುಖಂಡರು ಇದ್ದರು. ಘಟನೆ ನಡೆದ ದಿನ ಯಾವುದು ಎಂಬ ಮಾಹಿತಿ ಇಲ್ಲ’ ಎಂದು ಹೇಳಿಕೆ ನೀಡಿದ್ದಾರೆ.

ಭದ್ರತಾ ಸಿಬ್ಬಂದಿಯ ವಿಚಾರಣೆ:

ಮಾರ್ಚ್ 31ರಂದು ರಾಜಣ್ಣ ಅವರ ಆಪ್ತ ಸಹಾಯಕ (ಪಿ.ಎ), ಇಬ್ಬರು ಅಂಗರಕ್ಷಕರನ್ನು ವಿಚಾರಣೆಗೆ ಒಳಪಡಿಸಿ ಪ್ರಕರಣದ ಕುರಿತು ಮಾಹಿತಿ ಪಡೆದುಕೊಳ್ಳಲಾಗಿದೆ. ಜತೆಗೆ ಡೈರಿಯಲ್ಲಿ ನಮೂದಿಸಿದ್ದ ಮೊಬೈಲ್‌ ಫೋನ್‌ ಸಂಖ್ಯೆಗಳನ್ನು ಪಡೆದು ಸಚಿವರ ಮನೆಗೆ ಬಂದಿದ್ದವರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಶೀಘ್ರದಲ್ಲೇ ವರದಿ ಸಲ್ಲಿಕೆ?:

‘ಗೃಹ ಸಚಿವ ಜಿ.ಪರಮೇಶ್ವರ ಹಾಗೂ ಅಲೋಕ್‌ ಮೋಹನ್ ಅವರ ಸೂಚನೆ ಮೇರೆಗೆ ತನಿಖೆ ನಡೆಯುತ್ತಿದೆ. ಸದ್ಯದಲ್ಲೇ ತನಿಖೆ ಪೂರ್ಣಗೊಳಿಸಿ ಇಬ್ಬರಿಗೂ ವರದಿ ಸಲ್ಲಿಸಲಾಗುವುದು’ ಎಂದು ಸಿಐಡಿ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.