ಚರಕ ಸಂಸ್ಥೆ ಮತ್ತು ದೇಸಿ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ್ದ ‘ಕೊಡು–ಕೊಳ್ಳುವರ’ ಸಮಾವೇಶದಲ್ಲಿ ಪ್ರಸನ್ನ, ಸುರೇಂದ್ರ ಬಾಬು ಮತ್ತು ಶಿವಾನಂದ ಪಾಟೀಲ ಕೈಮಗ್ಗದ ಬಟ್ಟೆಗಳನ್ನು ವೀಕ್ಷಿಸಿದರು.
–ಪ್ರಜಾವಾಣಿ ಚಿತ್ರ.
ಬೆಂಗಳೂರು: ವಿದ್ಯುತ್ ಮಗ್ಗ ಅಭಿವೃದ್ಧಿ ನಿಗಮ ಹಾಗೂ ಕೈಮಗ್ಗ ಅಭಿವೃದ್ಧಿ ನಿಗಮ ಎರಡನ್ನೂ ವಿಲೀನಗೊಳಿಸಿ ಒಂದೇ ನಿಗಮ ಸ್ಥಾಪಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ಕೈಮಗ್ಗ ಮತ್ತು ಜವಳಿ ಖಾತೆ ಸಚಿವ ಶಿವಾನಂದ ಪಾಟೀಲ ಹೇಳಿದರು.
ಚರಕ ಮತ್ತು ದೇಸಿ ಟ್ರಸ್ಟ್ ಸಂಯುಕ್ತವಾಗಿ ಚರ್ಚ್ ಸ್ಟ್ರೀಟ್‌ನ ಸಮಗತಾ ಸಭಾಂಗಣದಲ್ಲಿ ಆಯೋಜಿಸಿರುವ ಎರಡು ದಿನಗಳ ‘ಕೊಡು-ಕೊಳ್ಳುವವರ ಸಮಾವೇಶ'ವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
ನೇಕಾರ ಸಮುದಾಯ ತೀವ್ರ ಸಂಕಷ್ಟದಲ್ಲಿದೆ. ಎರಡರೆಡು ನಿಗಮಗಳಿಂದ ನೇಕಾರರ ಸಮಸ್ಯೆಗಳಿಗೆ ಸ್ಪಂದಿಸಲು ಸಾಧ್ಯವಾಗದಿರುವುದು ಮನಗಂಡು ಸರ್ಕಾರ ಈ ತೀರ್ಮಾನಕ್ಕೆ ಬಂದಿದೆ ಎಂದರು.
‘ಕೈಮಗ್ಗದ ಬಟ್ಟೆಗಳನ್ನು ಸರ್ಕಾರದ ಇಲಾಖೆಗಳು ಖರೀದಿಸಬೇಕೆಂಬ ನಿಯಮ ಇದೆ. ಆದರೆ, ಕೆಲವು ಅಧಿಕಾರಿಗಳ ಹಾಗೂ ಸಚಿವರ ಇಚ್ಛಾಶಕ್ತಿಯ ಕೊರತೆಯಿಂದ ಇದಕ್ಕೆ ಚಾಲನೆ ಸಿಕ್ಕಿಲ್ಲ. ಅವರಿಗೆ ಮನವರಿಕೆ ಮಾಡಿಕೊಡುವ ಕೆಲಸ ನಡೆದಿದೆ’ ಎಂದು ಹೇಳಿದರು.
ಕೈಮಗ್ಗ ಮತ್ತು ಜವಳಿ ಇಲಾಖೆ ಅಭಿವೃದ್ಧಿ ಆಯುಕ್ತೆ ಕೆ. ಜ್ಯೋತಿ ಮಾತನಾಡಿ, ‘ಸರ್ಕಾರ ‘ಮಹಾತ್ಮ ಗಾಂಧಿ ವಸ್ತ್ರೋದ್ಯಮ’ ಯೋಜನೆ ರೂಪಿಸಿದ್ದು, ಇದರಲ್ಲಿ ಕೈಮಗ್ಗ ನೇಕಾರರನ್ನೇ ಷೇರುದಾರರನ್ನಾಗಿ ಮಾಡಿಕೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಎರಡು ವರ್ಷಗಳ ಹಿಂದೆ ಈ ಯೋಜನೆಯನ್ನು ಸರ್ಕಾರ ಘೋಷಿಸಿತ್ತು. ಆದರೆ, ಚಾಲನೆ ಸಿಕ್ಕಿರಲಿಲ್ಲ. ಈಗ ‘ಮಹಾತ್ಮ ಗಾಂಧಿ ವಸ್ತ್ರೋದ್ಯಮ ಕೋಶ’ ಎಂಬ ಲಿಮಿಟೆಡ್ ಕಂಪನಿ ಆರಂಭಿಸಲಾಗುತ್ತಿದೆ’ ಎಂದರು.
ಚರಕ ಸಂಸ್ಥೆ ಸಂಸ್ಥಾಪಕ ಪ್ರಸನ್ನ, ನರ್ಬಾಡ್ ಮುಖ್ಯ ಪ್ರಧಾನ ವ್ಯವಸ್ಥಾಪಕ ಸುರೇಂದ್ರ ಬಾಬು ಮಾತನಾಡಿದರು. ಕೈಮಗ್ಗ ಮತ್ತು ಜವಳಿ ಇಲಾಖೆ ನಿವೃತ್ತ ಆಯುಕ್ತ ಬಿ.ಎಫ್. ಪಾಟೀಲ್, ನೇಕಾರ ಸೇವಾ ಕೇಂದ್ರದ ಮುಖ್ಯಸ್ಥ ಪ್ರಭಾಕರ್, ಚರಕ ಸಂಸ್ಥೆ ಅಧ್ಯಕ್ಷೆ ಮಹಾಲಕ್ಷ್ಮಿ, ಡಿಕನಿ ಡೈರಿಯ ಗೋಪಿ, ದೇಸಿ ಟ್ರಸ್ಟ್‌ನ ಶಾರದಾ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.