ADVERTISEMENT

ರೈತರಿಗೆ ತ್ವರಿತ ಪರಿಹಾರಕ್ಕೆ ಸಚಿವ ವಿ. ಸೋಮಣ್ಣ ಸೂಚನೆ

ಸೂರ್ಯಸಿಟಿ 4ನೇ ಹಂತದ ವಸತಿ ಯೋಜನೆ

​ಪ್ರಜಾವಾಣಿ ವಾರ್ತೆ
Published 24 ಮೇ 2022, 19:08 IST
Last Updated 24 ಮೇ 2022, 19:08 IST
ಆನೇಕಲ್ ತಾಲ್ಲೂಕಿನ ಸೂರ್ಯಸಿಟಿ 4ನೇ ಹಂತದ ಯೋಜನಾ ಪ್ರದೇಶದ ಭೂಮಾಲೀಕರು ಮತ್ತು ಅಧಿಕಾರಿಗಳ ಸಭೆಯನ್ನುದ್ದೇಶಿಸಿ ವಸತಿ ಸಚಿವ ವಿ.ಸೋಮಣ್ಣ ಮಾತನಾಡಿದರು
ಆನೇಕಲ್ ತಾಲ್ಲೂಕಿನ ಸೂರ್ಯಸಿಟಿ 4ನೇ ಹಂತದ ಯೋಜನಾ ಪ್ರದೇಶದ ಭೂಮಾಲೀಕರು ಮತ್ತು ಅಧಿಕಾರಿಗಳ ಸಭೆಯನ್ನುದ್ದೇಶಿಸಿ ವಸತಿ ಸಚಿವ ವಿ.ಸೋಮಣ್ಣ ಮಾತನಾಡಿದರು   

ಆನೇಕಲ್: ತಾಲ್ಲೂಕಿನ ಸೂರ್ಯಸಿಟಿ 4ನೇ ಹಂತದ ಯೋಜನಾ ಪ್ರದೇಶದ ಭೂ ಮಾಲೀಕರು ಮತ್ತು ಅಧಿಕಾರಿಗಳ ಸಭೆಯು ವಸತಿ ಸಚಿವ ವಿ. ಸೋಮಣ್ಣ ನೇತೃತ್ವದಲ್ಲಿ ಜಿಗಣಿಯ ಯೋಗ ವಿಶ್ವವಿದ್ಯಾಲಯ ಪ್ರಶಾಂತಿ ಕುಟೀರದಲ್ಲಿ ಮಂಗಳವಾರ ನಡೆಯಿತು.

ಸಚಿವ ಸೋಮಣ್ಣ ಮಾತನಾಡಿ, ‘ವಸತಿ ಯೋಜನೆಗಾಗಿ ಭೂಸ್ವಾಧೀನ ಪಡಿಸಿಕೊಂಡ ರೈತರಿಗೆ ದೊರೆಯ ಬೇಕಾದ ಪರಿಹಾರವನ್ನು ತ್ವರಿತವಾಗಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ತಿಳಿಸಿದರು.

ಕೆಲವು ದಾಖಲೆ ಪತ್ರಗಳು ಸಮರ್ಪಕವಾಗಿಲ್ಲ ಎಂಬ ಕಾರಣ ನೀಡಿ ಪರಿಹಾರ ನೀಡಲು ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ ಎಂದು ರೈತರು ತಿಳಿಸಿ ದ್ದಾರೆ. ಕಂದಾಯ ಮತ್ತು ವಸತಿ ಇಲಾಖೆ ಅಧಿಕಾರಿಗಳು ಗ್ರಾಮಗಳಿಗೆ ತೆರಳಿ ಸ್ಥಳ ಪರಿಶೀಲನೆ ಮಾಡಿ ಅರ್ಹ ರೈತರಿಗೆ ಪರಿಹಾರ ನೀಡಲು ಕ್ರಮಕೈಗೊಳ್ಳಬೇಕು ಎಂದು ಸೂಚಿಸಿದರು.

ADVERTISEMENT

ಇಂಡ್ಲವಾಡಿ, ಬೊಮ್ಮಂಡಹಳ್ಳಿ, ಕಾಡುಜಕ್ಕನಹಳ್ಳಿ, ಬಗ್ಗನದೊಡ್ಡಿ, ಕೋನಸಂದ್ರ ಗ್ರಾಮಗಳ ಸುಮಾರು 1,938 ಎಕರೆ ಜಮೀನನ್ನು ವಸತಿ ಯೋಜನೆಗೆ ಸ್ವಾಧೀನಪಡಿಸಿಕೊಳ್ಳಲಾಗಿದೆ. ಜಮೀನು ನೀಡಿರುವುದರಿಂದ ಈ ಐದು ಗ್ರಾಮಗಳಲ್ಲಿಯೂ ಮೂಲಸೌಲಭ್ಯ ಕಲ್ಪಿಸಲು ಕರ್ನಾಟಕ ಗೃಹ ಮಂಡಳಿ ಕ್ರಮ ಕೈಗೊಳ್ಳಬೇಕು ಎಂದರು.

ಕೆಲವು ರೈತರು ನಮೂನೆ 50, 53 ಅರ್ಜಿಗಳನ್ನು ಸಲ್ಲಿಸಿ ಭೂ ಮಂಜೂ ರಾತಿಗೆ ಕಾಯುತ್ತಿದ್ದಾರೆ. ಅವರು ಹಲವು ವರ್ಷಗಳಿಂದ ಸಾಗುವಳಿ ಮಾಡುತ್ತಾ ಬಂದಿದ್ದಾರೆ. ನ್ಯಾಯಬದ್ಧವಾಗಿ ಅವರಿಗೆ ದೊರೆಯುವ ಸೌಲಭ್ಯಗಳನ್ನು ಅಧಿಕಾರಿಗಳು ಪರಿಶೀಲಿಸಿ ನೀಡುವಂತೆ ಸೂಚಿಸಲಾಗಿದೆ ಎಂದರು.

1,938 ಎಕರೆ ಸ್ವಾಧೀನ
‘ಸೂರ್ಯಸಿಟಿ 4ನೇ ಹಂತದ ಯೋಜನೆಗೆ 1,938 ಎಕರೆ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಈ ಪೈಕಿ 514 ಎಕರೆ ಜಮೀನು ಸರ್ಕಾರಿ ಜಮೀನಾಗಿದೆ’ ಎಂದು ಜಿಲ್ಲಾಧಿಕಾರಿ ಜೆ. ಮಂಜುನಾಥ್‌ ತಿಳಿಸಿದರು.

ಸಭೆಯಲ್ಲಿ ಮಾತನಾಡಿದ ಅವರು, ಐದು ಗ್ರಾಮಗಳು 11 ಸರ್ವೆ ನಂಬರ್‌ಗಳಲ್ಲಿ ಭೂಸ್ವಾಧೀನ ಮಾಡಲಾಗಿದೆ. ಪಹಣಿಗಳಲ್ಲಿ ಕೆಲವು ದಾಖಲೆಗಳು ಹೊಂದಾಣಿಕೆಯಾಗುತ್ತಿಲ್ಲ. ಇವುಗಳನ್ನು ಸರಿಪಡಿಸಿ ಪರಿಹಾರ ನೀಡುವಂತೆ ಸಚಿವರು ಸೂಚಿಸಿದ್ದಾರೆ. ಈ ನಿಟ್ಟಿನಲ್ಲಿ ಜೂನ್‌ 2ರಂದು ಉಪ ವಿಭಾಗಾಧಿಕಾರಿ ಅವರು ಗ್ರಾಮಗಳಲ್ಲಿ ವಾಸ್ತವ್ಯ ಹೂಡಿ ಖುದ್ದು ಪರಿಶೀಲಿಸಿ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಲಿದ್ದಾರೆ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.