ADVERTISEMENT

ಗೈರಾದವರನ್ನು ಕರೆಸಿದ ಸಭಾಧ್ಯಕ್ಷರು!

* ಸಚಿವರ ಹಾಜರಿ ತೆಗೆದುಕೊಂಡು ಅಶಿಸ್ತು ಸಹಿಸಲ್ಲ ಎಂದರು

​ಪ್ರಜಾವಾಣಿ ವಾರ್ತೆ
Published 4 ಜುಲೈ 2018, 16:46 IST
Last Updated 4 ಜುಲೈ 2018, 16:46 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ    

ಬೆಂಗಳೂರು: ಕಲಾಪ ಆರಂಭವಾದರೂ ಆಡಳಿತ ಪಕ್ಷದ ಮುಂದಿನ ಸಾಲು ಖಾಲಿ, ಖಾಲಿ ಆಗಿರುವುದನ್ನು ಗಮನಿಸಿದ ಸಭಾಧ್ಯಕ್ಷ ರಮೇಶಕುಮಾರ್‌, ಕಡ್ಡಾಯವಾಗಿ ಇರಲೇಬೇಕಿದ್ದ ಸಚಿವರ ಹಾಜರಿ ತೆಗೆದುಕೊಂಡು ಬಾರದಿದ್ದವರನ್ನೆಲ್ಲ ಕರೆಸಿದ ಘಟನೆಗೆ ವಿಧಾನಸಭೆ ಬುಧವಾರ ಸಾಕ್ಷಿಯಾಯಿತು.

ವಿಧಾನಸಭೆಯಲ್ಲಿ ಒಟ್ಟು 13 ಸಚಿವರು ಕಡ್ಡಾಯವಾಗಿ ಹಾಜರಿರಬೇಕಿತ್ತು. ಆದರೆ, ಸಭಾಧ್ಯಕ್ಷರು ಹಾಜರಿ ತೆಗೆದುಕೊಂಡಾಗ ಉಪಮುಖ್ಯಮಂತ್ರಿ ಜಿ.ಪರಮೇಶ್ವರ, ಸಚಿವರಾದ ಬಂಡೆಪ್ಪ ಕಾಶೆಂಪೂರ, ಎಂ.ಸಿ. ಮನಗೂಳಿ, ವೆಂಕಟರಾವ್‌ ನಾಡಗೌಡ, ಪ್ರಿಯಾಂಕ್‌ ಖರ್ಗೆ ಮತ್ತು ಶಿವಾನಂದ ಪಾಟೀಲ ಮಾತ್ರ ಇರುವುದು ಕಂಡುಬಂತು.

ಗೈರು ಹಾಜರಾಗಿದ್ದ ಸಚಿವರಾದ ಡಿ.ಕೆ.ಶಿವಕುಮಾರ್‌, ಎಚ್‌.ಡಿ. ರೇವಣ್ಣ, ರಮೇಶ ಜಾರಕಿಹೊಳಿ, ಯು.ಟಿ. ಖಾದರ್‌, ಸಿ.ಎಸ್‌.ಪುಟ್ಟರಾಜು, ಸಾ.ರಾ. ಮಹೇಶ್‌ ಹಾಗೂ ಜಮೀರ್‌ ಅಹ್ಮದ್‌ ಖಾನ್‌ ಅವರನ್ನು 15 ನಿಮಿಷಗಳಲ್ಲಿ ಸದನಕ್ಕೆ ಕರೆಸಬೇಕು ಎಂದು ಉಪಮುಖ್ಯಮಂತ್ರಿಯವರಿಗೆ ಸೂಚನೆ ನೀಡಿದರು. ಕೆಲವೇ ನಿಮಿಷಗಳಲ್ಲಿ ಒಬ್ಬೊಬ್ಬರೇ ಸಚಿವರು ಕೈಯಲ್ಲಿ ಕಡತ ಹಿಡಿದುಕೊಂಡು ಸದನಕ್ಕೆ ಧಾವಿಸಿ ಬಂದರು. ಮತ್ತೊಮ್ಮೆ ಪಟ್ಟಿ ನೋಡಿದ ಸಭಾಧ್ಯಕ್ಷರು, ಎಲ್ಲರೂ ಬಂದಿರುವುದನ್ನು ಖಚಿತಪಡಿಸಿಕೊಂಡರು.

ADVERTISEMENT

ಸಚಿವ ರೇವಣ್ಣನವರು ತಮಗೆ ಮೀಸಲಾಗಿರುವ ಮುಂದಿನ ಆಸನವನ್ನು ಬಿಟ್ಟು, ಹಿಂದಿನ ಆಸನದಲ್ಲಿ ಕುಳಿತುಕೊಂಡರು. ಇದನ್ನು ಗಮನಿಸಿದ ಸಭಾಧ್ಯಕ್ಷರು, ‘ನಿಮ್ಮ ಆಸನ ಇಲ್ಲಿದೆ; ನೀವು ಅಲ್ಲಿ ಕುಳಿತರೆ ಶೋಭೆ. ಮುಂದೆ ಬನ್ನಿ ಸಚಿವರೇ’ ಎಂದು ಕರೆದರು. ಅದಕ್ಕೆ ಪ್ರತಿಕ್ರಿಯಿಸಿದ ರೇವಣ್ಣ, ‘ಸರ್‌, ನನಗೆ ಆ ಸೀಟು ಬೇಡ. ಹಿಂದಿನ ಸಾಲಿನ ಆಸನವನ್ನೇ ಅಲಾಟ್‌ ಮಾಡಿ’ ಎಂದು ವಿನಂತಿಸಿದರು. ‘ವಾಸ್ತು ನೋಡಿ ಆಸನ ನಿಗದಿಮಾಡಲು ಆಗಲ್ಲ’ ಎಂದು ರಮೇಶಕುಮಾರ್‌ ಹೇಳಿದಾಗ ಸದನದಲ್ಲಿ ನಗೆಯ ಅಲೆ ಎದ್ದಿತು.

ಆಡಳಿತ ಪಕ್ಷದ ಸಾಲಿನಲ್ಲಿ ಶಾಸಕರು ಅತ್ತಿಂದಿತ್ತ ಓಡಾಡುವುದನ್ನು ಗಮನಿಸಿದ ಅವರು, ‘ನನಗೆ ಬಾಲ್ಯದ ದಿನಗಳಲ್ಲಿ ಕಂಡ ಸಂತೆಯ ನೆನಪು ಬರುತ್ತಿದೆ’ ಎಂದು ಹೇಳಿ, ಮತ್ತೆ ನಗೆ ಉಕ್ಕುವಂತೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.