ADVERTISEMENT

ಮನೆ ಬಿಟ್ಟು ಬಂದಿದ್ದ ಅಪ್ರಾಪ್ತೆ ಮೇಲೆ ಅತ್ಯಾಚಾರ: ಕಾನ್‌ಸ್ಟೆಬಲ್ ಸೆರೆ

ಕರ್ತವ್ಯದ ವೇಳೆ ಕೃತ್ಯ ಎಸಗಿದ್ದ ಆರೋಪಿ

​ಪ್ರಜಾವಾಣಿ ವಾರ್ತೆ
Published 30 ಜುಲೈ 2022, 1:05 IST
Last Updated 30 ಜುಲೈ 2022, 1:05 IST
ಪವನ್ ದ್ಯಾವಣ್ಣನವರ್
ಪವನ್ ದ್ಯಾವಣ್ಣನವರ್   

ಬೆಂಗಳೂರು: ಮನೆ ಬಿಟ್ಟು ಬಂದಿದ್ದ ಬಾಲಕಿಯನ್ನು ಪುಸಲಾಯಿಸಿ ಅತ್ಯಾಚಾರ ಎಸಗಿದ್ದ ಆರೋಪದಡಿ ಕಾನ್‌ಸ್ಟೆಬಲ್ ಪವನ್ ದ್ಯಾವಣ್ಣನವರ್ ಅವರನ್ನು ಕೆ.ಪಿ.ಅಗ್ರಹಾರ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಆರೋಪಿ ಪವನ್, ಗೋವಿಂದರಾಜನಗರ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದ. ಈತ ಎಸಗಿದ್ದ ಕೃತ್ಯದ ಬಗ್ಗೆ ಬಾಲಕಿ ಹೇಳಿಕೆ ನೀಡಿದ್ದಾಳೆ. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ (ಪೋಕ್ಸೊ) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು, ಆರೋಪಿಯನ್ನು ಬಂಧಿಸಲಾಗಿದೆ. ಸದ್ಯ ಈತ ನ್ಯಾಯಾಂಗ ಬಂಧನದಲ್ಲಿದ್ದಾನೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

ಡ್ರಾಪ್ ನೆಪದಲ್ಲಿ ಪರಿಚಯ: ‘ಕೆ.ಪಿ.ಅಗ್ರಹಾರ ಠಾಣೆ ವ್ಯಾಪ್ತಿಯಲ್ಲಿ ಪೋಷಕರ ಜೊತೆ ವಾಸವಿದ್ದ ಬಾಲಕಿ, ಚಾಮರಾಜನಗರದ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದಳು. ಆತನನ್ನೇ ಮದುವೆಯಾಗಲೆಂದು ಜುಲೈ 26ರಂದು ಮನೆ ಬಿಟ್ಟು ಚಾಮರಾಜನಗರಕ್ಕೆ ಹೊರಟಿದ್ದಳು. ಮನೆಯಿಂದ ಬಾಲಕಿ ನಾಪತ್ತೆಯಾದ ಬಗ್ಗೆ ಪೋಷಕರು ಠಾಣೆಯಲ್ಲಿ ಪ್ರಕರಣ ಸಹ ದಾಖಲಿಸಿದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ADVERTISEMENT

‘ತನ್ನ ಮನೆಯಿಂದ ವಿಜಯನಗರಕ್ಕೆ ಹೋಗಿದ್ದ ಬಾಲಕಿ, ಉದ್ಯಾನ ಬಳಿಯ ರಸ್ತೆಯಲ್ಲಿ ಓಡಾಡುತ್ತಿದ್ದಳು. ಮಫ್ತಿಯಲ್ಲಿ ಕರ್ತವ್ಯದಲ್ಲಿದ್ದ ಕಾನ್‌ಸ್ಟೆಬಲ್ ಪವನ್, ಬಾಲಕಿಯನ್ನು ಮಾತನಾಡಿಸಿದ್ದ. ಆಕೆ ಯುವಕನನ್ನು ಪ್ರೀತಿಸುತ್ತಿದ್ದ ವಿಷಯ ತಿಳಿದುಕೊಂಡಿದ್ದ. ಯುವಕನ ಮನೆ ಇರುವ ಚಾಮರಾಜನಗರಕ್ಕೆ ಹೋಗಲು ನಿಲ್ದಾಣಕ್ಕೆ ಡ್ರಾಪ್ ಕೊಡುವುದಾಗಿ ಹೇಳಿ ಬೈಕ್‌ನಲ್ಲಿ ಹತ್ತಿಸಿಕೊಂಡು ಅಲ್ಲಿಂದ ಹೊರಟಿದ್ದ.’

‘ಮಾರ್ಗಮಧ್ಯೆ ಬಾಲಕಿಯನ್ನು ಪುಸಲಾಯಿಸಿದ್ದ ಕಾನ್‌ಸ್ಟೆಬಲ್, ‘ಈಗ ಸಂಜೆ ಆಗಿದೆ. ಚಾಮರಾಜನಗರಕ್ಕೆ ಹೋಗುವಷ್ಟರಲ್ಲಿ ರಾತ್ರಿ ಆಗುತ್ತದೆ. ಬೆಳಿಗ್ಗೆ ನಿಲ್ದಾಣಕ್ಕೆ ಬಿಡುತ್ತೇನೆ. ಇಂದು ರಾತ್ರಿ ಕೊಠಡಿಯಲ್ಲಿ ಇರು’ ಎಂದಿದ್ದ. ಅದನ್ನು ನಂಬಿದ್ದ ಬಾಲಕಿ, ಆತನ ಕೊಠಡಿಯಲ್ಲಿ ಉಳಿದುಕೊಂಡಿದ್ದಳು’ ಎಂದು ಮೂಲಗಳು ಹೇಳಿವೆ.

‘ಕೊಠಡಿಯಲ್ಲಿ ಬಾಲಕಿ ಜೊತೆ ಅನುಚಿತವಾಗಿ ವರ್ತಿಸಿದ್ದ ಕಾನ್‌ಸ್ಟೆಬಲ್, ಅತ್ಯಾಚಾರ ಎಸಗಿದ್ದ. ಜುಲೈ 27ರಂದು ಬೆಳಿಗ್ಗೆ ಬಾಲಕಿಯನ್ನು ನಿಲ್ದಾಣಕ್ಕೆ ಕರೆದೊಯ್ದು ಹಣ ನೀಡಿ ಚಾಮರಾಜನಗರ ಬಸ್ ಹತ್ತಿಸಿ ಕಳುಹಿಸಿದ್ದ’ ಎಂದು ತಿಳಿಸಿವೆ.

‘ನ್ಯಾಯ ಮಂಡಳಿಯಲ್ಲಿ ಬಯಲಾದ ಪ್ರಕರಣ’: ’ಚಾಮರಾಜನಗರದ ಯುವಕನ ಮನೆಗೆ ಜುಲೈ 27ರಂದು ಬಾಲಕಿ ಹೋಗಿದ್ದಳು. ಅಪ್ರಾಪ್ತೆಯಾಗಿದ್ದರಿಂದ ಹೆದರಿದ್ದ ಯುವಕನ ತಂದೆ, ಸ್ಥಳೀಯ ಠಾಣೆಗೆ ಮಾಹಿತಿ ನೀಡಿದ್ದರು. ಅಲ್ಲಿಯ ಸಿಬ್ಬಂದಿ, ಕೆ.ಪಿ. ಅಗ್ರಹಾರ ಠಾಣೆಗೆ ಮಾಹಿತಿ ರವಾನಿಸಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಅಪಹರಣ ಪ್ರಕರಣ ದಾಖಲಾಗಿದ್ದರಿಂದ ಬಾಲಕಿಯನ್ನು ಕರೆತಂದಿದ್ದ ಕೆ.ಪಿ.ಅಗ್ರಹಾರ ಪೊಲೀಸರು, ಬಾಲ ನ್ಯಾಯ ಮಂಡಳಿ ಎದುರು ಹಾಜರುಪಡಿಸಿದ್ದರು. ಇದೇ ವೇಳೆಯೇ ಬಾಲಕಿ, ತನ್ನ ಮೇಲೆ ಕಾನ್‌ಸ್ಟೆಬಲ್‌ ಅತ್ಯಾಚಾರ ಎಸಗಿರುವುದಾಗಿ ಹೇಳಿಕೆ ನೀಡಿದ್ದಳು. ವಿಷಯ ಗೊತ್ತಾಗುತ್ತಿದ್ದಂತೆ ಪೋಕ್ಸೊ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಕಾನ್‌ಸ್ಟೆಬಲ್‌ನನ್ನು ಬಂಧಿಸಿದ್ದಾರೆ. ಈತನನ್ನೂ ಸೇವೆಯಿಂದಲೂ ಅಮಾನತು ಮಾಡಲಾಗಿದೆ’ ಎಂದೂ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.