ADVERTISEMENT

ಗಣಿಗಾರಿಕೆ: ರಾಯಧನ ಪರಿಷ್ಕರಣೆ

​ಪ್ರಜಾವಾಣಿ ವಾರ್ತೆ
Published 1 ಜುಲೈ 2020, 21:58 IST
Last Updated 1 ಜುಲೈ 2020, 21:58 IST

ಬೆಂಗಳೂರು: ಉಪ ಖನಿಜ ಗಣಿಗಾರಿಕೆ ಸಂಬಂಧ ವಿಧಿಸಲಾಗುವ ರಾಯಧನ ಪರಿಷ್ಕರಣೆ ಜೊತೆಗೆ, ಪರವಾನಗಿ ಇಲ್ಲದೆ ಉಪ ಖನಿಜ ಸಾಗಣೆ ವೇಳೆ ಜಪ್ತಿಯಾಗುವ ವಾಹನಗಳ ಮಾದರಿವಾರು ವಿಧಿಸುವ ದಂಡ ಪ್ರಮಾಣ ನಿಗದಿಪಡಿಸಿ ರಾಜ್ಯ ಸರ್ಕಾರ ‘ಕರ್ನಾಟಕ ಉಪ ಖನಿಜ ರಿಯಾಯಿತಿ ಕಾಯ್ದೆ (ತಿದ್ದುಪಡಿ)–2020’ ಅನ್ನು ರಾಜ್ಯಪತ್ರದಲ್ಲಿ ಪ್ರಕಟಿಸಿದೆ.

ಆಯ್ದ ಕೆಂಪು, ಕಪ್ಪು, ತಿಳಿ ಕೆಂಪು, ಕಂದು, ಬಿಳಿ ಬಣ್ಣದ ಗ್ರಾನೈಟ್ ಶಿಲೆ ಮತ್ತು ಪ್ರದೇಶವಾರು ಸಿಗುವ ಆಯ್ದ ಗ್ರಾನೈಟ್ ಶಿಲೆಗಳಿಗೆ ಮಾರಾಟ ಶುಲ್ಕ ಇಲ್ಲವೇ ಸರಾಸರಿ ಮಾರಾಟ ಶುಲ್ಕ, ನಿರ್ದಿಷ್ಟ ಪ್ರಮಾಣಕ್ಕಿಂತ ಟನ್‍ವಾರು ಶುಲ್ಕ ನಿಗದಿಪಡಿಸಲಾಗಿದೆ. ಗಣಿಗಾರಿಕೆ ವೇಳೆ ಉತ್ಪತ್ತಿಯಾಗುವ ಆಕಾರ ರಹಿತ ಅನುಪಯುಕ್ತ ಶಿಲೆಗಳಿಗೂ ಟನ್‍ವಾರು ರಾಯಧನ ನಿಗದಿಪಡಿಸಲಾಗಿದೆ.

ಅಕ್ರಮವಾಗಿ ಉಪ ಖನಿಜ ಸಾಗಣೆ ವೇಳೆ ವಶಪಡಿಸಿಕೊಳ್ಳುವ ವಾಹನಗಳನ್ನು ದಂಡ ಕಟ್ಟಿ ಬಿಡುಗಡೆ ಮಾಡಿಸಿಕೊಳ್ಳಬಹುದು. ವಶಪಡಿಸಿಕೊಂಡ ಎತ್ತಿನ ಗಾಡಿಗೆ ₹ 5,000, ಟ್ರ್ಯಾಕ್ಟರ್ ಸೇರಿದಂತೆ ಇತರ ಸಣ್ಣ ವಾಹನಗಳಿಗೆ ₹ 10,000, 10 ಟನ್‌ಗಿಂತ ಕಡಿಮೆ ಸಾಗಣೆ ಸಾಮರ್ಥ್ಯದ ವಾಹನಕ್ಕೆ ₹ 20,000, ಹತ್ತು ಟನ್‌ಗಿಂತಲೂ ಹೆಚ್ಚು ಸಾಗಣೆ ಸಾಮರ್ಥ್ಯದ ವಾಹನಕ್ಕೆ ₹ 30,000 ದಂಡ ವಿಧಿಸಲು ನಿಯಮದಲ್ಲಿ ಅವಕಾಶ ಕಲ್ಪಿಸಲಾಗಿದೆ.

ADVERTISEMENT

ಅಕ್ರಮ ಗಣಿಗಾರಿಕೆ ಕಾರಣಕ್ಕೆ ಜಪ್ತಿಯಾದ ಡ್ರಿಲ್ಲಿಂಗ್ ಯಂತ್ರ, ಕಂಪ್ರೆಸ್ಸರ್, ಪವರ್ ಟಿಲ್ಲರ್ ಮತ್ತಿತರ ಸಾಧನಗಳಿಗೆ ₹ 10,000, ಕ್ರೇನ್ ಡಂಪರ್‌ಗೆ ₹ 30,000, ಹೆವಿ ಡ್ಯೂಟಿ ಡಂಪರ್, ಎಕ್ಸವೇಟರ್ (ಜೆಸಿಬಿ, ಹಿಟಾಚಿ ಪವರ್ ಹ್ಯಾಮರ್‌ಗೆ ₹ 50,000 ಹಾಗೂ ಇತರೆ ಸಲಕರಣೆಗಳನ್ನು ಸಕ್ರಮಗೊಳಿಸಲು ₹ 20,000 ದಂಡ ನಿಗದಿಪಡಿಸಲಾಗಿ.

ಅಕ್ರಮ ಗಣಿಗಾರಿಕೆ ನಡೆಸಿ ಜಪ್ತಿಯಾದ ಉಪಖನಿಜಗಳ ಟನ್‌ವಾರು ದಂಡದ ಮೊತ್ತ ನಿಗದಿಪಡಿಸಲಾಗಿದೆ. ಗಣಿಗಾರಿಕೆ ಗುತ್ತಿಗೆ ವರ್ಗಾವಣೆಗೂ ಕಠಿಣ ನಿಯಮ ಜಾರಿಗೊಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.