ADVERTISEMENT

ಅಂಧ ಜಗತ್ತಿಗೆ ‘ಮಿಂಟೊ’ ಮಿಂಚು

ನಗರದ ಪ್ರಥಮ ಕಣ್ಣಿನ ಚಿಕಿತ್ಸೆ ಆಸ್ಪತ್ರೆಗೆ 125ನೇ ವರ್ಷದ ಸಂಭ್ರಮ

ವರುಣ ಹೆಗಡೆ
Published 20 ನವೆಂಬರ್ 2021, 16:55 IST
Last Updated 20 ನವೆಂಬರ್ 2021, 16:55 IST
ಮಿಂಟೊ ಕಣ್ಣಿನ ಆಸ್ಪತ್ರೆ – ಪ್ರಜಾವಾಣಿ ಚಿತ್ರ
ಮಿಂಟೊ ಕಣ್ಣಿನ ಆಸ್ಪತ್ರೆ – ಪ್ರಜಾವಾಣಿ ಚಿತ್ರ   

ಬೆಂಗಳೂರು: ಕಣ್ಣಿನ ಸಮಸ್ಯೆಗಳಿಗೆ ಚಿಕಿತ್ಸೆ ಒದಗಿಸಲು ನಗರದಸಂತೆ ಪೇಟೆ ರಸ್ತೆಯಲ್ಲಿ ಶತಮಾನದ ಹಿಂದೆ ಪ್ರಾರಂಭವಾದ ಸಣ್ಣ ನೇತ್ರ ಚಿಕಿತ್ಸಾ ಕೇಂದ್ರ, ಮಿಂಟೊ ನೇತ್ರ ಚಿಕಿತ್ಸಾ ಪ್ರಾದೇಶಿಕ ಸಂಸ್ಥೆಯಾಗಿ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿದೆ. 125ನೇ ವರ್ಷಕ್ಕೆ ಕಾಲಿಟ್ಟಿರುವ ಈ ಸಂಸ್ಥೆಯು ಜಗತ್ತಿನ ಅತಿ ಹಳೆಯ ಕಣ್ಣಿನ ಆಸ್ಪತ್ರೆಗಳಲ್ಲಿ ಒಂದು.

ಟಿಪ್ಪು ಸುಲ್ತಾನ್ ಅರಮನೆ ರಸ್ತೆ, ಆಲೂರು ವೆಂಕಟರಾವ್ ರಸ್ತೆಯಲ್ಲಿ ಸಾಗುವಾಗ ಕಾಣಸಿಗುವ ಬ್ರಿಟಿಷರ ಕಾಲದ ಕಟ್ಟಡವು ಮೊದಲ ನೋಟಕ್ಕೆ ಯಾವುದೋ ಅರಮನೆಯಂತೆ ಕಾಣಿಸುತ್ತದೆ. ಈಗಲೂ ಸುಸಜ್ಜಿತವಾಗಿರುವ ಕಲ್ಲಿನ ಕಟ್ಟಡದ ಒಳಗಡೆ ಹೋದ ಬಳಿಕವೇ ಇದು ಆಸ್ಪತ್ರೆ ಎನ್ನುವುದು ಅರಿವಾಗುತ್ತದೆ. 1896ರಲ್ಲಿ ಪ್ರಾರಂಭವಾದ ಈ ಚಿಕಿತ್ಸಾ ಕೇಂದ್ರ,ನಗರದ ಪ್ರಥಮ ಕಣ್ಣಿನ ಆಸ್ಪತ್ರೆಯಾಗಿದೆ. ಇಲ್ಲಿ ಲಕ್ಷಾಂತರ ಮಂದಿಗೆ ಶಸ್ತ್ರಚಿಕಿತ್ಸೆ ನಡೆಸಿ, ಅಂಧತ್ವ ದೂರ ಮಾಡಲಾಗಿದೆ.

ವೈಸರಾಯ್‌ ಮಿಂಟೊ ಅವರ ಸ್ಮರಣಾರ್ಥ ನೇತ್ರ ಚಿಕಿತ್ಸಾ ಕೇಂದ್ರಕ್ಕೆ‘ಮಿಂಟೊ ಆಸ್ಪತ್ರೆ’ ಎಂದು ನಾಮಕರಣ ಮಾಡಲಾಯಿತು. ಕಣ್ಣಿನ ಸಮಸ್ಯೆಗಳಿಗೆ ಚಿಕಿತ್ಸೆ ನೀಡುವುದು ಮತ್ತು ಅಂಧತ್ವ ನಿವಾರಿಸುವುದು ಈ ಆಸ್ಪತ್ರೆಯ ಮೂಲ ಉದ್ದೇಶ. ಆಸ್ಪತ್ರೆಯುಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಅಂಗಸಂಸ್ಥೆ.

ADVERTISEMENT

ಆಸ್ಪತ್ರೆಯ ಈಗಿನ ಕಟ್ಟಡಕ್ಕೆ ಕೃಷ್ಣರಾಜ ಒಡೆಯರ್ ಅವರು 1903ರಲ್ಲಿ ಅಡಿಪಾಯ ಹಾಕಿದ್ದರು.1913ರಲ್ಲಿ ಕಟ್ಟಡ ತಲೆಯೆತ್ತಿತ್ತು.1917ರಲ್ಲಿ ಮಿಂಟೊದ ಹಾಸಿಗೆಗಳ ಸಾಮರ್ಥ್ಯವನ್ನು 100ಕ್ಕೆ ವಿಸ್ತರಿಸಲಾಯಿತು. 1956ರಲ್ಲಿ ಬೋಧನಾ ಆಸ್ಪತ್ರೆ ಎಂದು ಗುರುತಿಸಲಾಯಿತು. 1960ರಲ್ಲಿ ಹಾಸಿಗೆಗಳ ಸಂಖ್ಯೆ 200ಕ್ಕೆ ಏರಿಕೆ ಕಂಡಿತು. ಮುಂದಿನ ಎರಡು ವರ್ಷಗಳ ಬಳಿಕ ಸ್ನಾತಕೋತ್ತರ ಕೋರ್ಸ್‌ಗಳನ್ನು ಇಲ್ಲಿ ಪ್ರಾರಂಭಿಸಲಾಯಿತು. ಆಸ್ಪತ್ರೆಯು 1982 ರಲ್ಲಿ ಮಿಂಟೊ ನೇತ್ರ ಚಿಕಿತ್ಸಾ ಪ್ರಾದೇಶಿಕ ಸಂಸ್ಥೆಯಾಗಿ ಮಾರ್ಪಾಡಾಯಿತು.

ಅತ್ಯಾಧುನಿಕ ತಂತ್ರಜ್ಞಾನ: ಆರಂಭದಲ್ಲಿ ಈ ಆಸ್ಪತ್ರೆಯಲ್ಲಿ ಕಣ್ಣು ಕೆಂಪಾಗುವಿಕೆ ಸಮಸ್ಯೆಗೆ ಮಾತ್ರ ಚಿಕಿತ್ಸೆ ನೀಡಲಾಗುತ್ತಿತ್ತು. ಈಗ ಅತ್ಯಾಧುನಿಕ ತಂತ್ರಜ್ಞಾನಗಳ ನೆರವಿನಿಂದ ವಿವಿಧ ಸಂಕೀರ್ಣ ಶಶ್ತ್ರಚಿಕಿತ್ಸೆಗಳನ್ನು ನಡೆಸುತ್ತಿದೆ. ಕಣ್ಣಿನ ಬ್ಯಾಂಕ್‌ ಕೂಡ ಇಲ್ಲಿದೆ. ಗ್ಲಾಕೋಮಾ, ವಿಟ್ರಿಯೊ–ರೆಟಿನಾ, ಆರ್ಬಿಟ್ ಆ್ಯಂಡ್ ಆಕ್ಯುಲೋಪ್ಲಾಸ್ಟಿ, ದೃಷ್ಟಿ ಕೊರತೆ ಚಿಕಿತ್ಸೆ ಸೇರಿದಂತೆ ವಿವಿಧ ವೈದ್ಯಕೀಯ ಸೌಲಭ್ಯ ಹೊಂದಿದೆ.

ರಾಜ್ಯದಲ್ಲಿಯೇ ಅತಿ ದೊಡ್ಡ ಮಕ್ಕಳ ಚಿಕಿತ್ಸಾ ಘಟಕ, ದಕ್ಷಿಣ ಭಾರತದಲ್ಲಿಯೇ ಪ್ರಥಮ ಸರ್ಕಾರಿ ರಿಫ್ರಾಕ್ಟಿವ್ ಸರ್ಜರಿ ಘಟಕ ಹೊಂದಿದ ಗೌರವಕ್ಕೂ ಆಸ್ಪತ್ರೆ ಭಾಜನವಾಗಿದೆ.

ಹೊರ ರಾಜ್ಯದವರಿಗೂ ಚಿಕಿತ್ಸೆ

ಮಿಂಟೊ ಕಣ್ಣಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಹೊರ ರಾಜ್ಯಗಳಿಂದಲೂ ರೋಗಿಗಳು ಬರುತ್ತಾರೆ. ಪ್ರತಿ ವರ್ಷ 1 ಲಕ್ಷಕ್ಕೂ ಅಧಿಕ ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ. 8 ಸಾವಿರ ಕಣ್ಣಿನ ಪೊರೆ ಮತ್ತು 2 ಸಾವಿರ ಸಂಕೀರ್ಣ ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಗುತ್ತಿದೆ. ಆಸ್ಪತ್ರೆಯು 33 ಕಣ್ಣಿನ ತಜ್ಞರು ಹಾಗೂ 70 ಕಿರಿಯ ವೈದ್ಯರನ್ನು ಹೊಂದಿದೆ.

ಸಂಸ್ಥೆಯು ಪ್ರತಿ ವರ್ಷ 250 ಪದವಿ ವಿದ್ಯಾರ್ಥಿಗಳಿಗೆ, 27 ಸ್ನಾತಕೋತ್ತರ ಪದವೀಧರರಿಗೆ ಸೂಪರ್ ಸ್ಪೆಷಾಲಿಟಿ ಫೆಲೋಶಿಪ್ ಕೋರ್ಸ್‌ಗಳಿವೆ. ಅರೆವೈದ್ಯಕೀಯ ಕೋರ್ಸ್‌ನ ವಿದ್ಯಾರ್ಥಿಗಳಿಗೆ ಹಾಗೂ ನರ್ಸಿಂಗ್ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.