ADVERTISEMENT

ನೇತ್ರದಾನಕ್ಕೆ ‘ಮಿಸ್ಡ್‌ ಕಾಲ್‌’ ಸೌಲಭ್ಯ

ಮೊಬೈಲ್‌ ನಂಬರ್‌ ಬಿಡುಗಡೆ ಮಾಡಿದ ಶಿವರಾಜ್‌ಕುಮಾರ್

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2021, 19:43 IST
Last Updated 29 ಡಿಸೆಂಬರ್ 2021, 19:43 IST
   

ಬೆಂಗಳೂರು: ‘ನೇತ್ರದಾನ ಮಾಡಲು ಇಚ್ಚಿಸುವವರು ಮಿಸ್ಡ್‌ ಕಾಲ್‌ (ಮೊಬೈಲ್‌ ಸಂಖ್ಯೆ– 8884018800) ನೀಡಿ ಹೆಸರು ನೋಂದಾಯಿಸಿಕೊಳ್ಳಬಹುದು’ ಎಂದು ನಾರಾಯಣ ನೇತ್ರಾಲಯದ ವ್ಯವಸ್ಥಾಪಕ ನಿರ್ದೇಶಕ ಡಾ.ಕೆ. ಭುಜಂಗ ಶೆಟ್ಟಿ ತಿಳಿಸಿದರು.

ನೇತ್ರದಾನದ ಹೆಸರು ನೋಂದಣಿಗೆಂದೇ ರಾಜ್‌ಕುಮಾರ್ ನೇತ್ರ ಬ್ಯಾಂಕ್‌ ಮತ್ತು ನಾರಾಯಣ ನೇತ್ರಾಲಯದ ವತಿಯಿಂದ ಆರಂಭಿಸಿದ ಮೊಬೈಲ್‌ ಸಂಖ್ಯೆಯನ್ನು ನಟರಾದ ಶಿವರಾಜ್‌ಕುಮಾರ್ ಮತ್ತು ರಾಘವೇಂದ್ರ ರಾಜ್‌ಕುಮಾರ್ ಬುಧವಾರ ಲೋಕಾರ್ಪಣೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಭುಜಂಗ ಶೆಟ್ಟಿ, ‘ನೇತ್ರದಾನಕ್ಕೆ ಹೆಸರು ನೋಂದಾಯಿಸುವ ಪ್ರಕ್ರಿಯೆ ಎಂದರೆ ಮೃತಪಟ್ಟ ಬಳಿಕ ಕಣ್ಣುಗಳನ್ನು ಬೇರೆಯವರಿಗೆ ದಾನ ಮಾಡುವ ಬಗ್ಗೆ ಔಪಚಾರಿಕ, ಸ್ವಯಂಪ್ರೇರಿತ ಒಪ್ಪಂದ. ಮಿಸ್ಡ್ ಕಾಲ್ ನೀಡಿದವರಿಗೆ ನೇತ್ರದಾನದ ಒಪ್ಪಂದದ ಅರ್ಜಿಯ ಲಿಂಕ್ ಕಳುಹಿಸಲಾಗುವುದು. ಅರ್ಜಿ ಭರ್ತಿ ಮಾಡಿ ಸಲ್ಲಿಸಿದ ದಾನಿಗಳಿಗೆ ನೇತ್ರದಾನ ಪ್ರತಿಜ್ಞೆ ಪ್ರಮಾಣಪತ್ರ ಮತ್ತು ನೇತ್ರದಾನದ ಕುರಿತ ಸೂಚನೆಗಳನ್ನು ಕಳುಹಿಸಲಾಗುವುದು.ನೇತ್ರದಾನ ಮಾಡಲು ಇಚ್ಚಿಸುವವರು ಎಲ್ಲೇ ಇದ್ದರೂ ಯಾವುದೇ ತೊಂದರೆಗಳಿಲ್ಲದೆ ಕಣ್ಣುಗಳನ್ನು ದಾನ ಮಾಡುವ ಪ್ರತಿಜ್ಞೆ ಮಾಡಲು ಈ ಸೌಲಭ್ಯ ಒದಗಿಸಲಾಗಿದೆ’ ಎಂದು ಹೇಳಿದರು.

ADVERTISEMENT

‘ಐದು ವರ್ಷಗಳಿಂದ ನಾರಾಯಣ ನೇತ್ರಾಲಯವು ನೇತ್ರದಾನ ಪ್ರತಿಜ್ಞೆ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದೆ. ಪುನೀತ್ ರಾಜ್‌ಕುಮಾರ್ ಅವರ ನೇತ್ರದಾನದ ನಂತರ ಈ ಬಗ್ಗೆ ದೊಡ್ಡ ಅಲೆಯೇ ಉಂಟಾಗಿದೆ. ಹೊಸ
ತಂತ್ರಜ್ಞಾನದಿಂದಾಗಿ ಪುನೀತ್ ಅವರ ಕಣ್ಣುಗಳನ್ನು ನಾಲ್ವರಿಗೆ ಅಳವಡಿಸಲಾಗಿದೆ. 2021ರ ನವೆಂಬರ್‌ನಲ್ಲಿ ದಾನಿಗಳಿಂದ 234 ಕಣ್ಣುಗಳನ್ನು ಸಂಗ್ರಹಿಸಲಾಗಿದೆ. ಡಿಸೆಂಬರ್ ತಿಂಗಳಲ್ಲಿ 27ನೇ ತಾರೀಕಿನವರೆಗೆ 209 ಕಣ್ಣುಗಳನ್ನು ಸಂಗ್ರಹಿಸಲಾಗಿದೆ.
ಈ ಹಿಂದೆ, ತಿಂಗಳಲ್ಲಿ ನೇತ್ರ ಬ್ಯಾಂಕ್‌ನಲ್ಲಿ ತಿಂಗಳಿಗೆ 100ರಿಂದ 200
ಜನ ಮಾತ್ರ ನೇತ್ರದಾನಕ್ಕೆ ಒಪ್ಪಂದ ಮಾಡಿಕೊಳ್ಳುತ್ತಿದ್ದರು. ಪ್ರಸಕ್ತ ತಿಂಗಳಿನಲ್ಲಿ ಈವರೆಗೆ ಎರಡು ಸಾವಿರಕ್ಕೂ ಹೆಚ್ಚು ಜನರು‌ ಕಣ್ಣುಗಳನ್ನು ದಾನ ಮಾಡಲು ಒಪ್ಪಂದ ಮಾಡಿಕೊಂಡಿದ್ದಾರೆ’ ಎಂದು ವಿವರಿಸಿದರು.

ರಾಘವೇಂದ್ರ ರಾಜ್‌ಕುಮಾರ್ ಮಾತನಾಡಿ, ‘ಪುನಿತ್ ರಾಜ್‌ಕುಮಾರ್‌ ಯಾವ ರೀತಿಯ ಸಮಾಜ ಸೇವೆ ಮಾಡಿದ್ದಾರೆ ಎಂಬುದು ಅವರ ನಿಧನದ ನಂತರ ಅರಿವಾಯಿತು. ಅವರ ಈ ರೀತಿಯ ಕಾರ್ಯದಿಂದಾಗಿ, ನಟನೆಗಿಂತ ಹೆಚ್ಚಾಗಿ ಸಮಾಜದಒಬ್ಬ ಆದರ್ಶ ವ್ಯಕ್ತಿಯನ್ನಾಗಿ ಅವರನ್ನು ನೋಡುವಂತಾಯಿತು’ ಎಂದರು.

‘ನೇತ್ರದಾನವನ್ನು ಜನಾಂದೋಲನವನ್ನಾಗಿ ಮಾಡಲುಭುಜಂಗ ಶೆಟ್ಟಿ ಪ್ರಯತ್ನಿಸುತ್ತಿದ್ದಾರೆ. ನಾನು ಕೂಡಎಲ್ಲ ರೀತಿಯ ನೆರವು ನೀಡುತ್ತೇನೆ. ಅವರು ಅಮೂಲ್ಯ ಸಂದೇಶಗಳನ್ನು ರಚಿಸಿ ಕೊಟ್ಟರೆ, ಮನೆಮತ್ತು ಕಚೇರಿಯಲ್ಲಿ ಅದನ್ನು ಪ್ರದರ್ಶಿಸಲಾಗುವುದು‘ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.