ADVERTISEMENT

ಬೊಮ್ಮನಹಳ್ಳಿ ಪೊಲೀಸ್‌ ಠಾಣೆ | ಕನ್ನಡಿಗರಿಗೆ ಅವಮಾನ: ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 18 ಜುಲೈ 2025, 13:47 IST
Last Updated 18 ಜುಲೈ 2025, 13:47 IST
ಮಿಥುನ್‌ ಸರ್ಕಾರ್‌ 
ಮಿಥುನ್‌ ಸರ್ಕಾರ್‌    

ಬೆಂಗಳೂರು: ಕರ್ನಾಟಕ ಹಾಗೂ ಕನ್ನಡಿಗರನ್ನು ಅವಮಾನಿಸಿದ ಆರೋಪದ ಅಡಿ ಪಶ್ಚಿಮ ಬಂಗಾಳದ ಮಿಥುನ್‌ ಸರ್ಕಾರ್‌ ಎಂಬಾತನನ್ನು ಬೊಮ್ಮನಹಳ್ಳಿ ಠಾಣೆಯ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಆರೋಪಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ಐದು ದಿನ ಕಸ್ಟಡಿಗೆ ಪಡೆದುಕೊಳ್ಳಲಾಗಿದೆ. ಆರೋಪಿ ಹೊಂಗಸಂದ್ರದಲ್ಲಿ ಮಸಾಜ್‌ ಥೆರಪಿಸ್ಟ್‌ ಆಗಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಕೆಟ್ಟ ಶಬ್ದಗಳಿಂದ ನಿಂದಿಸಿ ಕನ್ನಡಿಗರ ಭಾವನೆಗಳಿಗೆ ಧಕ್ಕೆ ಉಂಟುಮಾಡಿದ್ದಾನೆ. ಕನ್ನಡ ಹಾಗೂ ಇತರೆ ಭಾಷಿಕರ ನಡುವೆ ವೈಮನಸ್ಸು ಉಂಟುಮಾಡಿ, ದ್ವೇಷ ಭಾವನೆ ಮೂಡುವಂತೆ ಮಾತನಾಡಿದ್ದಾನೆ’ ಎಂದು ಆರೋಪಿಸಿ ರಂಜಿತ್‌ ಅವರು ದೂರು ನೀಡಿದ್ದರು.

ADVERTISEMENT

ದೂರಿನ ಜತೆಗೆ ಆಡಿಯೊ ತುಣುಕು ಹಾಗೂ ಆರೋಪಿಯ ವಿಳಾಸವನ್ನೂ ಡೆಲಿವರಿ ಎಕ್ಸಿಕ್ಯುಟಿವ್‌ ನೀಡಿದ್ದರು. ಆರೋಪಿಯ ಫೋನ್ ನಂಬರ್ ಆಧರಿಸಿ‌ ಆತನಿದ್ದ ಸ್ಥಳವನ್ನು ಪತ್ತೆಹಚ್ಚಿ, ವಶಕ್ಕೆ ಪಡೆದುಕೊಂಡು ಬಂಧಿಸಲಾಯಿತು ಎಂದು ಪೊಲೀಸರು ಹೇಳಿದರು.

ಮಿಥುನ್‌ ಸರ್ಕಾರ್‌ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ, ಕರ್ನಾಟಕ ರಕ್ಷಣಾ ವೇದಿಕೆಯ(ಪ್ರವೀಣ್ ಶೆಟ್ಟಿ ಬಣ) ಕಾರ್ಯಕರ್ತರು ಸಹ ಬೊಮ್ಮನಹಳ್ಳಿ ಠಾಣೆಗೆ ದೂರು ನೀಡಿದ್ದರು.

‘ಆರೋಪಿ ಮಿಥುನ್ ಸರ್ಕಾರ್ ಆರ್ಡರ್ ಮಾಡಿದ್ದ ಟಿ–ಶರ್ಟ್ ನೀಡಲು ಜುಲೈ 17ರಂದು ರಾತ್ರಿ 9.30ಕ್ಕೆ ಡೆಲಿವರಿ ಎಕ್ಸಿಕ್ಯೂಟಿವ್ ರಂಜಿತ್ ಅವರು ಬಂದಿದ್ದರು. ಆ ವೇಳೆ ಮಿಥುನ್‌ ಹಾಗೂ ರಂಜಿತ್‌ ನಡುವೆ ಗಲಾಟೆ ನಡೆದಿತ್ತು. ನಾವು ಶೇ 70ರಷ್ಟು ಹಿಂದಿಯವರು ಕರ್ನಾಟಕದಲ್ಲಿದ್ದೇವೆ. ನಿಮ್ಮದು ಅತಿಯಾಗಿದೆ. ನಾವು ಇಲ್ಲಿಂದ ಹೋದರೆ ಕನ್ನಡದವರಿಗೆ ಟೊಮೆಟೊ ಖರೀದಿಸುವುದಕ್ಕೂ ₹10 ಇರುವುದಿಲ್ಲ. ಬಂಗಾಳಿಗಳ ಮಾಡುವ ಊಟವನ್ನು ನೀವು ಕಲ್ಪಿಸಿಕೊಳ್ಳುವುದಕ್ಕೆ ಆಗುವುದಿಲ್ಲ. ನೀವು ರಾಗಿ ಮುದ್ದೆ, ಇಡ್ಲಿ, ದೋಸೆ, ವಾರಕ್ಕೆ ಒಮ್ಮೆ ಚಿಕನ್ ತಿನ್ನುತ್ತೀರಿ ಅಷ್ಟೇ. ನನ್ನ ಕಾಲ್ ರೆಕಾರ್ಡ್ ಮಾಡಿಕೋ... ನನ್ನ ಫೋನ್ ನಂಬರ್ ತೆಗೆದುಕೊ ಎಂಬುದಾಗಿ ಮಿಥುನ್‌ ಸರ್ಕಾರ್‌ ಧಮ್ಕಿ ಹಾಕಿದ್ದ’ ಎಂದು ಕನ್ನಡ ರಕ್ಷಣಾ ವೇದಿಕೆ ಸದಸ್ಯರು ಆರೋಪಿಸಿದ್ದರು.

ಕನ್ನಡಿಗರನ್ನು ಅವಮಾನಿಸಿದ ಆರೋಪಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಸದಸ್ಯರು ಪೊಲೀಸರಿಗೆ ಮನವಿ ಸಲ್ಲಿಸಿದರು  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.