ADVERTISEMENT

ಕೊಬ್ಬರಿ ಖರೀದಿ: ಅಕ್ರಮ ತಡೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2024, 16:10 IST
Last Updated 13 ಫೆಬ್ರುವರಿ 2024, 16:10 IST
ಕೊಬ್ಬರಿ
ಕೊಬ್ಬರಿ   

ಬೆಂಗಳೂರು: ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಯೋಜನೆಯಡಿ ಕೊಬ್ಬರಿ ಖರೀದಿಗೆ ರೈತರ ನೋಂದಣಿಯಲ್ಲಿನ ಅಕ್ರಮ ತಡೆಗೆ ಬಿಗಿಯಾದ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜೆಡಿಎಸ್‌ನ ಎಚ್‌.ಡಿ. ರೇವಣ್ಣ, ಸಿ.ಎನ್‌. ಬಾಲಕೃಷ್ಣ ಸೇರಿದಂತೆ ಹಲವು ಶಾಸಕರು ವಿಧಾನಸಭೆಯಲ್ಲಿ ಮಂಗಳವಾರ ಆಗ್ರಹಿಸಿದರು.

ಸದನದ ಕಲಾಪ ಆರಂಭವಾಗುತ್ತಿದ್ದಂತೆಯೇ ವಿಷಯ ಪ್ರಸ್ತಾಪಿಸಿದ ಬಾಲಕೃಷ್ಣ, ಕೊಬ್ಬರಿ ಖರೀದಿಗೆ ಸಂಬಂಧಿಸಿದಂತೆ ನಿಲುವಳಿ ಸೂಚನೆ ಮಂಡನೆಗೆ ಅವಕಾಶ ಕೋರಿದರು. ‘ಕೊಬ್ಬರಿ ಖರೀದಿಯಲ್ಲಿ ಭಾರಿ ಅಕ್ರಮ ನಡೆಯುತ್ತಿದೆ. ಅನಧಿಕೃತ ಉಪಕರಣಗಳನ್ನು ಬಳಸಿಕೊಂಡು ವರ್ತಕರ ಹೆಸರನ್ನು ರೈತರ ಪಟ್ಟಿಯಲ್ಲಿ ನೋಂದಣಿ ಮಾಡಲಾಗಿದೆ. ಇದರಿಂದ ರೈತರಿಗೆ ಅನ್ಯಾಯವಾಗಿದೆ’ ಎಂದರು.

‘ಕೊಬ್ಬರಿ ಖರೀದಿ ವಿಚಾರದಲ್ಲಿ ರಾಜ್ಯ ಸರ್ಕಾರ ಸರಿಯಾದ ತೀರ್ಮಾನ ಕೈಗೊಳ್ಳಬೇಕು. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ವಿಧಾನಸಭಾ ಚುನಾವಣೆಯಲ್ಲಿ ನೀಡಿದ್ದ ಭರವಸೆಯಂತೆ ಪ್ರತಿ ಕ್ವಿಂಟಲ್‌ಗೆ ₹15,000 ದರದಲ್ಲಿ ಕೊಬ್ಬರಿ ಖರೀದಿಸಬೇಕು’ ಎಂದು ಆಗ್ರಹಿಸಿದರು.

ADVERTISEMENT

ಕಾಂಗ್ರೆಸ್‌ನ ಕೆ.ಎಂ. ಶಿವಲಿಂಗೇಗೌಡ ಮಾತನಾಡಿ, ‘ಮಾರುಕಟ್ಟೆಯಲ್ಲಿ ಕೊಬ್ಬರಿ ದರ ಕ್ವಿಂಟಲ್‌ಗೆ ₹10,000 ಇದೆ. ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ₹12,000 ನಿಗದಿ ಮಾಡಲಾಗಿದೆ. ರಾಜ್ಯ ಸರ್ಕಾರ ಪ್ರತಿ ಕ್ವಿಂಟಲ್‌ಗೆ ₹1,500 ಪ್ರೋತ್ಸಾಹಧನ ನೀಡುತ್ತಿದೆ. ಕೇಂದ್ರ ಸರ್ಕಾರವನ್ನು ಮಾತ್ರ ಹೊಗಳಿದರೆ ಸಾಲದು, ರಾಜ್ಯ ಸರ್ಕಾರದ ಕೊಡುಗೆಯನ್ನೂ ಹೇಳಬೇಕು’ ಎಂದರು.

ಬಿಜೆಪಿಯ ಸುರೇಶ್‌ ಗೌಡ, ಎಚ್‌.ಕೆ. ಸುರೇಶ್‌, ಕಾಂಗ್ರೆಸ್‌ನ ಷಡಾಕ್ಷರಿ, ಜಿ.ಎಚ್‌. ಶ್ರೀನಿವಾಸ್‌ ಸೇರಿದಂತೆ ಹಲವು ಶಾಸಕರು ಕೊಬ್ಬರಿ ಖರೀದಿಯಲ್ಲಿನ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿದರು. ಕೊಬ್ಬರಿ ಕುರಿತು ವಿಷಯ ಪ್ರಸ್ತಾಪಿಸುವ ಪೈಪೋಟಿಯಲ್ಲಿ ಎಚ್‌.ಡಿ. ರೇವಣ್ಣ ಮತ್ತು ಶಿವಲಿಂಗೇಗೌಡ ಮಧ್ಯೆ ವಾಕ್ಸಮರವೂ ನಡೆಯಿತು.

ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವರಿಂದ ಬುಧವಾರ ಉತ್ತರ ಕೊಡಿಸುವುದಾಗಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.