ADVERTISEMENT

ಬೆಳಗಾವಿ ಅಧಿವೇಶನ | ಉದ್ಯಾನ ಜಮೀನು ಒತ್ತುವರಿ ತೆರವಿಗೆ ಶಾಸಕ ಮುನಿರತ್ನ ಆಗ್ರಹ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2023, 16:07 IST
Last Updated 12 ಡಿಸೆಂಬರ್ 2023, 16:07 IST
ಮುನಿರತ್ನ
ಮುನಿರತ್ನ   

ವಿಧಾನಸಭೆ: ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಪ್ರಭಾವಿ ವ್ಯಕ್ತಿಗಳ ಹೆಸರು ಬಳಸಿಕೊಂಡು ಉದ್ಯಾನಗಳ ಜಮೀನುಗಳನ್ನು ಕಬಳಿಸುತ್ತಿದ್ದು, ತಕ್ಷಣ ಒತ್ತುವರಿ ತೆರವು ಮಾಡಬೇಕು ಎಂದು ಬಿಜೆಪಿಯ ಮುನಿರತ್ನ ಆಗ್ರಹಿಸಿದರು.

ಕ್ಷೇತ್ರದ ವ್ಯಾಪ್ತಿಯ ಉದ್ಯಾನಗಳ ನಿರ್ವಹಣೆ ಮತ್ತು ಉದ್ಯಾನಗಳಿಗೆ ಮೀಸಲಿಟ್ಟ ಜಮೀನಿನ ವಿವರ ಕುರಿತ ಪ್ರಶ್ನೆಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಮಂಗಳವಾರ ಉತ್ತರಿಸಿದರು. ಆಗ, ಒತ್ತುವರಿ ವಿಷಯ ಪ್ರಸ್ತಾಪಿಸಿದ ಮುನಿರತ್ನ, ‘ನನ್ನ ಕ್ಷೇತ್ರದ ವಾರ್ಡ್‌ ಸಂಖ್ಯೆ 72ರ ವ್ಯಾಪ್ತಿಯ ಪ್ರಮೋದ್‌ ಬಡಾವಣೆಯಲ್ಲಿ 2 ಎಕರೆ ಉದ್ಯಾನ ಜಮೀನನ್ನು ಕೆಲವರು ಕಬಳಿಸಿದ್ದಾರೆ. ತೆರವು ಕಾರ್ಯಾಚರಣೆಗೆ ಹೋದರೆ ಪ್ರಭಾವಿ ವ್ಯಕ್ತಿಯ ಫೋಟೊ ತೋರಿಸುತ್ತಿದ್ದಾರೆ’ ಎಂದರು.

ಎರಡು ಎಕರೆ ಜಮೀನಿನಲ್ಲಿ ಉದ್ಯಾನ ನಿರ್ಮಾಣದ ಕಾಮಗಾರಿಗೆ ಸಿದ್ಧತೆ ನಡೆದಿತ್ತು. ದಿಢೀರನೆ ಕೆಲವರು ನ್ಯಾಯಾಲಯದ ಆದೇಶ ತೋರಿಸಿ ಜಮೀನು ಕಬಳಿಸಿದ್ದಾರೆ. ಇನ್ನೂ ಹಲವು ಉದ್ಯಾನಗಳ ಜಮೀನುಗಳನ್ನೂ ಒತ್ತುವರಿ ಮಾಡಲಾಗಿದೆ. ಕೆಲವು ಕಡೆಗಳಲ್ಲಿ ಉದ್ಯಾನ ಮತ್ತು ಆಟದ ಉಪಕರಣಗಳನ್ನು ಕಿತ್ತೊಗೆದು ಶೆಡ್‌ ಹಾಕಲಾಗಿದೆ ಎಂದು ದೂರಿದರು.

ADVERTISEMENT

ಉತ್ತರ ನೀಡಿದ ಶಿವಕುಮಾರ್‌, ‘ಉದ್ಯಾನಗಳು ಸೇರಿದಂತೆ ಯಾವುದೇ ವಿಧದ ಸರ್ಕಾರಿ ಜಮೀನುಗಳ ಒತ್ತುವರಿಗೆ ಅವಕಾಶ ನೀಡುವುದಿಲ್ಲ. ಪ್ರಕರಣದ ಸಮಗ್ರ ಮಾಹಿತಿಯನ್ನು ಹಂಚಿಕೊಂಡರೆ ಒತ್ತುವರಿದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.