ADVERTISEMENT

ಶಾಸಕ ಮುನಿರತ್ನ ವಿರುದ್ಧದ ಪ್ರಕರಣ: ಸಿಬಿಐಗೆ ನೋಟಿಸ್‌

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2019, 19:53 IST
Last Updated 6 ಮಾರ್ಚ್ 2019, 19:53 IST

ಬೆಂಗಳೂರು: ವಿಧಾನಸಭೆ ಚುನಾವಣೆ ವೇಳೆ ಅಪಾರ್ಟ್‌ಮೆಂಟ್‌ವೊಂದರಲ್ಲಿ ಮತದಾರರ ಚೀಟಿಗಳು ದೊರೆತ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಎಂ.ಮುನಿರತ್ನ ವಿರುದ್ಧದ ಪ್ರಕರಣದಲ್ಲಿ, ಸಿಬಿಐಗೆ ನೋಟಿಸ್ ಜಾರಿಗೊಳಿಸಲು ಹೈಕೋರ್ಟ್‌ ಆದೇಶಿಸಿದೆ.

‘ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು’ ಎಂದು ಕೋರಿ ದೂರುದಾರ ರಾಕೇಶ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

‘ಇದೇ 11ರಂದು ಸಿಬಿಐ ಪರ ವಕೀಲ ಪಿ.ಪ್ರಸನ್ನಕುಮಾರ ಅವರು ವಿಚಾರಣೆಗೆ ಹಾಜರಾಗಬೇಕು’ ಎಂದು ನಿರ್ದೇಶಿಸಿದ ನ್ಯಾಯಪೀಠ ಸಿಬಿಐಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿತು.

ADVERTISEMENT

ಪ್ರಕರಣದಲ್ಲಿ 5ನೇ ಪ್ರತಿವಾದಿಯಾಗಿರುವ ಶಾಸಕ ಮುನಿರತ್ನ ಅವರಿಗೂ ಇದೇ 8ರೊಳಗೆ ನೋಟಿಸ್ ಜಾರಿಗೊಳಿಸುವಂತೆ ಸಿಸಿಬಿ (ನಗರ ಕೇಂದ್ರ ವಿಭಾಗ) ಡಿಸಿಪಿಗೆ ಸೂಚಿಸಲಾಗಿದೆ.

‘ಒಂದೊಮ್ಮೆ ಕೋರ್ಟ್ ಆದೇಶ ಪಾಲನೆ ಮಾಡುವಲ್ಲಿ ವಿಫಲವಾದರೆ ಇದೇ 8ರಂದು ಡಿಸಿಪಿ ವಿಚಾರಣೆಗೆ ಹಾಜರಾಗಬೇಕು’ ಎಂದೂ ನ್ಯಾಯಪೀಠ ತಾಕೀತು ಮಾಡಿದೆ.

ಪ್ರಕರಣವೇನು?: ರಾಜ್ಯ ವಿಧಾನಸಭೆಗೆ 2018ರಲ್ಲಿ ಚುನಾವಣೆ ನಡೆದಿತ್ತು. ಈ ಸಂದರ್ಭದಲ್ಲಿ ಮೇ 8ರಂದು ಜಾಲಹಳ್ಳಿಯ ಎಸ್‌ಎಲ್‌ವಿ ಪಾರ್ಕ್ ವ್ಯೂ ಅಪಾರ್ಟ್‌ಮೆಂಟ್‌ನ ಫ್ಲ್ಯಾಟ್‌ನಲ್ಲಿ ಸುಮಾರು 9,564 ಮತದಾರರ ಚೀಟಿಗಳು ದೊರೆತಿದ್ದವು.

ಅಂತೆಯೇ ಮತದಾರರನ್ನು ನೋಂದಣಿ ಮಾಡಿಕೊಳ್ಳುವ ಫಾರಂ ನಂ-6, ಸಂಬಂಧಪಟ್ಟ ಪ್ರಾಧಿಕಾರಗಳ ಮೊಹರು ಹಾಗೂ ಸಹಿ ಇಲ್ಲದ 6,342 ಸ್ವೀಕೃತಿ ಪತ್ರ, ಶಾಸಕ ಮುನಿರತ್ನ ಅವರ ಕರಪತ್ರಗಳು, ಹೆಸರು ಹಾಗೂ ಫೋಟೋಗಳನ್ನು ಅಳವಡಿಸಿದ್ದ ನೀರಿನ ಕ್ಯಾನ್‌ಗಳು ಪತ್ತೆಯಾಗಿದ್ದವು.

ಈ ಕುರಿತು ಜಾಲಹಳ್ಳಿ ಠಾಣಾ ಪೊಲೀಸರಿಗೆ ದೂರು ನೀಡಲಾಗಿತ್ತು. ಆದರೆ, ‘ಜಾಲಹಳ್ಳಿ ಠಾಣಾ ಇನ್‌ಸ್ಪೆಕ್ಟರ್ ಸೂಕ್ತ ರೀತಿಯಲ್ಲಿ ತನಿಖೆ ನಡೆಸಿಲ್ಲ. ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಸೂಚನೆ ಹೊರತಾಗಿಯೂ ಮನಿರತ್ನ ಅವರನ್ನು ಬಂಧಿಸುವುದಾಗಲಿ ಅಥವಾ ಕೊರ್ಟ್‌ಗೆ ಹಾಜರುಪಡಿಸುವುದಾಗಲಿ ಮಾಡಿಲ್ಲ’ ಎಂಬುದು ಅರ್ಜಿದಾರರ ಆಕ್ಷೇಪ.

‘ಪ್ರಕರಣದ ತನಿಖಾಧಿಕಾರಿಯಾದ ಜಾಲಹಳ್ಳಿ ಠಾಣಾ ಇನ್ಸ್‌ಪೆಕ್ಟರ್ ಶಾಸಕ ಮುನಿರತ್ನ ಅವರನ್ನು ರಕ್ಷಿಸಲು ಪ್ರಯತ್ನಿಸಿದ್ದಾರೆ. ಆದ್ದರಿಂದ ಇದರ ತನಿಖೆಯನ್ನು ಸಿಬಿಐಗೆ ವಹಿಸಬೇಕು’ ಎಂದು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.