
ಬೆಂಗಳೂರು: ‘ಸ್ವಾರ್ಥ ಮನೋಭಾವ ತೊರೆದರೆ ಬಲಿಜ ಮತ್ತು ಬಣಜಿಗ ಸಮುದಾಯಗಳು ಒಂದಾಗಬಹುದು’ ಎಂದು ವಿಧಾನ ಪರಿಷತ್ ಸದಸ್ಯ ಎಂ.ಆರ್. ಸೀತಾರಾಂ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಂಗಳವಾರ ಆಯೋಜಿಸಿದ್ದ ಯೋಗಿನಾರೇಯಣ ಯತೀಂದ್ರರ ಜಯಂತಿ (ಕೈವಾರ ತಾತಯ್ಯ) ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಸಮಾಜಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸಬೇಕು. ಸಮುದಾಯದಲ್ಲಿ ಬಡವರು, ಶ್ರೀಮಂತರು ಇರುವುದು ಸಹಜ. ಸಣ್ಣ ಸಮುದಾಯಗಳನ್ನು ಜತೆಯಲ್ಲಿ ಕೊಂಡೊಯ್ಯಬೇಕು. ಉಳ್ಳವರು ಇಲ್ಲದವರಿಗೆ ತಮ್ಮ ಕೈಲಾದಷ್ಟು ಸಹಾಯ ಮಾಡಬೇಕು’ ಎಂದು ಕರೆ ನೀಡಿದರು.
‘ಕೋಲಾರ, ಚಿಕ್ಕಬಳ್ಳಾಪುರದ ಜನರಿಗೆ ತಾತಯ್ಯ ಅವರ ಮೇಲೆ ಅಪಾರ ನಂಬಿಕೆ. ತಾತಯ್ಯ ಎಲ್ಲರಿಗೂ ಆದರ್ಶ ಪ್ರಾಯರು. ಅವರ ತತ್ವ ಮತ್ತು ಆದರ್ಶಗಳನ್ನು ಪಾಲಿಸಬೇಕು. ಮುಂದಿನ ವರ್ಷ ತಾತಯ್ಯ ಅವರ 301ನೇ ಜಯಂತಿಯನ್ನು ಅದ್ದೂರಿಯಾಗಿ ಆಚರಿಸೋಣ’ ಎಂದರು.
ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಎನ್.ಸಂಪಂಗಿ ಮಾತನಾಡಿ, ‘ಬಲಿಜ ಸಮುದಾಯ ರಾಜಕೀಯವಾಗಿ ಬೆಳೆಯಬೇಕು. ಪರಸ್ಪರ ಭಿನ್ನಾಭಿಪ್ರಾಯ ಮರೆತು ಸಮುದಾಯದ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕು ‘ ಎಂದರು.
ಉಪನ್ಯಾಸ ನೀಡಿದ ಕೈವಾರದ ಬಾಲಕೃಷ್ಣ ಭಾಗವತರ್, ‘ದ್ವೇಷ, ಅಸೂಯೆಯಿಂದ ಏನೂ ಸಾಧಿಸಲು ಆಗುವುದಿಲ್ಲ. ಯಾವುದೇ ತಾರತಮ್ಯ ಮಾಡದೇ ಎಲ್ಲರನ್ನೂ ನಮ್ಮವರು ಎಂದು ಅಪ್ಪಿಕೊಂಡು ಸಾಗಬೇಕು. ಸಮಾಜಕ್ಕೆ ಕೊಡುಗೆ ನೀಡಿದವರನ್ನು ಸ್ಮರಿಸಿಕೊಳ್ಳಬೇಕು’ ಎಂದು ನುಡಿದರು.
ಸಂಸದ ಪಿ.ಸಿ.ಮೋಹನ್, ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಪದ್ಮಾವತಿ, ವಕೀಲ ಅಶ್ವಥ್ ನಾರಾಯಣ, ಸಮುದಾಯದ ಮಮತಾ ದೇವರಾಜ, ರಾಮಲಿಂಗಪ್ಪ, ಶ್ರೀರಾಮುಲು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಬಿ.ಎಸ್.ಮಂಜುನಾಥಸ್ವಾಮಿ ಇದ್ದರು.