ADVERTISEMENT

ನಾಗರಿಕ ಸೌಲಭ್ಯಕ್ಕೆ ಬೆಂಗಳೂರಿಗರಿಗೆ ಪ್ರತ್ಯೇಕ ಮೊಬೈಲ್‌ ಆ್ಯಪ್‌: ಸಿ.ಎಂ

ಶಿವನಗರ ಮೇಲ್ಸೇತುವೆ ಉದ್ಘಾಟನೆ: ₹71.98 ಕೋಟಿ ವೆಚ್ಚದಲ್ಲಿ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2021, 16:12 IST
Last Updated 4 ಅಕ್ಟೋಬರ್ 2021, 16:12 IST
ಶಿವನಗರದಲ್ಲಿ ನಿರ್ಮಿಸಿರುವ ‘ಇಂಟಿಗ್ರೇಟೆಡ್‌ ಮೇಲ್ಸೇತುವೆ’ಯನ್ನು ಸೋಮವಾರ ಲೋಕಾರ್ಪಣೆ ಮಾಡುವ ಮುನ್ನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗೋಪೂಜೆ ನೆರವೇರಿಸಿದರು. ಶಾಸಕ ಸುರೇಶ್ ಕುಮಾರ್, ಸಚಿವ ವಿ. ಸೋಮಣ್ಣ ಇದ್ದರು– ಪ್ರಜಾವಾಣಿ ಚಿತ್ರ
ಶಿವನಗರದಲ್ಲಿ ನಿರ್ಮಿಸಿರುವ ‘ಇಂಟಿಗ್ರೇಟೆಡ್‌ ಮೇಲ್ಸೇತುವೆ’ಯನ್ನು ಸೋಮವಾರ ಲೋಕಾರ್ಪಣೆ ಮಾಡುವ ಮುನ್ನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗೋಪೂಜೆ ನೆರವೇರಿಸಿದರು. ಶಾಸಕ ಸುರೇಶ್ ಕುಮಾರ್, ಸಚಿವ ವಿ. ಸೋಮಣ್ಣ ಇದ್ದರು– ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ನಗರದ ಎಲ್ಲ 28 ವಿಧಾನಸಭಾ ಕ್ಷೇತ್ರಗಳಲ್ಲಿ ಸರ್ಕಾರದ ಸೇವೆಗಳು ಸುಗಮವಾಗಿ ಮೊಬೈಲ್‌ನಲ್ಲೇ ಲಭ್ಯವಾಗುವಂತೆ ಶೀಘ್ರ ಆ್ಯಪ್‌ ಅನಾವರಣಗೊಳಿಸಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ರಾಜಾಜಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಶಿವನಗರ 1 ಮತ್ತು 8ನೇ ಮುಖ್ಯ ರಸ್ತೆಯ ಕೂಡು ಸ್ಥಳದಲ್ಲಿ ನಿರ್ಮಿಸಿರುವ ‘ಇಂಟಿಗ್ರೇಟೆಡ್‌ ಮೇಲ್ಸೇತುವೆ’ ಉದ್ಘಾಟಿಸಿ ಮಾತನಾಡಿದ ಅವರು, ‘ಯೋಜನಾ ಬದ್ಧವಾಗಿ ಮತ್ತು ಸಮಗ್ರವಾಗಿ ಬೆಂಗಳೂರು ಅಭಿವೃದ್ಧಿ ಹೊಂದಬೇಕು. ಆದರೆ, ವಿವಿಧ ಇಲಾಖೆಗಳ ಸಮನ್ವಯದ ಕೊರತೆಯಿಂದ ಯೋಜನೆಗಳು ಸಂಯೋಜಿತ ವಿಧಾನದಲ್ಲಿ ಅನುಷ್ಠಾನಗೊಳ್ಳುತ್ತಿಲ್ಲ’ ಎಂದು ಹೇಳಿದರು.

‘ಜನರಿಗೆ ಅಂತರರಾಷ್ಟ್ರೀಯ ಮಟ್ಟದ ಸೌಲಭ್ಯಗಳನ್ನು ಕಲ್ಪಿಸಬೇಕಾದರೆ ನಗರ ಯೋಜನೆಯ ದೃಷ್ಟಿಕೋನ ಬದಲಾಗುವುದು ಅಗತ್ಯವಿದೆ. ಜನರ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು. ಕೇವಲ ಹವಾನಿಯಂತ್ರಿತ ಕೊಠಡಿಗಳಲ್ಲಿ ಕುಳಿತು ಯೋಜನೆಗಳನ್ನು ರೂಪಿಸಿದರೆ ಪ್ರಯೋಜನವಾಗುವುದಿಲ್ಲ’ ಎಂದರು.

ADVERTISEMENT

‘ಮೈಸೂರು ಸ್ಯಾಂಡಲ್‌ ಸಾಬೂನು ಕಾರ್ಖಾನೆಯಿಂದ ಮೈಸೂರು ರಸ್ತೆಯವರೆಗೆ ಸಿಗ್ನಲ್‌ ರಹಿತ ರಸ್ತೆಯ ಅಗತ್ಯವಿದೆ. ಈ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಲಾಗುವುದು. ಬಸವೇಶ್ವರ ಮೇಲ್ಸೇತುವೆ ಮಾರ್ಗದಲ್ಲಿ ಒಂದೇ ಪಥವಿದೆ. ಇದನ್ನು ದ್ವಿಪಥವನ್ನಾಗಿ ಬದಲಾಯಿಸಲಾಗುವುದು. ಈ ಬಗ್ಗೆ ಒಂದು ವಾರದಲ್ಲಿ ಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ವಿವರಿಸಿದರು.

ಶಾಸಕ ಎಸ್‌. ಸುರೇಶ್‌ ಕುಮಾರ್‌ ಮಾತನಾಡಿ, ’ಮೊದಲು ಇದೇ ಸ್ಥಳದಲ್ಲಿ ಕೆಳಸೇತುವೆ ನಿರ್ಮಿಸಲು ಉದ್ದೇಶಿಸಲಾಗಿತ್ತು. ಆದರೆ, ಸ್ಥಳೀಯರ ಅಭಿಪ್ರಾಯದ ಮೇರೆಗೆ ಸರ್ಕಾರದ ಅನುಮೋದನೆ ಪಡೆದು ಇಂಟಿಗ್ರೇಟೆಡ್‌ ಮೇಲ್ಸೇತುವೆ ನಿರ್ಮಿಸಲಾಯಿತು. ಹೀಗಾಗಿ, ಯೋಜನೆಯಲ್ಲಿ ಬದಲಾವಣೆ ಮತ್ತು ಕೋವಿಡ್‌–19 ಕಾರಣಕ್ಕೆ ಮೇಲ್ಸೇತುವೆ ಕಾಮಗಾರಿ ವಿಳಂಬವಾಯಿತು’ ಎಂದು ವಿವರಿಸಿದರು.

ಸಚಿವರಾದ ವಿ. ಸೋಮಣ್ಣ, ಕೆ. ಗೋಪಾಲಯ್ಯ, ಸಂಸದ ಪಿ.ಸಿ. ಮೋಹನ್‌, ರಾಜ್ಯಸಭೆ ಸದಸ್ಯ ಎಲ್‌. ಹನುಮಂತಯ್ಯ, ಕಾಂಗ್ರೆಸ್‌ ಮುಖಂಡರಾದ ಜಿ. ಪದ್ಮಾವತಿ, ಬಿಬಿಎಂಪಿ ಮಾಜಿ ಸದಸ್ಯೆ ಮಂಜುಳಾ ವಿಜಯಕುಮಾರ್‌, ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.