ಪ್ರೆಸ್‌ಕ್ಲಬ್ ಆವರಣದಲ್ಲಿ ಆಯೋಜಿಸಿದ್ದ ಮಕ್ಕಳ ಜಾತ್ರೆಯ ಸ್ಪರ್ಧೆಯೊಂದರಲ್ಲಿ ಚಿಣ್ಣರು ಪಾಲ್ಗೊಂಡಿದ್ದರು
ಪ್ರಜಾವಾಣಿ ಚಿತ್ರ
ಬೆಂಗಳೂರು: ‘ಮನೆಯೇ ಮೊದಲ ಶಾಲೆ ಎನ್ನುವುದು ಹೋಗಿ, ಮೊಬೈಲೇ ಮೊದಲ ಶಾಲೆಯಂತಾಗಿದೆ’ ಎಂದು ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಆತಂಕ ವ್ಯಕ್ತಪಡಿಸಿದರು.
ಪ್ರೆಸ್‌ಕ್ಲಬ್ ಆಫ್ ಬೆಂಗಳೂರು ಹಾಗೂ ಜವಾಹರ್ ಬಾಲಭವನದ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ಮಕ್ಕಳ ಜಾತ್ರೆ ಸಾಂಸ್ಕೃತಿಕ ಹಬ್ಬಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘ನಗರಗಳಲ್ಲಿ ಇರುವ ಮಕ್ಕಳು ಮಣ್ಣಿನಿಂದ ಬೇರ್ಪಟ್ಟು, ನೆಲದ ಆಟ ಪಾಠಗಳಿಂದ ದೂರವಾಗಿದ್ದಾರೆ. ವೃದ್ದಾಶ್ರಮಗಳು ಹೆಚ್ಚಾಗುತ್ತಿದ್ದು ಅಜ್ಜ-ಅಜ್ಜಿಯರ ಕತೆಗಳಿಂದ ಮಕ್ಕಳು ವಂಚಿತರಾಗುತ್ತಿದ್ದಾರೆ. ತಮ್ಮ ಆಟದ ಸಾಮಾನುಗಳನ್ನು ತಾವೇ ಸೃಷ್ಟಿಸಿಕೊಳ್ಳುವ ಕ್ರಿಯಾಶೀಲತೆ ಮಕ್ಕಳಲ್ಲಿ ಕಾಣೆಯಾಗುತ್ತಿದ್ದು, ಪ್ಲಾಸ್ಟಿಕ್ ಹಾಗೂ ಬ್ಯಾಟರಿ ಚಾಲಿತ ಆಟದ ಸಾಮಾನುಗಳ ಸಹವಾಸದಿಂದಾಗಿ ಮನೋಲೋಕ ಹಿಗ್ಗುವ ಬದಲು ಕುಗ್ಗುತ್ತಿದೆ’ ಎಂದರು.
‘ಮಕ್ಕಳ ತಲೆಯೊಳಗೆ ರಾಗಿ ರೊಟ್ಟಿಯ ಬದಲಿಗೆ ಬರ್ಗರ್, ಜೋಳದ ರೊಟ್ಟಿಯ ಬದಲಿಗೆ ಪಿಜ್ಜಾ, ಮುದ್ದೆಯ ಬದಲಿಗೆ ಪಾಸ್ತಾ, ಡೋನಟ್ ತುಂಬಿದ್ದು ಕೂಡ ಕೆಟ್ಟ ಪ್ರವೃತ್ತಿ. ಇದನ್ನು ಆಳವಾಗಿ ಮತ್ತು ಗಂಭೀರವಾಗಿ ಯೋಚಿಸುವ ಅಗತ್ಯವಿದೆ. ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಇದನ್ನು ಮನಗಂಡಿದ್ದರು. ಮಕ್ಕಳ ದೃಷ್ಟಿಕೋನದಲ್ಲಿ ದೇಶದ ಅಭಿವೃದ್ಧಿ ಮತ್ತು ಪ್ರಗತಿಯ ನೀಲನಕ್ಷೆಯನ್ನು ನೆಹರೂ ಸಿದ್ದಪಡಿಸಿದ್ದರು. ಈ ನೀಲನಕ್ಷೆಯ ಭಾಗವೇ ಬಾಲ ಭವನ’ ಎಂದು ಹೇಳಿದರು.
‘ಕುಟುಂಬ, ಸಮಾಜ, ಸ್ನೇಹಿತರಿಂದ ಬೇರ್ಪಡಿಸುವ ವಿಡಿಯೊ ಗೇಮ್‌ಗಳು ಹಿಂಸಾತ್ಮಕ ಮನೋಭಾವ, ಕೋಪ, ಅಸಹನೆ, ಆಕ್ರಮಣಶೀಲತೆಯನ್ನು ಬೆಳೆಸುತ್ತವೆ. ಇಂತಹ ಮನಃಸ್ಥಿತಿಯ ಮಕ್ಕಳು ಭವಿಷ್ಯದಲ್ಲಿ ಯಾವ ರೀತಿ ರೂಪುಗೊಳ್ಳಬಹುದು? ಪ್ರೌಢಶಾಲಾ ಹಂತದಲ್ಲಿಯೇ ರ್‍ಯಾಗಿಂಗ್ ಪಿಡುಗು ಹೆಚ್ಚಾಗುತ್ತಿರುವುದಕ್ಕೆ ಕಾರಣ ಏನು ಎನ್ನುವುದನ್ನು ನಾವು ಆಲೋಚಿಸಬೇಕಿದೆ’ ಎಂದರು.
ನಟ ಅರುಣ್ ಸಾಗರ್ ಮತ್ತು ಅವರ ಪತ್ನಿ ಮೀರಾ, ಬಾಲ ಭವನದ ಅಧ್ಯಕ್ಷ ಬಿ.ಆರ್.ನಾಯ್ಡು, ಪ್ರೆಸ್‌ಕ್ಲಬ್ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.