ADVERTISEMENT

ಪರಪ್ಪನ ಅಗ್ರಹಾರ: ಮೊಬೈಲ್‌, ಸಿಮ್‌ ಪತ್ತೆ; ಜೈಲು ಅಧಿಕಾರಿಗಳಿಂದ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2025, 16:15 IST
Last Updated 27 ನವೆಂಬರ್ 2025, 16:15 IST
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ 
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ    

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಗಳು ಹಾಗೂ ಸಜಾ ಬಂದಿಗಳಿರುವ ವಿವಿಧ ಬ್ಯಾರಕ್‌ಗಳಲ್ಲಿ ಜೈಲಿನ ಸಿಬ್ಬಂದಿ ಬುಧವಾರ ರಾತ್ರಿ ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿದರು. ಈ ವೇಳೆ ಮೊಬೈಲ್ ಹಾಗೂ ನಗದು ಪತ್ತೆಯಾಗಿದೆ.

ಪರಿಶೀಲನೆಯ ವೇಳೆ ನಾಲ್ಕು ಮೊಬೈಲ್‌ ಫೋನ್‌ಗಳು, ಐದು ಸಿಮ್‌ ಕಾರ್ಡ್‌ಗಳು, ಒಂದು ಚಾರ್ಜರ್‌ ಹಾಗೂ ₹15,880 ನಗದು ಪತ್ತೆಯಾಗಿದೆ. ಅವುಗಳನ್ನು ಜಪ್ತಿ ಮಾಡಲಾಗಿದೆ ಎಂದು ಕೇಂದ್ರ ಕಾರಾಗೃಹದ ಮೂಲಗಳು ತಿಳಿಸಿವೆ.

ಜೈಲಿನ ಸಹಾಯಕ ಸೂಪರಿಂಟೆಂಡೆಂಟ್ ಶಿವಾನಂದ ಶಿವಾಪುರ ಅವರ ನೇತೃತ್ವದ ತಂಡವು ಅಂದು ರಾತ್ರಿ 7.20ರಿಂದ ರಾತ್ರಿ 7.50ರ ವರೆಗೆ ಹಾಗೂ ಜೈಲರ್‌ ಎಚ್.ಎನ್‌.ಅಭಿಷೇಕ್‌ ನೇತೃತ್ವದ ತಂಡವು ಅಂದೇ ರಾತ್ರಿ 10.50ರಿಂದ 11.20ರ ವರೆಗೆ ವಿವಿಧ ಬ್ಯಾರಕ್‌ಗಳಿಗೆ ಭೇಟಿ ನೀಡಿ ಪರಿಶೀಲಿಸಿತು.

ADVERTISEMENT

ನಿಷೇಧಿತ ವಸ್ತುಗಳನ್ನು ಸಾಗಿಸಿದವರು, ಕೃತ್ಯಕ್ಕೆ ಸಹಕಾರ ನೀಡಿದವರು ಹಾಗೂ ನಿಷೇಧಿತ ವಸ್ತುಗಳನ್ನು ಕಾರಾಗೃಹದಲ್ಲಿ ಉಪಯೋಗಿಸಿದವರ ವಿರುದ್ಧ ಕಾರಾಗೃಹ (ತಿದ್ದುಪಡಿ) ಅಧಿನಿಯಮ–2022ರ ಕಲಂ 42ರ ಅನ್ವಯ ಪ್ರಕರಣ ದಾಖಲಿಸಿಕೊಂಡು ಕ್ರಮ ಜರುಗಿಸಲು ಪರಪ್ಪನ ಅಗ್ರಹಾರ ಠಾಣೆಗೆ ದೂರು ನೀಡಲಾಗಿದೆ. ದೂರು ಮೇರೆಗೆ ಎಫ್ಐಆರ್ ದಾಖಲಾಗಿದೆ ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.