
ಬೆಂಗಳೂರು: ಬಿಎಂಟಿಸಿ ಬಸ್ ಪ್ರಯಾಣಿಕರ ಗಮನ ಬೇರೆಡೆ ಸೆಳೆದು ಮೊಬೈಲ್ ಕಳವು ಮಾಡುತ್ತಿದ್ದ ಆಂಧ್ರಪ್ರದೇಶದ ಮೂವರು ಆರೋಪಿಗಳನ್ನು ಉಪ್ಪಾರಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ನಾಗನೂರಿ ಕುಮಾರ್(23) ಮತ್ತು ಅನಂತಪುರ ಜಿಲ್ಲೆಯ ಪರಶುರಾಮ್ ಅಲಿಯಾಸ್ ಅಭಿ(21) ಹಾಗೂ ಮತ್ತೊಬ್ಬ ಬಾಲಕನನ್ನು ಬಂಧಿಸಲಾಗಿದೆ. ಬಾಲಕನನ್ನು ಬಾಲಮಂದರಿಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ಹೇಳಿದರು.
‘ಆರೋಪಿಗಳಿಂದ, ₹22.40 ಲಕ್ಷದ 176 ಮೊಬೈಲ್‌ಗಳು ಮತ್ತು ಒಂದು ಕಾರು ಜಪ್ತಿ ಮಾಡಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.
ಆಂಧ್ರಪ್ರದೇಶದಿಂದ ಕಾರಿನಲ್ಲಿ ನಗರದ ಹೊರವಲಯಕ್ಕೆ ಆರೋಪಿಗಳು ಬರುತ್ತಿದ್ದರು. ಬಳಿಕ, ಬಿಎಂಟಿಸಿ ಬಸ್‌ಗಳಲ್ಲಿ ಪ್ರಯಾಣಿಕರ ಸೋಗಿನಲ್ಲಿ ಪ್ರಯಾಣಿಸುತ್ತಿದ್ದರು. ಪ್ರಯಾಣಿಕರ ಗಮನ ಬೇರೆಡೆ ಸೆಳೆದು ಪ್ರಯಾಣಿಕರ ಜೇಬಿನಲ್ಲಿದ್ದ ಮೊಬೈಲ್ ಕದ್ದು ಪರಾರಿ ಆಗುತ್ತಿದ್ದರು. ಕೃತ್ಯ ಎಸಗಲು ಮೆಜೆಸ್ಟಿಕ್ ಹಾಗೂ ಹೆಚ್ಚು ಪ್ರಯಾಣಿಕರು ಇರುವ ನಿಲ್ದಾಣಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದರು ಎಂದು ಪೊಲೀಸರು ಹೇಳಿದರು.
ಕಡಿಮೆ ಬೆಲೆಗೆ ಮಾರಾಟ:
‘ಬಂಧಿತರು ಕಳವು ಮೊಬೈಲ್‌ಗಳನ್ನು ಆಂಧ್ರಪ್ರದೇಶಕ್ಕೆ ಕೊಂಡೊಯ್ದು ಅಲ್ಲಿ ಫ್ಲ್ಯಾಶ್ ಮಾಡಿಸಿ ಕಡಿಮೆ ಮೊತ್ತಕ್ಕೆ ಮಾರಾಟ ಮಾಡುತ್ತಿದ್ದರು’ ಎಂದು ಪೊಲೀಸರು ಹೇಳಿದರು.
ಇತ್ತೀಚೆಗೆ ಶಿವಮೊಗ್ಗದಿಂದ ರೈಲಿನಲ್ಲಿ ಬಂದಿದ್ದ ವ್ಯಕ್ತಿಯೊಬ್ಬರು ಸಂಗೊಳ್ಳಿ ರಾಯಣ್ಣ ನಿಲ್ದಾಣದಲ್ಲಿ ಇಳಿದಿದ್ದರು. ಅಲ್ಲಿಂದ ಮೆಜೆಸ್ಟಿಕ್‌ಗೆ ಬಂದಿದ್ದರು. ಅಲ್ಲಿಂದ ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಅವರ ಮೊಬೈಲ್ ಕಳ್ಳತನ ಮಾಡಲಾಗಿತ್ತು. ಅವರು ನೀಡಿದ ದೂರು ಆಧರಿಸಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.