ಬೆಂಗಳೂರು: ನಗರದ ವಿವಿಧ ರೈಲು ನಿಲ್ದಾಣಗಳಿಂದ ಹೊರಡುವ ವಂದೇ ಭಾರತ್ ಹಾಗೂ ವಿಶೇಷ ರೈಲುಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರ ಮೊಬೈಲ್ ಫೋನ್‌ಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ನಗರ ರೈಲ್ವೆ ಪೊಲೀಸರು ಬಂಧಿಸಿದ್ದಾರೆ.
ಪಶ್ಚಿಮ ಬಂಗಾಳದ ಸೂರಜ್ ಪಾಸ್ವಾನ್ ಬಂಧಿತ. ಆರೋಪಿಯಿಂದ ₹28 ಲಕ್ಷ ಮೌಲ್ಯದ ವಿವಿಧ ಮಾದರಿಯ ಮೊಬೈಲ್ ಫೋನ್‌ಗಳನ್ನು ಜಪ್ತಿ ಮಾಡಲಾಗಿದೆ ಎಂದು ರೈಲ್ವೆ ಪೊಲೀಸರು ಹೇಳಿದರು.
ರಾಜಾಜಿನಗರದ ಕೆಎಲ್‌ಇ ಕಾಲೇಜಿನ ಕಚೇರಿ ಅಧೀಕ್ಷಕ ಸಿದ್ದಲಿಂಗಪ್ಪ ಅವರು ನೀಡಿದ ದೂರು ಆಧರಿಸಿ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
‘ಜುಲೈ 2ರಂದು ಸಿದ್ದಲಿಂಗಪ್ಪ ಅವರು ತಮ್ಮ ಅಳಿಯ ಸಂಗಮೇಶ್ ಅವರೊಂದಿಗೆ ನಗರ ರೈಲು ನಿಲ್ದಾಣಕ್ಕೆ ಬಂದಿದ್ದರು. ಅಂದು ಸಂಜೆ 6.40ರ ಸುಮಾರಿಗೆ ಗೋಲಗುಂಬಜ್ ಎಕ್ಸ್‌ಪ್ರೆಸ್ ರೈಲಿಗೆ ಜನಸಂದಣಿ ನಡುವೆ ಹತ್ತುವಾಗ ಅವರ ಜೇಬಿನಲ್ಲಿದ್ದ ₹61 ಸಾವಿರ ಮೌಲ್ಯದ ಆ್ಯಪಲ್ ಐ ಫೋನ್ ಕಳವು ನಡೆದಿತ್ತು’ ಎಂದು ರೈಲ್ವೆ ಪೊಲೀಸರು ಹೇಳಿದರು.
‘ನಗರದ ರೈಲ್ವೆ ನಿಲ್ದಾಣಗಳಲ್ಲಿ ಇತ್ತೀಚೆಗೆ ಮೊಬೈಲ್ ಕಳ್ಳತನ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿರುವ ಬಗ್ಗೆ ದೂರುಗಳು ಬಂದಿದ್ದವು. ರೈಲ್ವೆ ಎಸ್‌ಪಿ ಎಸ್.ಕೆ.ಸೌಮ್ಯಲತಾ ಅವರು ವಿಶೇಷ ತಂಡ ರಚಿಸಿ ಕಾರ್ಯಾಚರಣೆಗೆ ಸೂಚನೆ ನೀಡಿದ್ದರು. ವಿಶೇಷ ತಂಡವು ಜುಲೈ 9ರಂದು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ದುಬಾರಿ ಬೆಲೆಯ ಮೊಬೈಲ್‌ಗಳನ್ನು ಕಳ್ಳತನ ಮಾಡುತ್ತಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ’ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.